ಕೇರಳ: ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನು ಚಾಕುವಿನಿಂದ ಇರಿದು ಹತ್ಯೆ
ಕೊಲ್ಲಂ(ಕೇರಳ): ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ಪ್ರದೇಶದ ಆಸ್ಪತ್ರೆಯಲ್ಲಿ ಬುಧವಾರ 23 ವರ್ಷದ ವೈದ್ಯೆಯನ್ನು ಅಮಾನತಿನಲ್ಲಿರುವ ಶಾಲಾ ಶಿಕ್ಷಕನೊಬ್ಬ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕುಟುಂಬ ಸದಸ್ಯರೊಂದಿಗೆ ಜಗವಾಡಿದ್ದ ಶಿಕ್ಷಕನನ್ನು ಪೊಲೀಸರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದರು.
ಕೊಟ್ಟಾರಕ್ಕರ ಪೊಲೀಸ್ ಅಧಿಕಾರಿಯ ಪ್ರಕಾರ, ಸಂದೀಪ್ ಎಂದು ಗುರುತಿಸಲಾದ ವ್ಯಕ್ತಿಯ ಕಾಲಿಗೆ ಆಗಿರುವ ಗಾಯಕ್ಕೆ ವೈದ್ಯೆ ವಂದನಾ ದಾಸ್ ಅವರು ಚಿಕಿತ್ಸೆ ನೀಡುತ್ತಿದ್ದಾಗ ಆತ ಇದ್ದಕ್ಕಿದ್ದಂತೆ ಕೆರಳಿದ. ಕತ್ತರಿ ಹಾಗೂ ಚಿಕ್ಕಚಾಕು ಬಳಸಿ ಅಲ್ಲಿ ನಿಂತಿದ್ದ ಎಲ್ಲರ ಮೇಲೆ ಹಲ್ಲೆ ನಡೆಸಿದ್ದ. ಆತನನ್ನು ಕರೆತಂದಿದ್ದ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ.
ಬುಧವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು, ದಾಸ್ ಅವರು ಕೆಲವು ಗಂಟೆಗಳ ನಂತರ ಸಾವನ್ನಪ್ಪಿದ್ದಾರೆ. ಕೂಡಲೇ ವೈದ್ಯರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣಾಪಾಯದಿಂದ ಪಾರಾಗಲು ಸಾಧ್ಯವಾಗಲಿಲ್ಲ.
ವೈದ್ಯರ ಸಾವಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಘಟನೆ ಆಘಾತಕಾರಿ ಹಾಗೂ ಅತ್ಯಂತ ನೋವಿನ ಸಂಗತಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಘಟನೆಯ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹಾಗೂ ಕೇರಳ ಸರಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ ಗಳ(ಕೆಜಿಎಂಒಎ) ವೈದ್ಯರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.