ಈ ತಿಂಗಳು ನೂತನ ಸಂಸತ್‌ ಕಟ್ಟಡ ಉದ್ಘಾಟನೆ ನಿರೀಕ್ಷೆ

Update: 2023-05-16 14:03 GMT

ಹೊಸದಿಲ್ಲಿ: ದೇಶದ ಹೊಸ ಸಂಸತ್‌ ಕಟ್ಟಡವನ್ನು ಈ ತಿಂಗಳು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಸಾಧ್ಯತೆಯಿದೆ. ಕಟ್ಟದ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು ಕೇಂದ್ರದ ಎನ್‌ಡಿಎ ಸರ್ಕಾರದ ಒಂಬತ್ತು ವರ್ಷಗಳ ಪೂರೈಸುವ ನೆನಪಿಗಾಗಿ ಈ ತಿಂಗಳ ಕೊನೆಯ ಭಾಗದಲ್ಲಿ ಕಟ್ಟಡ ಉದ್ಘಾಟಿಸುವ ನಿರೀಕ್ಷೆಯಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೊದಲ ಬಾರಿಗೆ ಒಂಬತ್ತು ವರ್ಷಗಳ ಹಿಂದೆ ಮೇ 26, 2014ರಂದು ಪ್ರಮಾಣವಚನ ಸ್ವೀಕರಿಸಿದ್ದರು.

ನೂತನ ಸಂಸತ್‌ ಕಟ್ಟಡ ನಾಲ್ಕು ಅಂತಸ್ತುಗಳನ್ನು ಹೊಂದಿದ್ದು ಅಂದಾಜು ರೂ. 970 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ 1,224 ಸಂಸದರಿಗೆ ಸ್ಥಳಾವಕಾಶವಿದೆ. ಈ ಕಟ್ಟಡದಲ್ಲಿ ಒಂದು ವೈಭವೋಪೇತ ಸಭಾಂಗಣವಿದ್ದು ಇಲ್ಲಿ ಭಾರತದ ಪ್ರಜಾಪ್ರಭುತ್ವದ ಪರಂಪರೆಯನ್ನು ಬಿಂಬಿಸಲಾಗಿದೆ.

ಸಂಸತ್ತಿನ ಎರಡೂ ಸದನಗಳ ಸಿಬ್ಬಂದಿಗೆ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ ವಿನ್ಯಾಸಗೊಳಿಸಿದ ಹೊಸ ಸಮವಸ್ತ್ರ ಇರಲಿದೆ.

ಕಟ್ಟಡಕ್ಕೆ ಗ್ಯಾನ್‌ ದ್ವಾರ್‌, ಶಕ್ತಿ ದ್ವಾರ್‌ ಮತ್ತು ಕರ್ಮ ದ್ವಾರ್‌ ಎಂಬ ಮೂರು ದ್ವಾರಗಳಿರಲಿದೆ ಹಾಗೂ ಸಂಸದರು, ವಿಐಪಿಗಳು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶವಿರಲಿದೆ.

ಹೊಸ ಸಂಸತ್‌ ಕಟ್ಟಡದ ಶಿಲಾನ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್‌ 2020ರಲ್ಲಿ ನೆರವೇರಿಸಿದ್ದರು.

Similar News