ಕುಸ್ತಿಪಟುಗಳ ಪ್ರತಿಭಟನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತೇವೆ: ವಿನೇಶ್ ಫೋಗಟ್
ಹೊಸದಿಲ್ಲಿ: ಸೋಮವಾರ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಕುಸ್ತಿಪಟುಗಳು ಜಂತರ್ ಮಂತರ್‌ನಿಂದ ಕನ್ಹಾಟ್ ಪ್ಲೇಸ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ತಮ್ಮ ಪ್ರತಿಭಟನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಯೋಜಿಸಿರುವ ಅವರು ಇನ್ನಿತರ ಒಲಿಂಪಿಕ್ ಕ್ರೀಡಾ ಪಟುಗಳು ಹಾಗೂ ಇನ್ನಿತರ ಕ್ರೀಡಾ ಪಟುಗಳನ್ನು ಬೆಂಬಲಕ್ಕಾಗಿ ಸಂಪರ್ಕಿಸಿದ್ದಾರೆ. ಆ ಮೂಲಕ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್ ಬಂಧಿಸಬೇಕು ಎಂಬ ತಮ್ಮ ಆಗ್ರಹಕ್ಕೆ ಬೆಂಬಲ ಕ್ರೋಡೀಕರಿಸಲು ಮುಂದಾಗಿದ್ದಾರೆ ಎಂದು thehindu.com ವರದಿ ಮಾಡಿದೆ.
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರಖ್ಯಾತ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯ ಹಾಗೂ ವಿನೇಶ್ ಫೋಗಟ್ ಕಳೆದ ಎಪ್ರಿಲ್ 23ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
"ನಾವು ಒಲಿಂಪಿಕ್ ಕ್ರೀಡಾಪಟುಗಳು ಹಾಗೂ ಒಲಿಂಪಿಕ್ ಪದಕ ವಿಜೇತರ ಬೆಂಬಲಕ್ಕಾಗಿ ಅವರನ್ನು ಸಂಪರ್ಕಿಸಲಿದ್ದು, ನಮ್ಮ ಪ್ರತಿಭಟನೆಗೆ ಕಳಂಕ ಹಚ್ಚಲು ಹಾಗೂ ಸ್ಥಗಿತಗೊಳಿಸಲು ಯತ್ನಿಸುತ್ತಿರುವುದರಿಂದ ಈ ವಿಷಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದ್ದೇವೆ" ಎಂದು ಪ್ರಖ್ಯಾತ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ತಿಳಿಸಿದ್ದಾರೆ.
"ನಮ್ಮ ಸಮ್ಮತಿಯಿಲ್ಲದೆ ನಮ್ಮನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ನಮ್ಮ ಫೋಟೋಗಳನ್ನು ತೆಗೆಯಬೇಡಿ ಎಂದು ಮನವಿ ಮಾಡಿದರೂ ಕೆಲವು ವ್ಯಕ್ತಿಗಳು ನಮ್ಮ ವಿಡಿಯೊ ಹಾಗೂ ಭಾವಚಿತ್ರಗಳನ್ನು ಸೆರೆ ಹಿಡಿದಿದ್ದಾರೆ ಮತ್ತದನ್ನು ಮುಂದುವರಿಸಿದ್ದಾರೆ" ಎಂದು ವಿನೇಶ್ ಫೋಗಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ, ಸೋಮವಾರ ಬೆಳಗ್ಗೆ 6 ಗಂಟೆ ಹೊತ್ತಿಗೆ ಜಂತರ್ ಮಂತರ್‌ನಿಂದ ಕನ್ಹಾಟ್ ಪ್ಲೇಸ್‌ವರೆಗೆ ಪ್ರತಿಭಟನಾನಿರತ ಕುಸ್ತಿಪಟುಗಳು ಮೆರವಣಿಗೆ ನಡೆಸಿದರು. ತಮ್ಮ ಕೈಯಲ್ಲಿ ಭಿತ್ತಿ ಫಲಕಗಳನ್ನು ಹಿಡಿದಿದ್ದ ಅವರು, ಅದರಲ್ಲಿ, "ತ್ರಿವರ್ಣ ಬಣ್ಣ ಹೆಮ್ಮೆ ಪಡುವಂತೆ ಮಾಡಿದ್ದವರನ್ನು ಕೈ ಬಿಡಲಾಗುತ್ತಿದೆ" ಎಂದು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಸ್ತಿ ಪಟುಗಳನ್ನು ಅಭಿನಂದಿಸುತ್ತಿರುವ ಫೋಟೊಗಳನ್ನೂ ಪ್ರದರ್ಶಿಸಲಾಯಿತು. ನಮ್ಮ ಒಂದೇ ಬೇಡಿಕೆ ಬಂಧನ ಎಂದು ಕುಸ್ತಿ ಪಟುಗಳು ಪುನರುಚ್ಚರಿಸಿದರು.