×
Ad

ಅದಾನಿ ಗ್ರೂಪ್ ಕುರಿತು ಸೆಬಿ ತನಿಖೆ ನಡೆಸುತ್ತಿದೆ ಎಂಬ ತನ್ನ ಹೇಳಿಕೆಗೆ ಬದ್ಧತೆ ವ್ಯಕ್ತಪಡಿಸಿದ ವಿತ್ತ ಸಚಿವಾಲಯ

Update: 2023-05-16 22:20 IST

ಹೊಸದಿಲ್ಲಿ,ಮೇ 16: ಅದಾನಿ ಗ್ರೂಪ್ನ ಕೆಲವು ಕಂಪನಿಗಳಿಂದ ನಿಯಮಗಳ ಪಾಲನೆಯ ಕುರಿತು ಸೆಬಿ ತನಿಖೆ ನಡೆಸುತ್ತಿದೆ ಎಂಬ ತನ್ನ ಹೇಳಿಕೆಗೆ ತಾನು ಬದ್ಧನಾಗಿರುವುದಾಗಿ ಕೇಂದ್ರ ವಿತ್ತ ಸಚಿವಾಲಯವು ತಿಳಿಸಿದೆ. 

ತಾನು 2016ರಿಂದ ಅದಾನಿ ಗ್ರೂಪ್ ಕುರಿತು ತನಿಖೆ ನಡೆಸುತ್ತಿದ್ದೇನೆ ಎಂಬ ಹೇಳಿಕೆಯು ವಾಸ್ತವದಲ್ಲಿ ಆಧಾರರಹಿತವಾಗಿದೆ ಎಂದು ಸೆಬಿ ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ವಿತ್ತ ಸಚಿವಾಲಯದ ಈ ಹೇಳಿಕೆ ಹೊರಬಿದ್ದಿದೆ. ಅದಾನಿ ಗ್ರೂಪ್ ತನ್ನ ಕಂಪನಿಯ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿತ್ತು ಎಂಬ ಆರೋಪಗಳ ಕುರಿತು ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಎರಡು ಅರ್ಜಿಗಳ ವಿಚಾರಣೆಯನ್ನು ಕೈಗತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸೆಬಿ ಈ ನಿವೇದನೆಯನ್ನು ಮಾಡಿಕೊಂಡಿತ್ತು.

ನ್ಯಾಯಾಲಯದಲ್ಲಿ ಸೆಬಿ ಹೇಳಿಕೆಯು ಸಂಸತ್ತಿನಲ್ಲಿ ವಿತ್ತ ಸಚಿವಾಲಯದ ಉತ್ತರಕ್ಕೆ ತದ್ವಿರುದ್ಧವಾಗಿದೆ ಎಂದು ಬೆಟ್ಟು ಮಾಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಸಚಿವಾಲಯವು,ತನಿಖೆಯ ಕುರಿತು ತಾನು 2021ರಲ್ಲಿ ಲೋಕಸಭೆಯಲ್ಲಿ ನೀಡಿದ್ದ ಹೇಳಿಕೆಯು ಎಲ್ಲ ಸಂಬಂಧಿತ ಏಜೆನ್ಸಿಗಳಿಂದ ಸಮಂಜಸ ಕ್ರಮಗಳು ಮತ್ತು ಮಾಹಿತಿಗಳ ಒಳಹರಿವನ್ನು ಆಧರಿಸಿತ್ತು ಎಂದು ಟ್ವೀಟ್ನಲ್ಲಿ ತಿಳಿಸಿದೆ.

ಕೋರಲಾಗಿರುವ ತನಿಖೆಯು 51 ಭಾರತೀಯ ಕಂಪನಿಗಳಿಂದ ಜಾಗತಿಕ ಠೇವಣಿ ರಸೀದಿಗಳ ಪರಿಶೀಲನೆಯನ್ನು ಒಳಗೊಂಡಿದೆ. ಆದರೆ ಅದಾನಿ ಗ್ರೂಪ್ನ ಲಿಸ್ಟ್ ಆಗಿರುವ ಯಾವುದೇ ಕಂಪನಿಯು ಇವುಗಳಲ್ಲಿ ಸೇರಿಲ್ಲ ಎಂದು ಸೆಬಿ ತನ್ನ ಅಫಿಡವಿಟ್ನಲ್ಲಿ ತಿಳಿಸಿತ್ತು. ಜಾಗತಿಕ ಠೇವಣಿ ರಸೀದಿಗಳು ದೇಶಿಯ ಶೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ವಿದೇಶಿ ಕಂಪನಿಯಲ್ಲಿನ ಶೇರುಗಳನ್ನು ಪ್ರತಿನಿಧಿಸಲು ಬ್ಯಾಂಕುಗಳು ವಿತರಿಸುವ ಪ್ರಮಾಣಪತ್ರಗಳಾಗಿವೆ.

ಆದರೆ,ನಿಯಮಗಳ ಅನುಸರಣೆಗೆ ಸಂಬಂಧಿಸಿದಂತೆ ಸೆಬಿ ಅದಾನಿ ಗ್ರೂಪ್ನ್ನು ತನಿಖೆಗೊಳಪಡಿಸಿದೆ ಎಂದು 2021ರಲ್ಲಿ ಕೇಂದ್ರ ವಿತ್ತ ಸಚಿವಾಲಯವು ಲೋಕಸಭೆಯಲ್ಲಿ ನೀಡಿದ್ದ ಉತ್ತರದಲ್ಲಿ ತಿಳಿಸಲಾಗಿತ್ತು. ಸೆಬಿ 2016ರಲ್ಲಿ ಜಾಗತಿಕ ಠೇವಣಿ ರಸೀದಿಗಳ ವಿತರಣೆಗೆ ಸಂಬಂಧಿಸಿದಂತೆ ಅಲ್ಬುಲಾ ಇನ್ವೆಸ್ಟ್ಮೆಂಟ್ ಫಂಡ್,ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್ಮೆಂಟ್ ಫಂಡ್ಗಳ ಖಾತೆಗಳ ಸ್ಥಂಭನಕ್ಕೆ ಆದೇಶಿಸಿತ್ತು ಎನ್ನುವುದನ್ನೂ ಉತ್ತರವು ತೋರಿಸಿತ್ತು. ಈ ಫಂಡ್ಗಳು ಅದಾನಿ ಗ್ರೂಪ್ ಕಂಪನಿಗಳ ಶೇರುಗಳನ್ನು ಹೊಂದಿವೆ.

Similar News