ಐಪಿಎಲ್ ಮತ್ತು ಜಡ ಸಮಾಜದ ಸೃಷ್ಟಿ

Update: 2023-05-10 04:52 GMT

ಕ್ರಿಕೆಟ್ ಬಳಸಿ ಹೈಪರ್ ರಾಷ್ಟ್ರವಾದ ಹುಟ್ಟುಹಾಕುವ ಕಾರ್ಯ ಯಶಸ್ವಿಯಾಗಿದೆ. ಹೈಪರ್ ರಾಷ್ಟ್ರವಾದಿಗಳು ಆಲೋಚಿಸದ ಹಾಗೆ ಮಾಡುವುದಕ್ಕೂ ಮತ್ತದೇ ಕ್ರಿಕೆಟಿನ ಪ್ರಯೋಗ ಜಾರಿಯಲ್ಲಿದೆ. ಸದ್ಯಕ್ಕೆ ಏನನ್ನೂ ಪ್ರಶ್ನಿಸದ ಬಹುಸಂಖ್ಯಾತ ಜಡ ಜನಸಮುದಾಯ ಸೃಷ್ಟಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಗೆ ಐಪಿಎಲ್ ಕೊಡುಗೆ ಅಪಾರ.

ಈಗ ಐಪಿಎಲ್ ಸೀಸನ್. ಹಿಂದಿನ ಸಂಜೆ ನಡೆದ ಪಂದ್ಯಗಳನ್ನು ನೋಡಿದ್ದರೂ, ಜನ ಬೆಳಗ್ಗೆ ದಿನಪತ್ರಿಕೆಯ ಕೊನೇ ಪುಟದಲ್ಲಿ ಕಣ್ಣು ಹಾಯಿಸುತ್ತಾರೆ. ಅವರಿಗೆ ಅಂದಿನ ಪಂದ್ಯ ಯಾರ ನಡುವೆ, ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವ ತಂಡ ಎಲ್ಲಿದೆ, ತಾನು ಪ್ರೀತಿಸುವ ತಂಡ ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಬಲು ಮಹತ್ವದ್ದು. ಇಲ್ಲಿ ಸೋಲು ಗೆಲುವಿನ ಕುರಿತ ಹತಾಶೆ, ಮುದಗಳೆಲ್ಲ ತ್ವರಿತ, ತಾತ್ಕಾಲಿಕ. ಪಂದ್ಯಗಳ ನಿಲ್ಲದ ಸುರಿಮಳೆಯೇ ಆಗುವುದರಿಂದ ನೋಡುಗರು, ಆಟಗಾರರು, ಈ ಸಲವಲ್ಲವಾದರೂ ಮುಂದಿನ ಸಲ ‘‘ಕಪ್ ನಮ್ದೇ’’ ಎಂಬ ನಂಬಿಕೆಯಲ್ಲಿರುತ್ತಾರೆ. ಇದೊಂದು ಮನರಂಜನೀಯ ಪಂದ್ಯಾವಳಿಯಾದರೂ ಮನಸ್ಸನ್ನು ಮರಗಟ್ಟಿಸುವ ಪಂದ್ಯಾವಳಿಯೂ ಹೌದು.  

