×
Ad

ಪುತ್ತೂರು: ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್ ನ ಅಶೋಕ್ ಕುಮಾರ್ ರೈ

Update: 2023-05-13 14:30 IST

ಪುತ್ತೂರು, ಮೇ 13: ತೀವ್ರ ಕುತೂಹಲ ಕೆರಳಿಸಿದ ಚುನಾವಣಾ ಫಲಿತಾಂಶದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ರೋಚಕ ಗೆಲುವು ಸಾಧಿಸಿದ್ದಾರೆ.

ತನ್ನ ಸಮೀಪದ ಪ್ರತಿಸ್ಪರ್ಧಿ, ಪಕ್ಷೇತರ ಅಭ್ಯರ್ಥಿ, ಸಂಘ ಪರಿವಾರದ ಅರುಣ್ ಕುಮಾರ್ ಪುತ್ತಿಲರನ್ನು 3,351 ಮತಗಳ ಅಂತರದಿಂದ ಸೋಲಿಸಿದರು. ಅಶೋಕ್ ಕುಮಾರ್ ರೈ 64,687 ಮತಗಳನ್ನು ಗಳಿಸಿದ್ದರು. ನಿಕಟ ಜಿದ್ದಾಜಿದ್ದಿನ ಸ್ಪರ್ಧೆ ನೀಡಿದ ಪುತ್ತಿಲ ಅಂತಿಮವಾಗಿ 61,336 ಮತಗಳನ್ನು ಗಳಿಸಿ ಸೋಲೊಪ್ಪಿಕೊಂಡಿದ್ದಾರೆ. 36,526 ಮತಗಳನ್ನು ಗಳಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಮತ ಎಣಿಕೆಯ ಆರಂಭಿಕ ಹಂತದಿಂದ ಅಂತಿಮ ಸುತ್ತಿನ ವರೆಗೆ ಇಲ್ಲಿ ಮುನ್ನಡೆ-ಹಿನ್ನಡೆ ಹಾವು-ಏಣಿ ಆಟವಾಡುತ್ತಿತ್ತು. ಆರಂಭಿಕ ಸುತ್ತಿನ ಎಣಿಕೆಯಲ್ಲಿ ಅಲ್ಪ ಮತಗಳ ಮುನ್ನಡೆ ಸಾಧಿಸಿದ್ದ ಅಶೋಕ್ ರೈ  6ನೇ ಸುತ್ತಿನ ವರೆಗೂ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ 7ನೇ ಸುತ್ತಿನಲ್ಲಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಸಾಧಿಸಿದರು. ಮುನ್ನಡೆಯ ಅಂತರ 92 ಮತಗಳು. 11ನೇ ಸುತ್ತಿನ ವರೆಗೆ ಈ ಮುನ್ನಡೆಯನ್ನು ಕಾಯ್ದುಕೊಳ್ಳುವ ಮೂಲಕ ಜಿದ್ದಾಜಿದ್ದಿನ ಪೈಪೋಟಿ ನೀಡುವ ಮೂಲಕ ಕುತೂಹಲ ಮೂಡಿಸಿದ್ದರು. 12ನೇ ಸುತ್ತಿನಲ್ಲಿ ಮತ್ತೆ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದ ಅಶೋಕ್ ರೈ ಕೊನೆಯವರೆಗೆ ಇದನ್ನು ಕಾಯ್ದುಕೊಂಡು ಅಂತಿಮವಾಗಿ ಗೆಲುವಿನ ನಗೆ ಬೀರಿದರು.

ಪುತ್ತೂರು ತಾಲೂಕಿನ ಕೋಡಿಂಬಾಡಿಯವರಾದ  ಅಶೋಕ್ ಕುಮಾರ್ ರೈ ಯಶಸ್ವಿ ಉದ್ಯಮಿ. ರೈ ಎಸ್ಟೇಟ್ಸ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅವರು ಡಿ.ವಿ. ಸದಾನಂದ ಗೌಡರ ಆಪ್ತರಾಗಿದ್ದವರು. ಈ ಬಾರಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು, ಟಿಕೆಟ್ ಸಿಗುವಲ್ಲಿನ ಗೊಂದಲದ ಮಧ್ಯೆಯೇ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಟಿಕೆಟ್ ಪಡೆದ ಅವರು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Similar News