ಎಸೆಸೆಲ್ಸಿ ಫಲಿತಾಂಶ: 18ನೇ ಸ್ಥಾನಕ್ಕೆ ಜಾರಿದ ಉಡುಪಿ ಜಿಲ್ಲೆ

ಜಿಲ್ಲೆಯ 47 ಶಾಲೆಗಳಿಗೆ ಶೇ.100 ಫಲಿತಾಂಶ

Update: 2023-05-08 13:43 GMT

ಉಡುಪಿ, ಮೇ 8: ಇಂದು ಪ್ರಕಟಗೊಂಡ 2023ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಶೇ.89.33 ಫಲಿತಾಂಶದೊಂದಿಗೆ 18ನೇ ಸ್ಥಾನಕ್ಕೆ ಜಾರಿದೆ. 25 ವರ್ಷಗಳ ಹಿಂದೆ ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಪಡೆದ ಅತ್ಯಂತ ಕಳಪೆ ಫಲಿತಾಂಶ ಇದಾಗಿದೆ. ಕೂದಲೆಳೆ ಅಂತರದಿಂದ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡವನ್ನು 19ನೇ ಸ್ಥಾನಕ್ಕೆ ತೃಪ್ತಿ ಪಡುವಂತೆ ಮಾಡಿದೆ.

ಈ ಬಾರಿ ಪರೀಕ್ಷೆ ಬರೆದ 12,980 ರೆಗ್ಯೂಲರ್ ವಿದ್ಯಾರ್ಥಿಗಳಲ್ಲಿ 11,595 ವಿದ್ಯಾರ್ಥಿಗಳು ತೇರ್ಗಡೆಗೊಂಡಿ ದ್ದಾರೆ. 6637 ಬಾಲಕರಲ್ಲಿ 5693 ಮಂದಿ ತೇರ್ಗಡೆಗೊಂಡಿದ್ದರೆ, 6343 ಬಾಲಕಿಯರಲ್ಲಿ 5902 ಮಂದಿ ಉತ್ತೀರ್ಣರಾಗಿದ್ದಾರೆ.

ಉಳಿದಂತೆ ಪರೀಕ್ಷೆ ಬರೆದ 443 ರೆಗ್ಯೂಲರ್ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 98 ಮಂದಿ (ಶೇ.22.12) ಉತ್ತೀರ್ಣರಾದರೆ, 157 ಮಂದಿ ಖಾಸಗಿ ವಿದ್ಯಾರ್ಥಿಗಳಲ್ಲಿ ಕೇವಲ 17 ಮಂದಿ (ಶೇ.10.83) ತೇರ್ಗಡೆ ಗೊಂಡಿದ್ದಾರೆ. ಪರೀಕ್ಷೆಗೆ ಕುಳಿತ 53 ಮಂದಿ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಒಬ್ಬರು (ಶೇ.1.89) ಮಾತ್ರ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈ ವರ್ಷ ಪರೀಕ್ಷೆಗೆ ಕುಳಿತ ಒಟ್ಟು 13633 ಮಂದಿಯಲ್ಲಿ 11,711 ಮಂದಿ ಪಾಸಾಗಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಒಟ್ಟು 47 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ ಎಂದು ಡಿಡಿಪಿಐ ಗಣಪತಿ ತಿಳಿಸಿದ್ದಾರೆ. ಇವುಗಳಲ್ಲಿ 12 ಸರಕಾರಿ ಶಾಲೆಗಳಾದರೆ, 7 ಶಾಲೆಗಳು ಅನುದಾನಿತ ಪ್ರಾಥಮಿಕ ಶಾಲೆಗಳು. ಉಳಿದಂತೆ 28 ಅನುದಾನ ರಹಿತ ಶಾಲೆಗಳು ಸಹ ಶೇ.100 ಫಲಿತಾಂಶ ದಾಖಲಿಸಿವೆ ಎಂದವರು ವಿವರಿಸಿದರು.

624 ಅಂಕ ಜಿಲ್ಲೆಗೆ ಗರಿಷ್ಠ: ಜಿಲ್ಲೆಯಲ್ಲಿ ಗರಿಷ್ಠ ಅಂಕಗಳಿಸಿ ವಿದ್ಯಾರ್ಥಿಗಳ ಸಮಗ್ರ  ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ ಎಂದು ಹೇಳಿದ ಡಿಡಿಪಿಐ, ಕುಂದಾಪುರದ ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ವಿದ್ಯಾರ್ಥಿನಿ ಶ್ರೀಲಹರಿ ಅವರು 625ರಲ್ಲಿ 624 ಅಂಕಗಳಿಸುವ ಮೂಲಕ ಜಿಲ್ಲೆಗೆ ಮೊದಲಿಗರಾಗಿದ್ದಾರೆ ಎಂದರು. 

ವಲಯವಾರು ಫಲಿತಾಂಶದಲ್ಲಿ ಕುಂದಾಪುರ ವಲಯ ಶೇ.91.62 ಉತ್ತೀರ್ಣತೆಯೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬೈಂದೂರು ಸೇ.90.46 ತೇರ್ಗಡೆಯೊಂದಿಗೆ ಎರಡನೇ ಹಾಗೂ ಕಾರ್ಕಳ ಶೇ.90.14 ಫಲಿತಾಂಶ ದೊಂದಿಗೆ ಮೂರನೇ ಸ್ಥಾನ ಪಡೆದಿದೆ. ಯಾವಾಗಲೂ ಎರಡು ಅಗ್ರಸ್ಥಾನಗಳಲ್ಲಿರುತಿದ್ದ ಬ್ರಹ್ಮಾವರ ವಲಯ ಶೇ.88.09 ಫಲಿತಾಂಶದೊಂದಿಗೆ ನಾಲ್ಕನೇ ಹಾಗೂ ಉಡುಪಿ ಶೇ.87.39 ಉತ್ತೀರ್ಣತೆ ಯೊಂದಿಗೆ ಐದನೇ ಹಾಗೂ ಕೊನೆಯ ಸ್ಥಾನದಲ್ಲಿದೆ.

