ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ

Update: 2023-05-15 18:39 GMT

ಮಾನ್ಯರೇ,

ಭಾರತದಲ್ಲಿ ಶಿಕ್ಷಣದ ಹಕ್ಕು ಮೂಲಭೂತ ಹಕ್ಕಾಗಿದೆ, ಇದು 6 ರಿಂದ 14ವರ್ಷಗಳ ನಡುವಿನ ಭಾರತದ ಪ್ರತಿಯೊಬ್ಬ ನಾಗರಿಕನೂ/ಳೂ ಕಡ್ಡಾಯ ಶಿಕ್ಷಣವನ್ನು ಪಡೆಯಬೇಕು ಎಂದು ಹೇಳುತ್ತದೆ. ಆದರೆ ಅತಿ ಹೆಚ್ಚು ಶಿಕ್ಷಣದ ಕೊರತೆ ಕಂಡು ಬರುವುದು ಗ್ರಾಮೀಣ ಪ್ರದೇಶಗಳಲ್ಲಿ. ಗ್ರಾಮೀಣ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಗಳ ಕೊರತೆ ಮತ್ತು ಶಿಕ್ಷಕರ ಕೊರತೆ ಅತಿ ಹೆಚ್ಚಾಗಿ ಕಂಡು ಬರುತ್ತಿದೆ. ಜೊತೆಗೆ ಪೌಷ್ಟಿಕ ಆಹಾರ, ಪಠ್ಯಪುಸ್ತಕ, ಬಟ್ಟೆ, ಬ್ಯಾಗು ಹೀಗೆ ಹಲವು ಸಮಸ್ಯೆಗಳಿಂದಾಗಿ ಎಷ್ಟೋ ಮಕ್ಕಳು ಶಾಲೆಗೆ ಬರುವುದಿಲ್ಲ. ಕೆಲವು ಕಡೆ ಮೇಲ್ನೋಟಕ್ಕೆ ಶಾಲೆಗಳ ಕಟ್ಟಡಗಳು ಚೆನ್ನಾಗಿ ಕಾಣಿಸುತ್ತವೆ. ಆದರೆ ಒಳಗೆ ಹೋಗಿ ನೋಡಿದರೆ ಅದರ ನೈಜಸ್ಥಿತಿ ಅರಿವಾಗುತ್ತದೆ. ಮುರುಕು ಕಟ್ಟಡ, ಗೋಡೆ, ಛಾವಣಿ, ಕುಡಿಯುವ ನೀರಿಲ್ಲದಿರುವುದು, ಶೌಚಾಲಯ ಸಮಸ್ಯೆ, ಸ್ವಚ್ಛತೆಯ ಕೊರತೆಯಂತಹ ಹಲವು ಸಮಸ್ಯೆಗಳು ಇಂತಹ ಶಾಲೆಗಳಲ್ಲಿ ಕಂಡುಬರುತ್ತಿದೆ. ಕೆಲವೆಡೆ ಎರಡು ಮೂರು ವಿಷಯಗಳಿಗೆ ಒಬ್ಬ ಶಿಕ್ಷಕ ಪಾಠ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ಹೇಗೆ ಸಾಧ್ಯ? ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳೂ ಕಡಿಮೆ ಇದೆ. ಅನೇಕ ವಿದ್ಯಾರ್ಥಿಗಳು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಮೈಲುಗಟ್ಟಲೆ ದೂರ ಶಿಕ್ಷಣಕ್ಕಾಗಿ ಕ್ರಮಿಸಬೇಕಾಗಿದೆ. ಇಂತಹ ಪ್ರದೇಶಗಳಲ್ಲಿ ಸಾರಿಗೆ ಸೌಲಭ್ಯ ಇಲ್ಲದಿರುವುದು ಮತ್ತೊಂದು ಸವಾಲಾಗಿದೆ. ಶಾಲೆಗೆ ತಲುಪಲು ಮತ್ತು ಮನೆಗೆ ಹಿಂದಿರುಗಲು ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಯ ವ್ಯಯವಾಗುತ್ತದೆ.
ಗ್ರಾಮೀಣ ಶಿಕ್ಷಣವನ್ನು ಉತ್ತೇಜಿಸುವ ಪ್ರಮುಖ ಮಾರ್ಗವೆಂದರೆ ಉಚಿತ ಶಿಕ್ಷಣವನ್ನು ಹೆಚ್ಚಿಸುವುದು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಕ್ಕಳ ದಾಖಲಾತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಬಗ್ಗೆ ಹೊಸ ಸರಕಾರ ಕೂಡಲೇ ಗಮನಹರಿಸಬೇಕು.
ಹೆಚ್ಚಿನ ಶಾಲೆಗಳನ್ನು ಸ್ಥಾಪಿಸುವ ಮೂಲಕ, ಸರಿಯಾದ ಮೂಲಸೌಕರ್ಯ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಇದನ್ನು ಮಾಡಬಹುದು. ಶಾಲೆಗೆ ಹೋಗುವ ಮಕ್ಕಳ ಸಂಖ್ಯೆಯು ಪ್ರಾಥಮಿಕ ಹಂತದವರೆಗೆ ಶಿಕ್ಷಣವನ್ನು ಉಳಿಸಿಕೊಳ್ಳಬೇಕು ಎಂದು ಸರಕಾರವು ಖಚಿತಪಡಿಸಿಕೊಳ್ಳಬೇಕು. ಸಂಪನ್ಮೂಲಗಳಲ್ಲಿ ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಪ್ರಯೋಗಾಲಯಗಳು, ಆಟದ ಮೈದಾನಗಳು ಮತ್ತು ಬೆಂಚುಗಳು ಉತ್ತಮ ಸ್ಥಿತಿಯಲ್ಲಿರಬೇಕು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಲಭ್ಯವಿರಬೇಕು. ಹೆಣ್ಣು ಮಕ್ಕಳಿಗೆ ಋತು ಚಕ್ರದ ಬಗ್ಗೆ ಅರಿವು ನೀಡಬೇಕು ಅವರಿಗೆ ಸ್ಯಾನಿಟರಿ ಪ್ಯಾಡ್‌ಗಳು ಪ್ರತೀ ತಿಂಗಳು ಸಿಗುವಂತೆ ನೋಡಿಕೊಳ್ಳಬೇಕು.
 ಈ ನಿಟ್ಟಿನಲ್ಲಿ ಮುಂದಿನ ಸರಕಾರ ಕಾರ್ಯೋನ್ಮುಖವಾದರೆ ಶಿಕ್ಷಣದ ಉದ್ದೇಶವನ್ನು ಸಾಧಿಸಲು ಮತ್ತು ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಉಳಿಸಿಕೊಳ್ಳಲು ಸಹಾಯವಾಗಬಹುದು.
 

Similar News