ಮೇ 19ರಿಂದ ಮೂರು ದಿನಗಳಿಗೊಮ್ಮೆ ನೀರು ಪೂರೈಕೆಗೆ ಉಡುಪಿ ನಗರಸಭೆ ನಿರ್ಧಾರ

Update: 2023-05-16 11:03 GMT

ಉಡುಪಿ, ಮೇ 16: ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಡ್ಯಾಂನಲ್ಲಿ ನೀರಿನ ಅಭಾವ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ಮೇ 19ರಿಂದ ಮೂರು ದಿನಗಳಿಗೊಮ್ಮೆ ನೀರು ಪೂರೈಸಲು ಉಡುಪಿ ನಗರಸಭೆ ನಿರ್ಧರಿಸಿದೆ.

ಉಡುಪಿ ನಗರಸಭೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಇಂದು ನಡೆಸಿದ ಸಭೆಯಲ್ಲಿ ಈ ನಿರ್ಣಯ ಮಾಡಲಾಯಿತು. ಮುಂದಿನ ಮಳೆಗಾಲ ಪ್ರಾರಂಭವಾಗುವವರೆಗೆ ಸಮರ್ಪಕ ರೀತಿಯಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೇಷನಿಂಗ್ ಮೂಲಕ ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಹಾಗೂ ಪ್ರತಿ ವಾರ್ಡಿನ ಬೇಡಿಕೆಯಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನೀರು ಪೂರೈಕೆಯ ಬಗ್ಗೆ ವಾರ್ಡಿನ ನಗರಸಭಾ ಸದಸ್ಯರಿಗೆ ಮಾಹಿತಿ ನೀಡಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಮುಂದಿನ ವಾರ ಮಳೆಗಾಲ ಪೂರ್ವ ಸಿದ್ಧತೆಯಾಗಿ ಚರಂಡಿ ಹೂಳೆತ್ತುವುದು, ಟಾಸ್ಕ್ ಫೋರ್ಸ್ ಹಾಗೂ ಇತರ ತುರ್ತು ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ, ಪೌರಾಯುಕ್ತ ರಮೇಶ್ ನಾಯ್ಕ್, ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ನೀರಿನ ಸಂಗ್ರಹ 3 ಮೀಟರ್‌ಗೆ ಇಳಿಕೆ

ನಗರಕ್ಕೆ ನೀರು ಪೂರೈಸುವ ಬಜೆ ಡ್ಯಾಮ್‌ನಲ್ಲಿ ಇಂದು ನೀರಿನ ಸಂಗ್ರಹವು 3 ಮೀಟರ್‌ಗೆ ಇಳಿದಿದೆ. ರವಿವಾರ ನೀರಿನ ಸಂಗ್ರಹವು 3.5ಮೀಟರ್ ಇತ್ತು.

ಈ ನೀರನ್ನು ಪ್ರತಿದಿನ ಬಳಕೆ ಮಾಡಿದರೆ 10 ದಿನಕ್ಕೆ ಸಾಕಾಗಬಹುದು. ಅದೇ ಮೂರು ದಿನಗಳಿಗೊಮ್ಮೆ ನೀರು ಪೂರೈಸಿದರೆ 20ದಿನಗಳ ಕಾಲ ನೀರು ಪೂರೈಸಬಹುದು ಎಂಬುದು ಅಧಿಕಾರಿಗಳ ಲೆಕ್ಕಚಾರ. 

ಸ್ವರ್ಣ ನದಿಯ ವಿವಿಧ ಹೊಂಡ ಗಳಲ್ಲಿ ಸಂಗ್ರಹವಾಗಿರುವ ನೀರನ್ನು ಪಂಪ್ ಮೂಲಕ ಬಜೆ ಡ್ಯಾಮ್‌ಗೆ ಹರಿಸುವ ಕಾರ್ಯ ಮುಂದುವರೆದಿದೆ. ಇಂದಿನಿಂದ ಮಾಣೈ ಹೊಂಡದಿಂದ ನೀರು ಪಂಪ್ ಮಾಡಲಾಗುವುದೆಂದು  ಪೌರಾಯುಕ್ತ ರಮೇಶ್ ನಾಯ್ಕ್ ತಿಳಿಸಿದ್ದಾರೆ. 

ಟೆಂಡರ್ ಕರೆದರೂ ಯಾರೂ ಕೂಡ ಟ್ಯಾಂಕರ್ ನೀರು ಒದಗಿಸಲು ಮುಂದೆ ಬಾರದ ಕಾರಣ, ನೀರಿನ ಸಮಸ್ಯೆ ಇರುವ ಆಯಾ ವಾರ್ಡ್‌ಗಳ ಸದಸ್ಯರು ಟ್ಯಾಂಕರ್ ವ್ಯವಸ್ಥೆ ಮಾಡಿದರೆ ನೀರು ಪೂರೈಸಲು ಇಂದು ನಡೆದ ಶಾಸಕರ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.

Similar News