ಐಪಿಎಲ್ ಎಷ್ಟು ಅಸಂಗತ ಪಂದ್ಯಾವಳಿಯೋ ಅಷ್ಟೇ ಅಮುಖ್ಯವೂ ಹೌದು. ಅಸಂಗತವೇಕೆ? ಒಂದು ತಂಡಕ್ಕೆ ನೀವು ಅಡವಿಟ್ಟಿರುವ ನಿಯತ್ತು, ನಿಷ್ಠೆ ಮಾಧ್ಯಮಗಳ ಸೃಷ್ಟಿಯಷ್ಟೆ. ನಿಮ್ಮ ಭಾಷೆ ಗೊತ್ತಿಲ್ಲದ, ನಿಮ್ಮ ನೆಲ, ಜಲ, ಸಂಸ್ಕೃತಿಯ ಕುರಿತು ಕನಿಷ್ಠ ಜ್ಞಾನವಿಲ್ಲದ ಆಟಗಾರರನ್ನು ನಿಮ್ಮ ತಂಡದ ಆಟಗಾರರೆಂದು ಮಾಧ್ಯಮಗಳು, ವ್ಯಾಪಾರೀ ಸಂಸ್ಥೆಗಳು ಬಿಕರಿ ಮಾಡುತ್ತವೆ. ಹರಾಜಿನಲ್ಲಿ ಬಿಕರಿಯಾಗಿ ಹಣ ಎಣಿಸಿಕೊಳ್ಳುವ ಆಟಗಾರರಿಗೆ ಗ್ಯಾಲರಿಗಾಗಿ ಹೇಗೆ ಆಡಬೇಕೆಂದು ಗೊತ್ತಿದೆ. ಐಪಿಎಲ್ ಅಮುಖ್ಯವೇಕೆ? ಐಪಿಎಲ್ ಪಂದ್ಯಗಳಿಂದ ಆಟಗಾರರ ವಿಶ್ವ ರ್ಯಾಂಕಿಂಗ್ ನಿರ್ಧಾರವಾಗುವುದಿಲ್ಲ. 

ಆದ್ದರಿಂದ ಜಗತ್ತಿನ ಎಲ್ಲಾ ಆಟಗಾರರಿಗೂ ಈ ಪಂದ್ಯಾವಳಿ ಭಾರತಕ್ಕೆ ಬಂದು ಸುದೀರ್ಘ ಪಿಕ್ನಿಕ್ ಮಾಡುವ ಜೊತೆಗೆ ಹೇರಳ ದುಡ್ಡು ಮಾಡಿಕೊಳ್ಳುವ ಅವಕಾಶವಷ್ಟೆ. ಆಟಗಾರ ಐಪಿಎಲ್‌ಗೆ ಬಿಕರಿಯಾದ ಮೌಲ್ಯ, ದೇಶಕ್ಕಾಗಿ ಆಟಗಾರ ಮಾಡಿದ ಸಾಧನೆಯಿಂದ ನಿರ್ಧಾರವಾಗುತ್ತದೆ. ಇಂತಹ ಅಸಂಗತ, ಅಮುಖ್ಯ ಪಂದ್ಯಾವಳಿಗೆ, ವ್ಯಾಪಾರ ಮಾದರಿಗೆ ಅತ್ಯಂತ ಸೂಕ್ತವಾದ ಕ್ರಿಕೆಟ್ ಸ್ವರೂಪ ೨೦-೨೦ ಮಾತ್ರ. ಬಹುಶ ಏಕದಿನ ಪಂದ್ಯದ ಐಪಿಎಲ್ ಸೀಸನ್ ನಡೆದಿದ್ದರೆ ಆ ಪಂದ್ಯಾವಳಿ ಒಂದೆರೆಡು ಸೀಸನ್‌ಲ್ಲಿ ಕಮರಿ ಹೋಗಿರುತ್ತಿತ್ತು.

