ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ದಿನಪತ್ರಿಕೆಗಳ ಮೂಲಕ ನೋಟಿಸ್ ಜಾರಿಗೊಳಿಸುವಂತೆ ಸುಪ್ರೀಂ ಸೂಚನೆ
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನೀಡಿದ ನೋಟಿಸ್‌ಗಳನ್ನು ನೀಡಲು ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಕೆಲ ಅಪರಾಧಿಗಳು ತಮ್ಮ ವಿಳಾಸಗಳಲ್ಲಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಮಂಗಳವಾರ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ 11 ಅಪರಾಧಿಗಳ ಪೈಕಿ ಕೆಲವರ ಪ್ರತಿಕ್ರಿಯೆಗಳನ್ನು ಪಡೆಯಲು ಆಂಗ್ಲ ಮತ್ತು ಗುಜರಾತಿ ಸುದ್ದಿಪತ್ರಿಕೆಗಳಲ್ಲಿ ನೋಟಿಸ್‌ಗಳನ್ನು ಪ್ರಕಟಿಸಬೇಕು ಎಂದು ಹೇಳಿದೆ.
ಪ್ರಕರಣದ ಕೆಲ ಅಪರಾಧಿಗಳು ಅವರ ನಿವಾಸಗಳಲ್ಲಿಲ್ಲ ಎಂದು ಬಿಲ್ಕಿಸ್ ಪರ ವಕೀಲೆ ಶೋಭಾ ಗುಪ್ತಾ ಅವರು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಬಿ ವಿ ನಾಗರತ್ನ, ಅಹಸನುದ್ದಿನ್ ಅಮಾನುಲ್ಲಾ ಅವರ ಪೀಠಕ್ಕೆ ದೂರಿದಾಗ ಮೇಲಿನಂತೆ ಸೂಚಿಸಲಾಯಿತು.
ಈ ಹಿಂದೆ ಕೂಡ ನೋಟಿಸ್‌ಗಳನ್ನು ತಲುಪಿಸಲಾಗಿದೆ ಎಂದು ಹೇಳಿದಾಗ ಅಪರಾಧಿಗಳ ಪರ ವಕೀಲರು ಪ್ರತಿಕ್ರಿಯಿಸಿ ತಮ್ಮ ಕಕ್ಷಿಗಾರರು ಊರಲ್ಲಿಲ್ಲದೇ ಇರುವುದರಿಂದ ನೋಟಿಸ್‌ಗಳನ್ನು ಪಡೆಯಲಿಲ್ಲ ಎಂದಿದ್ದರು.
ಹಿಂದೆ ಇದೇ ನೆಪವೊಡ್ಡಿ ಪ್ರತಿವಾದಿಗಳ ವಕೀಲರು ಪ್ರಕರಣದ ವಿಚಾರಣೆ ಮುಂದೂಡಿಕೆಗೆ ಮನವಿ ಮಾಡಿದಾಗ ನ್ಯಾಯಪೀಠದ ನೇತೃತ್ವ ವಹಿಸಿದ್ದ ಜಸ್ಟಿಸ್ ಜೋಸೆಫ್ ಅವರ ನಿವೃತ್ತಿ ತನಕ ಈ ರೀತಿ ಉದ್ದೇಶಪೂರ್ವಕವಾಗಿ ಪ್ರಕರಣ ಮುಂದೂಡಿಕೆಗೆ ಯತ್ನಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸದ್ಯ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ.
ಮುಂದಿನ ವಿಚಾರಣೆ ಜುಲೈ 10ಕ್ಕೆ ನಿಗದಿಯಾಗಿದೆ. ನ್ಯಾಯಪೀಠದ ನೇತೃತ್ವ ವಹಿಸಿರುವ ಜಸ್ಟಿಸ್ ಜೋಸೆಫ್ ಜೂನ್ 16ರಂದು ನಿವೃತ್ತರಾಗಲಿದ್ದಾರೆ.