ಕುಂದಾಪುರ ವಲಯದಲ್ಲಿ ಪರೀಕ್ಷೆ ಬರೆದ 2470 ವಿದ್ಯಾರ್ಥಿಗಳಲ್ಲಿ (1258 ಬಾಲಕರು, 1212 ಬಾಲಕಿಯರು) ಒಟ್ಟು 2263 ಮಂದಿ (1135 ಬಾಲಕರು, 1128 ಬಾಲಕಿಯರು) ಉತ್ತೀರ್ಣರಾಗಿದ್ದಾರೆ. ಬೈಂದೂರು ವಲಯದ 1940 ವಿದ್ಯಾರ್ಥಿಗಳಲ್ಲಿ (1008+932) ಒಟ್ಟು 1755 ಮಂದಿ (869+886) ತೇರ್ಗಡೆಗೊಂಡಿದ್ದಾರೆ.

ಕಾರ್ಕಳ ವಲಯದ 2516 ವಿದ್ಯಾರ್ಥಿಗಳಲ್ಲಿ (1264+1252) ಒಟ್ಟು 2268 ಮಂದಿ (1100+1168) ಉತ್ತೀರ್ಣರಾದರೆ, ಬ್ರಹ್ಮಾವರ ವಲಯದ  2669 ವಿದ್ಯಾರ್ಥಿಗಳಲ್ಲಿ (1374+1295) ಒಟ್ಟು 2351 (1150+1201) ಮಂದಿ ಪಾಸಾಗಿದ್ದಾರೆ. ಉಡುಪಿ ವಲಯದಲ್ಲಿ ಪರೀಕ್ಷೆ ಬರೆದ 3385 ವಿದ್ಯಾರ್ಥಿಗಳಲ್ಲಿ (1733+1652) ಒಟ್ಟು 2958 (1439+1519) ಈ ಬಾರಿ ಉತ್ತೀರ್ಣರಾಗಿದ್ದಾರೆ.

"ಈ ಫಲಿತಾಂಶವನ್ನು ನಾವು ನಿರೀಕ್ಷಿಸಿರಲಿಲ್ಲ. ನಾವು ಈ ಬಾರಿಯ ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದೆವು. ಇದಕ್ಕಾಗಿ ಜಿಲ್ಲೆಯ ಎಲ್ಲಾ ಶಿಕ್ಷಕರು ಸೇರಿದಂತೆ ಎಲ್ಲರೂ ಉತ್ತಮ ಪರಿಶ್ರಮ ಪಟ್ಟಿದ್ದೆವು. ಜಿಲ್ಲೆ 18 ಸ್ಥಾನ ಪಡೆದಿರುವುದು ಅನಿರೀಕ್ಷಿತ. ಈ ಬಗ್ಗೆ ಶಿಕ್ಷಕರು  ಸೇರಿದಂತೆ ಎಲ್ಲರ ಸಭೆಯೊಂದನ್ನು ಕರೆದು ಶೀಘ್ರವೇ ಪರಾಮರ್ಶೆ ಮಾಡಲಿದ್ದೇವೆ. ಜಿಲ್ಲೆ ಉನ್ನತ ಸ್ಥಾನ ಪಡೆಯಲು ಈಗಿನಿಂದಲೇ ಪ್ರಯತ್ನ ಪ್ರಾರಂಭಿಸಲಿದ್ದೇವೆ". -ಗಣಪತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ, ಉಡುಪಿ.

ಫಲಿತಾಂಶದಲ್ಲಿ ಜಾರಿದ ಉಡುಪಿ ಜಿಲ್ಲೆ

ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ 2015ರಿಂದ 2018ರವರೆಗೆ ಸತತವಾಗಿ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿತ್ತು. 2016ರಲ್ಲಿ ಎರಡನೇ ಸ್ಥಾನಕ್ಕೆ ಜಾರಿದರೂ ಉಳಿದ ಮೂರು ವರ್ಷ ಅದು ರಾಜ್ಯ ಟಾಪ್ ಜಿಲ್ಲೆ ಎನಿಸಿತ್ತು.

ಆದರೆ 2019ರಲ್ಲಿ 89.49ಶೇ. ತೇರ್ಗಡೆಯೊಂದಿಗೆ ಐದನೇ ಸ್ಥಾನಕ್ಕಿಳಿದ ಉಡುಪಿ ಜಿಲ್ಲೆ ನಂತರ ಮೇಲಕ್ಕೇರಿಯೇ ಇಲ್ಲ. 2020ರಿಂದ 2022ರವರೆಗೆ  ಕೋವಿಡ್-19 ಕಾರಣದಿಂದ ಗ್ರೇಡ್ ನೀಡುತಿದ್ದರೂ ಜಿಲ್ಲೆ 9 ಹಾಗೂ 12ನೇ ಸ್ಥಾನದಲ್ಲಿತ್ತು. ಇದೀಗ 12ರಿಂದ ನೇರವಾಗಿ 19ನೇ ಸ್ಥಾನಕ್ಕೆ ಕುಸಿದಿದೆ. ಆದರೆ ಶೇಕಡಾವಾರು ತೇರ್ಗಡೆ ಮಾತ್ರ 88-89ರಲ್ಲಿರುವುದು ಸಮಾಧಾನ ತರುವ ಅಂಶವೆನ್ನಬಹುದು.

Similar News