ಪ್ರೇಕ್ಷಕರು ಈ ಅಸಂಗತ ಮತ್ತು ಅಮುಖ್ಯ ಪಂದ್ಯಾವಳಿಗಳನ್ನು ಹೀಗೆ ಹುಚ್ಚೆದ್ದು ನೋಡುವುದಾದರೂ ಏತಕ್ಕೆ? ದಿನವೆಲ್ಲಾ ದೇಹ ದಂಡಿಸಿ ದುಡಿದು, ದಣಿದು ಸಂಜೆ ಮನೆಗೆ ಹೋಗುವವರಿಗೆ ಐಪಿಎಲ್ ಪಂದ್ಯಗಳು ಎಲ್ಲಾ ನೋವನ್ನು, ಹತಾಶೆಗಳನ್ನು ಮರೆಸುವ ನಶೆ. ಆವರಿಸಿಕೊಂಡು ಮುಳುಗಿಸಿಬಿಡುವ ಚಟವಿದು. (ಕುದುರೆ ರೇಸ್ ಜೂಜು, ಮಾದಕ ವಸ್ತುಗಳಿಗಿಂತ ಬಹುದೊಡ್ಡ ಚಟ ಡ್ರೀಮ್ ಇಲೆವೆನ್ ಎಂದರೆ ತಪ್ಪಾಗಲಾರದು.) ಎಲ್ಲರ ಮನ ಮರಗಟ್ಟಿಸಿ, ಹತಾಶೆಗಳನ್ನು ತಣ್ಣಗಾಗಿಸುವ ಇಂಥ ಪಂದ್ಯಾವಳಿಗಳಿಂದ ಬಂಡವಾಳಶಾಹಿಗಳಿಗೆ ಎಷ್ಟು ಲಾಭವೋ ಅದಕ್ಕಿಂತ ನೂರು ಪಟ್ಟು ಅಧಿಕ ಲಾಭ ಪ್ರಭುತ್ವಕ್ಕೆ ಎಂಬುದನ್ನು ಮರೆಯಬಾರದು.

ಒಂದೆರಡು ದಶಕಗಳ ಹಿಂದೆ ಜನ ಈ ರೀತಿಯ ಅಬ್ಬರ, ಹುಚ್ಚುತನಕ್ಕಾಗಿ ವಿಶ್ವಕಪ್‌ಗಾಗಿ ಕಾಯಬೇಕಿತ್ತು. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್‌ನಲ್ಲಿ ತಮ್ಮ ದೇಶ ಸೋತರೆ ಜನ ತೀವ್ರ ನಿರಾಶರಾಗುತ್ತಿದ್ದರು. ಆದರೆ ಪ್ರತೀ ವರ್ಷ ನಡೆಯುವ ಈ ಪಂದ್ಯಾವಳಿಗಳು ಪ್ರೇಕ್ಷಕರಿಗೆ ಅಷ್ಟು ಡಿಮ್ಯಾಂಡಿಂಗ್ ಅಲ್ಲ. ಪ್ರತೀ ದಿನ ಸಂಜೆ ಕಾಲು ಚಾಚಿ ಕೂತು ರಿಲ್ಯಾಕ್ಸ್ ಮಾಡಿಕೊಳ್ಳಬಹುದು. ಪಂದ್ಯಗಳನ್ನು ನೋಡುತ್ತಾ ತಮ್ಮ ತಂಡ ಗೆದ್ದರೆ ಖುಷಿಪಡಬಹುದು, ಸೋತರೆ ಒಂದೆರಡು ಆಟಗಾರರ ಆಟದ ವೈಖರಿಯನ್ನು ಖಂಡಿಸಬಹುದು. ಯಥಾಸ್ಥಿತಿ ಕಾಪಾಡಿಕೊಳ್ಳಲು, ಜಡ ಸಮಾಜ ಕಾಯ್ದುಕೊಳ್ಳಲು ಪ್ರಭುತ್ವಕ್ಕೆ ಇದಕ್ಕಿಂತ ಒಳ್ಳೆಯ ಆಯುಧ ಬೇಕಿಲ್ಲ.

