×
Ad

ವರ್ಗಾವಣೆ ಆದೇಶ ಪಾಲಿಸದ ಐಎಎಸ್ ಅಧಿಕಾರಿಗೆ ದಿಲ್ಲಿ ಸರಕಾರದ ನೋಟಿಸ್

Update: 2023-05-16 21:11 IST

ಹೊಸದಿಲ್ಲಿ: ಕಳೆದ ವಾರ ಸೇವಾ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ತೆರವುಗೊಳಿಸಲ್ಪಟ್ಟಿದ್ದ ಐಎಎಸ್ ಅಧಿಕಾರಿ ಆಶಿಷ್ ಮೋರೆಯವರಿಗೆ ದಿಲ್ಲಿ ಸರಕಾರವು ಶೋಕಾಸ್ ನೋಟಿಸನ್ನು ಹೊರಡಿಸಿದೆ.

ದಿಲ್ಲಿ ಸರಕಾರವು ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆ ಅಧಿಕಾರವನ್ನು ಹೊಂದಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ ಬಳಿಕ ಮೇ 11ರಂದು ಮೋರೆಯವರನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು.

ಆಪ್ ನೇತೃತ್ವದ ಸರಕಾರವು ಮೋರೆಯವರನ್ನು ಬದಲಿಸುವ ನಿರ್ಧಾರವನ್ನು ಪಾಲಿಸದ್ದಕ್ಕೆ 24 ಗಂಟೆಗಳಲ್ಲಿ ಉತ್ತರಿಸುವಂತೆ ಆಡಳಿತಶಾಹಿಗೆ ಸೂಚಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸದಿದ್ದಕ್ಕಾಗಿ ಮೋರೆಯವರ ವಿರುದ್ಧ ಶಿಸ್ತು ಕ್ರಮವನ್ನು ಆರಂಭಿಸಲು ಸರಕಾರವು ಉದ್ದೇಶಿಸಿದೆ ಎಂದು ಅನಾಮಿಕ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದರು.

ಮೋರೆಯವರನ್ನು ವರ್ಗಾವಣೆಗೊಳಿಸಿದ ಬಳಿಕ ಅವರು ಅನಿರೀಕ್ಷಿತವಾಗಿ ಸಚಿವಾಲಯವನ್ನು ತೊರೆದಿದ್ದು,ತನ್ನ ಫೋನನ್ನು ಸ್ವಿಚ್ ಆಫ್ ಮಾಡಿದ್ದಾರೆ ಎಂದು ಸೇವೆಗಳ ಸಚಿವ ಸೌರಭ್ ಭಾರದ್ವಾಜ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮೋರೆಯವರನ್ನು ಹುದ್ದೆಯಿಂದ ತೆಗೆದಿರುವ ಬಗ್ಗೆ ಟಿಪ್ಪಣಿಯೊಂದನ್ನು ಅವರ ನಿವಾಸಕ್ಕೆ ರವಾನಿಸಲಾಗಿತ್ತು,ಆದರೆ ಅವರು ಅದನ್ನು ಅಂಗೀಕರಿಸಿರಲಿಲ್ಲ. ಬಳಿಕ ಇನ್ನೊಂದು ಟಿಪ್ಪಣಿಯನ್ನು ಅವರ ಇ-ಮೇಲ್ ಮತ್ತು ವಾಟ್ಸ್ಆ್ಯಪ್ಗೆ ಕಳುಹಿಸಲಾಗಿತ್ತಾದರೂ ಅದಕ್ಕೂ ಅವರು ಪ್ರತಿಕ್ರಿಯಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಮೇ 11ರಂದು ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರಕಾರದ ಕಾರ್ಯಕಾರಿ ಅಧಿಕಾರಗಳ ವ್ಯಾಪ್ತಿ ಮತ್ತು ಆಡಳಿತಾತ್ಮಕ ಸೇವೆಗಳ ಮೇಲೆ ಅದರ ನಿಯಂತ್ರಣ ಕುರಿತು ಅರವಿಂದ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರ ಮತ್ತು ಕೇಂದ್ರದ ನಡುವಿನ ವಿವಾದದಲ್ಲಿ ಸರ್ವಾನುಮತದ ತೀರ್ಪನ್ನು ಹೊರಡಿಸಿತ್ತು.

ದಿಲ್ಲಿ ಸರಕಾರವು ಸಾರ್ವಜನಿಕ ಸುವ್ಯವಸ್ಥೆ,ಪೊಲೀಸ್ ಮತ್ತು ಭೂ ಇಲಾಖೆಗಳನ್ನು ಹೊರತುಪಡಿಸಿ ಅಧಿಕಾರಿಗಳ ಮೇಲೆ ಶಾಸಕಾಂಗ ಅಧಿಕಾರವನ್ನು ಹೊಂದಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು.

ತೀರ್ಪಿನ ಬೆನ್ನಲ್ಲೇ ದಿಲ್ಲಿ ಸರಕಾರವು ದಿಲ್ಲಿ ಜಲಮಂಡಳಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಕೆ.ಸಿಂಗ್ ಅವರನ್ನು ಮೋರೆ ಸ್ಥಾನಕ್ಕೆ ನೇಮಕಗೊಳಿಸಿತ್ತು.

ಹಲವಾರು ಹುದ್ದೆಗಳಲ್ಲಿರುವ ಅಧಿಕಾರಿಗಳು ಸಾರ್ವಜನಿಕ ಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದ ಕೇಜ್ರಿವಾಲ್, ಅಂತಹ ಹುದ್ದೆಗಳನ್ನು ಗುರುತಿಸಲಾಗುವುದು. ಅವುಗಳನ್ನು ಒಂದೋ ಖಾಲಿ ಬಿಡಲಾಗುವುದು ಅಥವಾ ರದ್ದುಗೊಳಿಸಲಾಗುವುದು. ಅಗತ್ಯವಾದಾಗ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಲಾಗುವುದು ಎಂದು ತಿಳಿಸಿದ್ದರು

Similar News