ಪುರುಷರ ವಿದ್ಯಾರ್ಥಿ ನಿಲಯಕ್ಕೆ ಅನಧಿಕೃತ ಭೇಟಿ: ರಾಹುಲ್ ಗಾಂಧಿಗೆ ನೋಟಿಸ್ ಜಾರಿಗೊಳಿಸಿದ ದಿಲ್ಲಿ ವಿವಿ

Update: 2023-05-11 11:08 GMT

ಹೊಸದಿಲ್ಲಿ: ಕಳೆದ ವಾರ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ನಿಲಯಕ್ಕೆ ದಿಢೀರನೇ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದಿಲ್ಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ನಿಲಯದ ಅಧ್ಯಕ್ಷರು ಬುಧವಾರ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಕಳೆದ ಶುಕ್ರವಾರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪುರುಷರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರೊಂದಿಗೆ ಊಟ ಸೇವಿಸಿದ ಬೆನ್ನಿಗೇ ಈ ಕ್ರಮ ಕೈಗೊಳ್ಳಲಾಗಿದೆ.

"ಝೆಡ್ ಪ್ಲಸ್ ಭದ್ರತೆ ಹೊಂದಿರುವ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರ ಇಂತಹ ನಡವಳಿಕೆಯು ಅವರ ಘನತೆಗೆ ಹೊರತಾದುದಾಗಿದೆ" ಎಂದು ವಿದ್ಯಾರ್ಥಿ ನಿಲಯದ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರಡು ಪುಟಗಳ ನೋಟಿಸ್ ಅನ್ನು ವಿದ್ಯಾರ್ಥಿ ನಿಲಯದ ಅಧ್ಯಕ್ಷ ಕೆ.ಪಿ.ಸಿಂಗ್ ಅವರು ರಾಹುಲ್ ಗಾಂಧಿಗೆ ರವಾನಿಸಿದ್ದು, ಇಂತಹ ಘಟನೆಯು ಅತಿಕ್ರಮಣ ಪ್ರವೇಶ ಹಾಗೂ ಹೊಣೆಗೇಡಿ ನಡವಳಿಕೆಗೆ ಸಮನಾಗುತ್ತದೆ ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ಇಂತಹ ನಡೆ ಪ್ರದರ್ಶಿಸುವುದನ್ನು ನಿಲ್ಲಿಸಬೇಕು ಹಾಗೂ ತಡೆ ಹಿಡಿಯಬೇಕು ಎಂದೂ ನೋಟಿಸ್‌ನಲ್ಲಿ ರಾಹುಲ್ ಗಾಂಧಿಗೆ ಸೂಚಿಸಲಾಗಿದೆ.

ಮೂರು ವಾಹನಗಳೊಂದಿಗೆ ಅನಿರೀಕ್ಷಿತ ಪ್ರವೇಶ ಮಾಡಿರುವುದು ವಿದ್ಯಾರ್ಥಿ ನಿಲಯದಲ್ಲಿ ಅಳವಡಿಸಲಾಗಿರುವ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದೂ ಅಧ್ಯಕ್ಷ ಕೆ‌.ಪಿ.ಸಿಂಗ್ ಅವರು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದಾರೆ.

Similar News