ಭಾರತದಲ್ಲಿ ಕ್ರಿಕೆಟ್ ಇತಿಹಾಸ ಕೆದುಕುತ್ತಾ ಹೋದರೆ ಅದೊಂದು ಎಲೈಟ್ ಕ್ರೀಡೆಯೆಂದು ತಿಳಿಯುತ್ತದೆ. ಬ್ರಿಟಿಷರು ಭಾರತವನ್ನು ಆಳುವಾಗ ಬೇಸರ ಕಳೆಯಲಿಕ್ಕೆ ಆಡುತ್ತಿದ್ದ ಆಟಗಳು ಕ್ರಿಕೆಟ್ ಮತ್ತು ಪೋಲೊ. ನೂರಾರು ನಿಯಮಗಳಿರುವ ಕ್ರಿಕೆಟ್ ಅನ್ನು ಭಾರತೀಯರೆಂದಿಗೂ ಅರ್ಥ ಮಾಡಿಕೊಳ್ಳಲಾರರು ಮತ್ತು ಕುದುರೆಯನ್ನೇರಿ ಪೋಲೊ ಆಡಲಾರರೆಂದು ಬ್ರಿಟಿಷರಿಗೆ ಖಾತರಿ ಇತ್ತು. ಬಿಳಿಯ ಸಮವಸ್ತ್ರ ತೊಟ್ಟು ಬಿಳಿಯರೇ ಆಡುತ್ತಿದ್ದ ಆಟವನ್ನು ಭಾರತೀಯ ಎಲೈಟ್‌ಗಳು ಬಹುಬೇಗ ಕಲಿತರು. ದೇಶ ವಿಭಜನೆಗೆ ಮುನ್ನವೇ ಬಾಂಬೆಯಲ್ಲಿ ಪಾರ್ಸಿ, ಹಿಂದೂ, ಮುಸ್ಲಿಮ್ ಹಾಗೂ ಬ್ರಿಟಿಷ್ ತಂಡಗಳ ನಡುವೆ ಚತುಷ್ಕೋನ ಸರಣಿ ನಡೆಯುತ್ತಿತ್ತು. ಭಾರತೀಯರು ತಮ್ಮ ಆಟ ಕಲಿತುಬಿಟ್ಟರೆಂಬ ಆಘಾತ, ಬೇಸರ ಬ್ರಿಟಿಷರಲ್ಲಿದ್ದರೂ, ಧರ್ಮಾಧಾರಿತ ತಂಡಗಳು ಹುಟ್ಟಿಕೊಂಡದ್ದು ಅವರಲ್ಲಿ ಅತೀವ ಸಂತಸ ಮೂಡಿಸಿತ್ತು.

ಹೀಗೆ ಆಳುವವರಿಂದ, ಶೋಷಕರಿಂದ ನಾವು ಕಲಿತ ಕ್ರೀಡೆಯಿಂದು ಸಂಪೂರ್ಣ ದೇಶವನ್ನು ಆವರಿಸಿಕೊಂಡಿದೆ. ಭಾರತೀಯರು ಕ್ರಿಕೆಟ್ ಅನ್ನು ತಮಗೆ ಬೇಕಾದ ಹಾಗೆ ರೂಪಾಂತರ ಮಾಡಿಕೊಂಡಿದ್ದಾರೆ. ಹಳ್ಳಿಗಳಲ್ಲಿ ಎರಳಿ ಕಾಯಿ ಚೆಂಡಾದರೆ, ತೆಂಗಿನ ಮಟ್ಟೆ ಬ್ಯಾಟ್ ಆದವು. ಕ್ರಿಕೆಟ್ ಆಡಲು ದುಬಾರಿ ಕ್ರಿಕೆಟ್ ಕಿಟ್ ಇಲ್ಲದವರು ಸಣ್ಣ ಗಲ್ಲಿಗಳಲ್ಲಿ, ಶಾಲಾ ತರಗತಿಯ ಒಳಗೆ ಪರೀಕ್ಷೆಗೆ ಬಳಸುತ್ತಿದ್ದ ಕಾರ್ಡ್ ಬೋರ್ಡ್ ಮತ್ತು ರದ್ದಿ ಪೇಪರ್ ಬಳಸಿ ಕ್ರಿಕೆಟ್ ಆಡುತ್ತಾರೆ. ಮೂರೂ ವಿಕೆಟ್‌ಗಳ ಚಿತ್ತಾರವಿರದ ಗೋಡೆಗಳು ಭಾರತದಲ್ಲಿ ಕಾಣಸಿಗುವುದು ಅತಿ ವಿರಳ.

