×
Ad

ಬಿಜೆಪಿ ನಾಯಕಿಯ ಪತಿಗೆ ಪೊಲೀಸ್ ಠಾಣೆಯಲ್ಲಿಯೇ ಥಳಿಸಿದ ಸಮಾಜವಾದಿ ಪಕ್ಷದ ಶಾಸಕ

Update: 2023-05-10 14:50 IST

ಅಮೇಥಿ: ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಳಗೆ ಬುಧವಾರ ಬಿಜೆಪಿ ನಾಯಕಿಯ  ಪತಿಗೆ  ಪ್ರತಿಪಕ್ಷ ಸಮಾಜವಾದಿ ಪಕ್ಷದ ಶಾಸಕ ಥಳಿಸಿರುವ ಘಟನೆ ನಡೆದಿದ್ದು, ಹೊಡೆದಾಟವನ್ನು   ಹತ್ತಿಕ್ಕಲು ಪೊಲೀಸರು ಹರಸಾಹಸ ಪಟ್ಟರು.

ಸಮಾಜವಾದಿ ಪಕ್ಷದ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಅವರು ಅಮೇಥಿ ಜಿಲ್ಲೆಯ ಗೌರಿಗಂಜ್ ಕೊತ್ವಾಲಿ ಪೊಲೀಸ್ ಠಾಣೆಯೊಳಗೆ ಬಿಜೆಪಿ ಮುನ್ಸಿಪಲ್ ಚುನಾವಣಾ ಅಭ್ಯರ್ಥಿ ರಶ್ಮಿ ಸಿಂಗ್ ಅವರ ಪತಿ ದೀಪಕ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದು, ಪ್ರತ್ಯಕ್ಷದರ್ಶಿಗಳು ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ.

ಹತ್ತಾರು ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ರಾಕೇಶ್ ಪ್ರತಾಪ್ ಸಿಂಗ್ ಹಾಗೂ  ಅವರ ಬೆಂಬಲಿಗರಿಂದ  ದೀಪಕ್ ಸಿಂಗ್ ಅವರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.

 ದೀಪಕ್ ಸಿಂಗ್ ಅವರು ಪೊಲೀಸ್ ಠಾಣೆಗೆ ಆಗಮಿಸಿ ಅಲ್ಲಿ ಧರಣಿಯಲ್ಲಿ ಕುಳಿತಿದ್ದ ರಾಕೇಶ್  ಅವರನ್ನು ಅವಾಚ್ಯವಾಗಿ ನಿಂದಿಸಿದರು. ಇದರಿಂದ ಅವರು ತಾಳ್ಮೆ ಕಳೆದುಕೊಂಡಿದ್ದಾರೆ ಎಂದು ಸಮಾಜವಾದಿ ಪಕ್ಷ ದ ನಾಯಕರು ಹೇಳಿದ್ದಾರೆ.

ದೀಪಕ್ ಸಿಂಗ್ ಮತ್ತು ಅವರ ಬೆಂಬಲಿಗರು ತಮ್ಮ ಕೆಲವು ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದರಿಂದ ಪ್ರತಿಭಟನೆ ನಡೆಸುತ್ತಿದ್ದೆ, ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ರಾಕೇಶ್ ಸಿಂಗ್ ಹೇಳಿದ್ದಾರೆ.

Similar News