ಆರ್ಯನ್ ಖಾನ್ ಪ್ರಕರಣ: 25 ಕೋಟಿ ರೂ. ಸುಲಿಗೆ ಮಾಡಲು ಬಯಸಿದ್ದ ಸಾಕ್ಷಿ ಕೆ.ಪಿ.ಗೋಸಾವಿ; ಸಿಬಿಐ

Update: 2023-05-15 12:23 GMT

ಮುಂಬೈ: ಆರ್ಯನ್ ಖಾನ್ ಮಾದಕ ದ್ರವ್ಯ ಸಾಗಾಟ ಪ್ರಕರಣದ ಸ್ವತಂತ್ರ ಸಾಕ್ಷಿ ಕೆ.ಪಿ. ಗೋಸಾವಿ, ಆರ್ಯನ್ ಖಾನ್ ಕುಟುಂಬದಿಂದ ರೂ. 25 ಕೋಟಿ ಸುಲಿಗೆ ಮಾಡಲು ಬಯಸಿದ್ದ ಎಂದು ಈ ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದ ಸಿಬಿಐ ಬಯಲು ಮಾಡಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಾದಕ ದ್ರವ್ಯ ಹೊಂದಿದ್ದ ಪ್ರಕರಣದಲ್ಲಿ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ವಿರುದ್ಧ ದೋಷಾರೋಪ ಹೊರಿಸಬಾರದಿದ್ದರೆ ರೂ. 25 ಕೋಟಿ ನೀಡಬೇಕು ಎಂದು ಬೇಡಿಕೆ ಒಡ್ಡಿದ್ದ ಮಾಜಿ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸಿಬಿಐ ಇತ್ತೀಚೆಗಷ್ಟೆ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿತ್ತು.

ಅಕ್ಟೋಬರ್ 2, 2021ರಂದು ಕಾರ್ಡೆಲಿಯಾ ಪ್ರಯಾಣಿಕರ ಹಡಗಿನಲ್ಲಿ ಮಾದಕ ವಸ್ತು ಹೊಂದಿದ್ದ ಆರೋಪದಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು.

ಮುಂಬೈ, ದಿಲ್ಲಿ, ರಾಂಚಿ, ಲಕ್ನೊ, ಗುವಾಹಟಿ ಹಾಗೂ ಚೆನ್ನೈ ಸೇರಿದಂತೆ ದೇಶದ 29 ಭಾಗಗಳಲ್ಲಿ ಶುಕ್ರವಾರ ಜಂಟಿ ಶೋಧ ಕಾರ್ಯ ನಡೆಸಲಾಗಿದೆ. ಇದಕ್ಕೂ ಮುನ್ನ 2008ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ವಾಂಖೆಡೆ ಹಾಗೂ ಇನ್ನಿತರ ನಾಲ್ವರಾದ ಮಾದಕ ವಸ್ತು ನಿಯಂತ್ರಣ ದಳದ ಅಧೀಕ್ಷಕ ವಿಶ್ವ ವಿಜಯ್ ಸಿಂಗ್, ಗುಪ್ತಚರ ಅಧಿಕಾರಿ ಆಶಿಶ್ ರಂಜನ್ ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳಾದ ಕೆ‌.ಪಿ.ಗೋಸಾವಿ ಹಾಗೂ ಸ್ಯಾನ್‌ವಿಲೆ ಡಿಸೋಝಾ ವಿರುದ್ಧ ಈ ಪ್ರಕರಣದಲ್ಲಿ ಸಿಬಿಐ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದೆ.

ವಾಂಖೆಡೆ ಹಾಗೂ ಮತ್ತಿತರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-B (ಕ್ರಿಮಿನಲ್ ಪಿತೂರಿ ಆರೋಪ), 388 (ಸುಲಿಗೆಯ ಬೆದರಿಕೆ) ಅಲ್ಲದೆ ಮಾದಕ ವಸ್ತು ನಿಯಂತ್ರಣ ದಳದ ದೂರನ್ನು ಆಧರಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯೂ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ.

Similar News