ಕ್ರಿಕೆಟ್ ಈ ರೀತಿ ರೂಪಾಂತರಗೊಂಡರೂ, ಮೂಲಭೂತವಾಗಿ ಎಲೈಟ್‌ಗಳ ಆಟವಾಗಿಯೇ ಉಳಿದಿದೆ ಎಂಬುದನ್ನು ಯುವಕರು ಒಪ್ಪಲಾರರು. ಪ್ರತಿಭೆಯಿಂದ ತಾವು ಕೂಡ ಒಂದು ದಿನ ಧೋನಿಯಾಗುತ್ತೇವೆ ಎಂಬ ಕನಸು ಕಾಣುತ್ತಾರೆ. ಕ್ರಿಕೆಟ್ ಜನಪ್ರಿಯ ಕ್ರೀಡೆಯಾದರೂ, ಭಾರತೀಯ ಕ್ರಿಕೆಟ್ ತಂಡಕ್ಕೆ ಎಂಟ್ರಿ ಪಡೆಯುವವರೆಲ್ಲ ಎಲೈಟ್‌ಗಳೇ ಆಗಿರುತ್ತಾರೆ ಎಂಬ ಸತ್ಯ ಮರೆಮಾಚಲು ಎಂ.ಎಸ್. ಧೋನಿಯಂಥವರ ಅಗತ್ಯ ಭಾರತೀಯ ಕ್ರಿಕೆಟ್ ಬೋರ್ಡಿಗಿದೆ ಎಂಬುದನ್ನು ಯುವಕರು ಕಡೆಗಣಿಸುತ್ತಾರೆ. ಪ್ರತಿಭಾನ್ವಿತ ಪುಲವಂಕರ್ ಬಾಲೋ ಸಹೋದರರಂಥವರು ದಲಿತರೆಂಬ ಕಾರಣಕ್ಕೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲಿಲ್ಲ ಎಂಬ ವಿಚಾರವನ್ನು ತಿಳಿಯಲು ನಿರಾಕರಿಸುತ್ತಾರೆ.

ನಾನು ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದೆ. ನಾವು ಆಡುವ ಮೈದಾನದ ಒಂದೊಂದು ಮೂಲೆಯಲ್ಲಿ ಒಂದೊಂದು ತಂಡ ಕ್ರಿಕೆಟ್ ಆಡುತ್ತಿದ್ದವು. ಬಡವರು ಕೆಎಂಎಸ್ ಎಂಬ ಚೆಂಡು ಬಳಸಿದರೆ, ಮಧ್ಯಮ ವರ್ಗದವರು ಕಾಸ್ಕೊ ಟೆನಿಸ್ ಚೆಂಡು ಬಳಸುತ್ತಿದ್ದರು. ಯಾರಾದರೂ ವಿಲ್ಸನ್ ಚೆಂಡು ಬಳಸಿದರೆ ಆತ ಧನಿಕನೇ ಆಗಿರಬೇಕೆಂಬ ನಿರ್ಧಾರಕ್ಕೆ ಬರುತ್ತಿದ್ದೆವು. ಮೈದಾನದ ಮಧ್ಯಭಾಗಕ್ಕೆ ನಾವ್ಯಾರೂ ಕಾಲಿಡುತ್ತಿರಲಿಲ್ಲ. 

ಚೆನ್ನಾಗಿ ರೋಲ್ ಮಾಡಿದ ಪಿಚ್ ಅಲ್ಲಿತ್ತು. ಪಿಚ್ ಸುತ್ತ ನೆಟ್ ಹಾಕಲಾಗಿತ್ತು. ದಿನವೂ ಬೆಳಗ್ಗೆ ಮತ್ತು ಸಂಜೆ ಶ್ರೀಮಂತರ ಮಕ್ಕಳು ಹೆಲ್ಮೆಟ್, ಪ್ಯಾಡ್, ಕೈಗವಸು ಧರಿಸಿ ಅಭ್ಯಾಸ ಮಾಡುವುದನ್ನು ನಾವು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆವು. ಅವರು ಬಳಸುವ ಬ್ಯಾಟ್, ಪ್ಯಾಡ್, ಕೈಗವಸಿನ ಬೆಲೆ ಎಷ್ಟಿರಬಹುದೆಂಬ ಅಂದಾಜು ಮಾಡುತ್ತಿದ್ದೆವು. ಹೀಗೆ ಕ್ರಿಕೆಟ್ ನಮಗೆ ಒಂದು ಕಡೆ ಖುಷಿ ಕೊಟ್ಟರೆ, ಇನ್ನೊಂದು ಕಡೆ ಉಳ್ಳವ-ಬಡವ ಭೇದದ ಅರಿವು ಮೂಡಿಸಿತ್ತು. ಅದನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಆಗಿರಲಿಲ್ಲ ಕೂಡ.

