ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ, ಆದರೆ..: ವಿಪಕ್ಷಗಳ ಒಗ್ಗಟ್ಟಿನ ಕುರಿತು ಮಮತಾ ಬ್ಯಾನರ್ಜಿ ಹೇಳಿದ್ದೇನು?

Update: 2023-05-15 15:57 GMT

ಕೋಲ್ಕತ್ತಾ: 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲೆಲ್ಲಿ ಬಲಿಷ್ಠವಾಗಿದೆಯೊ ಅಲ್ಲೆಲ್ಲ ನಮ್ಮ ಪಕ್ಷ ಬೆಂಬಲಿಸಲಿದೆ ಎಂದು ಸೋಮವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಇದೇ ಮೊದಲ ಬಾರಿಗೆ ಮುಂಬರುವ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಕಾರ್ಯತಂತ್ರದ ಕುರಿತು ಮಮತಾ ಬ್ಯಾನರ್ಜಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, "ಕಾಂಗ್ರೆಸ್ ಪಕ್ಷ ಎಲ್ಲೆಲ್ಲ ಬಲಿಷ್ಠವಾಗಿದೆಯೋ ಅಲ್ಲೆಲ್ಲ ಹೋರಾಡಲಿ. ನಾವು ಅವರಿಗೆ ಬೆಂಬಲ ನೀಡುತ್ತೇವೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಅವರು ಇತರೆ ರಾಜಕೀಯ ಪಕ್ಷಗಳಿಗೂ ಬೆಂಬಲ ನೀಡಬೇಕು" ಎಂದು ಹೇಳಿದ್ದಾರೆ.

ಆದರೆ, ಕಾಂಗ್ರೆಸ್ ಪಕ್ಷ ಬೆಂಬಲ ಪಡೆಯಬೇಕಿದ್ದರೆ ಇತರೆ ರಾಜಕೀಯ ಪಕ್ಷಗಳನ್ನೂ ಬೆಂಬಲಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಾದೇಶಿಕ ಪಕ್ಷಗಳು ಎಲ್ಲೆಲ್ಲ ಬಲಿಷ್ಠವಾಗಿಯೋ ಅಲ್ಲೆಲ್ಲ ಅವಕ್ಕೆ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡುವ ಹಂಚಿಕೆ ಸೂತ್ರಕ್ಕೆ ಆದ್ಯತೆ ನೀಡಬೇಕು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆಯೂ ಆದ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.

"ಬಲಿಷ್ಠ ಪ್ರಾದೇಶಿಕ ಪಕ್ಷಗಳಿಗೆ ಆದ್ಯತೆ ನೀಡಬೇಕು" ಎಂದೂ ಹೇಳಿದ್ದಾರೆ.

ಇದಕ್ಕೂ ಮುನ್ನ ಆಡಳಿತಾರೂಢ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದ ಕರ್ನಾಟಕದ ಜನತೆಯನ್ನು ಅಭಿನಂದಿಸಿದ ಮಮತಾ ಬ್ಯಾನರ್ಜಿ, ಈ ಹಿಂದೆ ತಮ್ಮ ಮಾತೃಪಕ್ಷದೊಂದಿಗೆ ಹೊಂದಿದ್ದ ಭಿನ್ನಾಪ್ರಾಯದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

Similar News