×
Ad

ಹರ್ಯಾಣ: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ನೀಡಿದ ಐವರು ಅಧಿಕಾರಿಗಳ ಅಮಾನತು

Update: 2023-05-10 15:05 IST

ಹೊಸದಿಲ್ಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ  ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಐವರು ಅಧಿಕಾರಿಗಳನ್ನು ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಶನ್ ಅಮಾನತುಗೊಳಿಸಿದೆ ಎಂದು  The Hindu  ವರದಿ ಮಾಡಿದೆ.

ಅಪ್ರಾಪ್ತ ಬಾಲಕಿ ಸೇರಿದಂತೆ ಹಲವು ಮಹಿಳಾ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಿಂಗ್ ಮೇಲಿದೆ. ಸಿಂಗ್  ಬಂಧನಕ್ಕೆ ಆಗ್ರಹಿಸಿ ದೇಶದ ಅಗ್ರಮಾನ್ಯ ಕುಸ್ತಿಪಟುಗಳು ಎಪ್ರಿಲ್ 23 ರಿಂದ ಜಂತರ್ ಮಂತರ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಭಾರತೀಯ ಜನತಾ ಪಕ್ಷದ ಸಂಸದರೂ ಆಗಿರುವ ಸಿಂಗ್ ವಿರುದ್ಧ ದಿಲ್ಲಿ ಪೊಲೀಸರು ಎರಡು ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಿದ್ದರೂ ಸಿಂಗ್  ಉನ್ನತ ಹುದ್ದೆಯಿಂದ ಕೆಳಗಿಳಿಯಲು ನಿರಾಕರಿಸಿದ್ದಾರೆ.

ಮೇ 5 ರಂದು ಹರ್ಯಾಣ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಶನ್ ಮೂರು ಜಿಲ್ಲಾ ಘಟಕಗಳ ಕಾರ್ಯದರ್ಶಿಗಳನ್ನು ಅಮಾನತುಗೊಳಿಸಿತು. ಜಜ್ಜರ್‌ನ ವೀರೇಂದ್ರ ಸಿಂಗ್ ದಲಾಲ್, ಹಿಸಾರ್‌ನ ಸಂಜಯ್ ಸಿಂಗ್ ಮಲಿಕ್ ಹಾಗೂ  ಮೇವತ್‌ನ ಜೈ ಭಗವಾನ್  ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಹಿಸಾರ್ ಜಿಲ್ಲೆಯ ಶಹೀದ್ ಭಗತ್ ಸಿಂಗ್ ವ್ರೆಸ್ಲಿಂಗ್ ಅಕಾಡೆಮಿಯ ವ್ಯವಸ್ಥಾಪಕರಾದ ಅಜಯ್ ಸಿಂಗ್ ಧಂಡಾ ಹಾಗೂ  ಜೈ ಭಗವಾನ್ ಲಾಥರ್  ಅವರನ್ನು  ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಹಾಗೂ  ಹರ್ಯಾಣ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಶನ್ ವಿರುದ್ಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.

ಜನವರಿಯಲ್ಲಿ ಆಂದೋಲನದಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ ನಂತರ ಐವರು ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಹರ್ಯಾಣ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರೋಹ್ತಾಶ್ ಸಿಂಗ್ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

Similar News