ಧನಿಕ ವ್ಯಾಪಾರಿ, ಉನ್ನತ ಅಧಿಕಾರಿಗಳ ಕೂಸುಗಳೇ ಓದುವ ಕಾಲೇಜ್ ಆದ ಜೈನ್ ಕಾಲೇಜಿನಲ್ಲಿ ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ಅಂಥವರಿಗೆ ಪಾಠ ಮಾಡುವಾಗ ಹಲವು ವರ್ಷಗಳ ಹಿಂದೆ ಮೂಡಿದ್ದ ಅರಿವು ನನ್ನನ್ನು ಕಾಡುತ್ತಿತ್ತು. ಕರುಣಾ, ಮಾಯಾಂಕ್‌ಗಿದ್ದ ಪ್ರತಿಭೆಗೆ ಪೋಷಕರಿಂದ ಪ್ರೋತ್ಸಾಹ ಸಿಕ್ಕಿತ್ತು. ಕೆಎಸ್‌ಸಿಎ, ನ್ಯಾಷನಲ್ ಕ್ರಿಕೆಟ್ ಅಕಾಡಮಿ ಸೇರಿಸುವಷ್ಟು ಹಣ ಪೋಷಕರ ಬಳಿಯಿತ್ತು. ಕರುಣ್, ಮಯಾಂಕ್ ಮಾಡಿದ ಸಾಧನೆ ಬಗ್ಗೆ ಅಭಿಮಾನವಿದೆ. ಆದರೆ ಸಣ್ಣ ಊರಿನ ಮೈದಾನವೊಂದರ ಮೂಲೆಯಲ್ಲಿ ನನ್ನ ಜೊತೆ ಕ್ರಿಕೆಟ್ ಆಡುತ್ತಿದ್ದ ಬಡ ಪ್ರತಿಭೆಗಳು, ನನ್ನ ನೆಚ್ಚಿನ ಗೆಳೆಯರು ನೆನಪಾದಾಗ ಎದೆ ಭಾರವಾಗುತ್ತದೆ.

ಈ ನನ್ನ ಗೆಳೆಯರು ಇಂದಿಗೂ ಐಪಿಎಲ್ ತಪ್ಪದೆ ನೋಡುತ್ತಾರೆ. ಪ್ರತಿಭೆಯಿದ್ದರೂ ನಾನು ಏಕೆ ಇಂತಹ ಒಂದು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿಲ್ಲ, ಕ್ರಿಕೆಟ್ ಮರೆತು ಯಾವುದೋ ಕಾರ್ಖಾನೆಯಲ್ಲಿ ಹನ್ನೆರಡು ಗಂಟೆ ಯಾಕೆ ದುಡಿಯಬೇಕಾಯಿತು ಎಂದು ಅವರು ಪ್ರಶ್ನೆ ಮಾಡಿಕೊಳ್ಳುವುದಿಲ್ಲ. ಸಮಾಜದಲ್ಲಿರುವ ಅಸಮಾನತೆ ಅಸಹಜವಾಗಿ ಕಾಣುವುದಿಲ್ಲ. ಎಲ್ಲರೂ ಸಂಜೆ ಐಪಿಎಲ್ ನೋಡಿ ಮಲಗುತ್ತಾರೆ. ಕ್ರಿಕೆಟ್ ಭಾರತೀಯರನ್ನು ಇಷ್ಟೆಲ್ಲಾ ಪ್ರಭಾವಿಸಿದರೂ ಅದು ಕೈಗೆಟುಕುವುದು ಧನಿಕರಿಗೆ ಮಾತ್ರ.

ಎಲೈಟ್ ಕ್ರಿಕೆಟ್ ಮತ್ತು ಬಂಡವಾಳಶಾಹಿಗಳ ಗ್ರ್ಯಾಂಡ್ ಮಿಲನವಾದದ್ದು ೧೯೯೬ರ ವಿಶ್ವಕಪ್ ಸಮಯದಲ್ಲಿ. ಮೈದಾನದ ಒಳಗೆ ವಿವಿಧ ದೇಶಗಳ ತಂಡಗಳು ಸೆಣೆಸಿದರೆ, ಮೈದಾನದ ಹೊರಗೆ ಕೋಕ್, ಪೆಪ್ಸಿಯಂತಹ ಬಹುರಾಷ್ಟ್ರೀಯ ಕಂಪೆನಿಗಳು ಕಾಳಗಕ್ಕೆ ಇಳಿದಿದ್ದವು. ಅವುಗಳ ಪ್ರಾಯೋಜಕತ್ವದಲ್ಲಂತೂ ಕ್ರೀಡೆ ಕ್ರೀಡೆಯಾಗಿ ಉಳಿಯದೆ, ಕ್ರೀಡಾಂಗಣಗಳು ರಣರಂಗವಾದವು. ಭಾರತೀಯರಲ್ಲಿ ಅತಿಯಾದ ರಾಷ್ಟ್ರಪ್ರೇಮ ಬಿತ್ತಿದ ಕಂಪೆನಿಗಳೇ ಪಾಕಿಸ್ತಾನದಲ್ಲೂ ಅದೇ ಕೆಲಸದಲ್ಲಿ ನಿರತವಾಗಿದ್ದವು. ಕ್ರಿಕೆಟ್ ವ್ಯಾಪಾರೀಕರಣ, ಶಿವಸೇನೆ ಕ್ರಿಕೆಟ್ ಪಿಚ್ ನಾಶಮಾಡಿದ್ದು, ಅತಿಯಾದ ರಾಷ್ಟ್ರೀಯತೆಯ ಕೋಮುಗಲಭೆ ಎಲ್ಲವೂ ಜಾಗತೀಕರಣ ಮತ್ತು ಉದಾರೀಕರಣದ ಶಿಶುಗಳು ಎಂಬುದನ್ನು ಮರೆಯಬಾರದು.

ಭಾರತದ ಎಲೈಟ್‌ಗಳು ಮತ್ತು ಕಂಪೆನಿಗಳು ಹೈಪರ್ ರಾಷ್ಟ್ರವಾದವನ್ನು ಜನರ ಮನದಲ್ಲಿ ಸ್ಥಾಪಿಸಲು ಕ್ರಿಕೆಟನ್ನು ಸಮರ್ಥವಾಗಿ ಬಳಸಿಕೊಂಡವು. ಎಂಬತ್ತರ ದಶಕದಲ್ಲಿ ಕ್ರೀಡಾಂಗಣದಲ್ಲಿ ನಡೆಯುವ ರೋಚಕ ಪಂದ್ಯಗಳನ್ನು ನೋಡುತ್ತಾ ಚಪ್ಪಾಳೆ ತಟ್ಟುತ್ತಿದ್ದ ಪ್ರೇಕ್ಷಕರ ಕೈಯಲ್ಲಿ ತೊಂಬತ್ತರ ದಶಕದಲ್ಲಿ ದೊಡ್ಡ ದೊಡ್ಡ ಬಾವುಟಗಳು, ಮೈ ಮುಖಕ್ಕೆಲ್ಲ ಮೂರು ಬಣ್ಣ ಬಳಿದುಕೊಳ್ಳುವುದು ಕಾಣಿಸಿಕೊಳ್ಳಲು ಶುರುವಾಗಿದ್ದು ಹೈಪರ್ ರಾಷ್ಟ್ರವಾದದ ನಿರ್ದರ್ಶನಗಳಲ್ಲವೇ? ಇಂಡಿಯಾ, ಪಾಕಿಸ್ತಾನದ ನಡುವೆ ಯಾವುದೇ ಘರ್ಷಣೆಯಾದರೂ ಮೊದಲು ಕಳಚಿ ಬೀಳುತ್ತಿದ್ದ ಕೊಂಡಿಯೇ ಕ್ರಿಕೆಟ್ ಕ್ರೀಡೆಯದು.

ಕ್ರಿಕೆಟ್ ಬಳಸಿ ಹೈಪರ್ ರಾಷ್ಟ್ರವಾದ ಹುಟ್ಟುಹಾಕುವ ಕಾರ್ಯ ಯಶಸ್ವಿಯಾಗಿದೆ. ಹೈಪರ್ ರಾಷ್ಟ್ರವಾದಿಗಳು ಆಲೋಚಿಸದ ಹಾಗೆ ಮಾಡುವುದಕ್ಕೂ ಮತ್ತದೇ ಕ್ರಿಕೆಟಿನ ಪ್ರಯೋಗ ಜಾರಿಯಲ್ಲಿದೆ. ಸದ್ಯಕ್ಕೆ ಏನನ್ನೂ ಪ್ರಶ್ನಿಸದ ಬಹುಸಂಖ್ಯಾತ ಜಡ ಜನಸಮುದಾಯ ಸೃಷ್ಟಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 

ಈ ಪ್ರಕ್ರಿಯೆಗೆ ಐಪಿಎಲ್ ಕೊಡುಗೆ ಅಪಾರ. ಸರಕಾರಿ ಸಂಸ್ಥೆಗಳು ಯಾವ ಖಾಸಗಿ ಕಂಪೆನಿಗೆ ಬಿಕರಿಯಾದವು ಎಂಬ ಮಾಹಿತಿ ಜನಸಾಮಾನ್ಯರಿಗಿಲ್ಲದಿದ್ದರೂ ಯಾವ ತಂಡಕ್ಕೆ ಯಾವ ಆಟಗಾರ ಎಷ್ಟು ಕೋಟಿಗೆ ಬಿಕರಿಯಾದ ಎಂಬ ಸ್ಪಷ್ಟ ಮಾಹಿತಿಯಿರುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾದರೆ ಬೇಸರವಿಲ್ಲ, ಆದರೆ ಆರ್‌ಸಿಬಿ ಕಪ್ ಗೆಲ್ಲುತ್ತಿಲ್ಲದ್ದಕ್ಕೆ ಅತಿಯಾದ ಬೇಸರವಿದೆ ಎನ್ನುವಂತಹ ಜನಸಂಖ್ಯೆ ಸೃಷ್ಟಿಯಾಗಿದೆ. ಇಷ್ಟೆಲ್ಲಾ ರಾಜಕೀಯಗಳ ನಡುವೆ ಬಡ ಯುವಕರನ್ನು ಇನ್ನಷ್ಟು ಬಡತನಕ್ಕೆ ತಳ್ಳುವ ಡ್ರೀಮ್ ಇಲೆವೆನ್‌ನಂತಹ ಜೂಜು ಆಡುವ ಅಪ್ಲಿಕೇಷನ್‌ಗಳ ಉದಯವಾಗಿದೆ.

ಐಪಿಎಲ್ ಒಂದೊಂದೇ ಸೀಸನ್ ಮುಗಿಯುತ್ತಿದ್ದಂತೆ ಸಮಾಜದ ಜಡತ್ವವೂ ಏರುತ್ತಿದೆ. ಮುಂದಿನ ದಿನಗಳಲ್ಲಿ ಎಲೈಟ್‌ಗಳ ಕ್ರೀಡೆ ಕ್ರಿಕೆಟಿನ ಗುರಿಯೇನು ಕಾದು ನೋಡಬೇಕಿದೆ. 

Similar News