ಶ್ರೀನಗರದಲ್ಲಿ ಜಿ20 ಸಭೆ ಆಯೋಜನೆಯ ನಿರ್ಧಾರವನ್ನು ಸಮರ್ಥಿಸಿಕೊಂಡ ಭಾರತ
ಹೊಸದಿಲ್ಲಿ,ಮೇ 16: ಭಾರತವು ಶ್ರೀನಗರದಲ್ಲಿ ಜಿ20 ಸಭೆಯನ್ನು ಆಯೋಜಿಸುತ್ತಿರುವ ಕುರಿತು ವಿಶ್ವಸಂಸ್ಥೆಯ ಸ್ವತಂತ್ರ ತಜ್ಞರೋರ್ವರು ಎತ್ತಿರುವ ಪ್ರಶ್ನೆಗಳನ್ನು ತಿರಸ್ಕರಿಸಿರುವ ಕೇಂದ್ರವು,ಅವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಸೋಮವಾರ ಅಲ್ಪಸಂಖ್ಯಾತರ ವಿಷಯಗಳ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಫೆರ್ನಾಂಡ್ ಡಿ ವಾರೆನ್ನೆಸ್ ಅವರು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದರು. ಭಾರತ ಸರಕಾರವು ಕೆಲವರು ಮಿಲಿಟರಿ ಅತಿಕ್ರಮಣ ಎಂದು ಬಣ್ಣಿಸಿರುವ ಸ್ಥಿತಿಯನ್ನು ಸಹಜಗೊಳಿಸಲು ಮತ್ತು ಅಂತರರಾಷ್ಟ್ರೀಯ ಮಾನ್ಯತೆಯ ಮೊಹರನ್ನಾಗಿ ಬಿಂಬಿಸಲು ಜಿ20 ಸಭೆಯನ್ನು ಸಾಧನವಾಗಿಸಿಕೊಳ್ಳಲು ಬಯಸುತ್ತಿದೆ ಎಂದು ಅವರು ತನ್ನ ಪೋಸ್ಟ್ ನಲ್ಲಿ ಹೇಳಿದ್ದರು.
ಪ್ರವಾಸೋದ್ಯಮ ಕುರಿತು ಜಿ20 ಕಾರ್ಯಕಾರಿ ಗುಂಪಿನ ಸಭೆಯು ಮೇ 22ರಿಂದ 24ರವರೆಗೆ ಶ್ರೀನಗರದಲ್ಲಿ ನಡೆಯಲಿದೆ.
2017ರಲ್ಲಿ ವಿಶೇಷ ವರದಿಗಾರರಾಗಿ ನೇಮಕಗೊಂಡಿರುವ ಕೆನಡಾದ ಪ್ರೊಫೆಸರ್ ವಾರೆನ್ನೆಸ್, 2019 ಆಗಸ್ಟ್ನಲ್ಲಿ ಭಾರತವು ಜಮ್ಮು-ಕಾಶ್ಮೀರದ ಸಾಂವಿಧಾನಿಕ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ಮಾನವ ಹಕ್ಕುಗಳ ಉಲ್ಲಂಘನೆಗಳು ಮಾತ್ರ ಹೆಚ್ಚಾಗಿವೆ ಎಂದು ಹೇಳಿದ್ದಾರೆ. ಸ್ಥಳೀಯ ಕಾಶ್ಮೀರಿಗಳನ್ನು ತಮ್ಮದೇ ನೆಲದಲ್ಲಿ ದಮನಿಸಲು ಪ್ರದೇಶದ ಹೊರಗಿನ ಹಿಂದುಗಳನ್ನು ಗಣನೀಯ ಸಂಖ್ಯೆಯಲ್ಲಿ ಅಲ್ಲಿಗೆ ಸ್ಥಳಾಂತರಿಸುವ ಮೂಲಕ ಜಮ್ಮು-ಕಾಶ್ಮೀರದ ಜನಸಂಖ್ಯಾ ಸ್ವರೂಪದಲ್ಲಿ ಬಲವಂತದ ಬದಲಾವಣೆಗಳನ್ನು ತರಲಾಗುತ್ತಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಬೃಹತ್ ಮಾನವ ಹಕ್ಕುಗಳ ಉಲ್ಲಂಘನೆಗಳು, ಅಕ್ರಮ ಹಾಗೂ ನಿರಂಕುಶ ಬಂಧನಗಳು,ರಾಜಕೀಯ ಕಿರುಕುಳಗಳು,ನಿರ್ಬಂಧಗಳು ಹಾಗೂ ಮುಕ್ತ ಮಾಧ್ಯಮಗಳು ಮತ್ತು ಮಾನವ ಹಕ್ಕುಗಳ ರಕ್ಷಕರ ದಮನ ಮುಂದುವರಿದಿರುವ ಸಮಯದಲ್ಲಿ ಜಿ20 ಗುಂಪು ಸಹಜತೆಯ ಸೋಗಿಗೆ ಅಪ್ರಜ್ಞಾಪೂರ್ವಕವಾಗಿ ಬೆಂಬಲವನ್ನು ನೀಡುತ್ತಿದೆ ಎಂದು ಹೇಳಿರುವ ವಾರೆನ್ನೆಸ್,ಜಿ20 ಅಂತರರಾಷ್ಟ್ರೀಯ ಮಾನವ ಹಕ್ಕು ಬಾಧ್ಯತೆಗಳನ್ನು ಎತ್ತಿ ಹಿಡಿಯಬೇಕು.ಜಮ್ಮು-ಕಾಶ್ಮೀರದಲ್ಲಿಯ ಪರಿಸ್ಥಿತಿಯನ್ನು ಖಂಡಿಸಬೇಕು ಮತ್ತು ಸಭೆಯನ್ನು ನಡೆಸುವ ಮೂಲಕ ಅದನ್ನು ಕಡೆಗಣಿಸಬಾರದು ಎಂದಿದ್ದಾರೆ.
ವಾರನ್ನೆಸ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಿನಿವಾದಲ್ಲಿನ ವಿಶ್ವಸಂಸ್ಥೆಗೆ ಭಾರತದ ಕಾಯಂ ದೂತಾವಾಸವು,ಅವರ ಆಧಾರರಹಿತ ಮತ್ತು ಅನಗತ್ಯಆರೋಪಗಳನ್ನು ತಿರಸ್ಕರಿಸಿದೆ. ಜಿ20 ಅಧ್ಯಕ್ಷನಾಗಿ ಅದರ ಸಭೆಯನ್ನು ದೇಶದ ಯಾವುದೇ ಭಾಗದಲ್ಲಿ ಆಯೋಜಿಸುವುದು ಭಾರತದ ವಿಶೇಷಾಧಿಕಾರವಾಗಿದೆ ಎಂದು ಅದು ಟ್ವೀಟಿಸಿದೆ.
ವಿಶ್ವಸಂಸ್ಥೆಯ ವಿಶೇಷ ವರದಿಗಾರರು ಈ ವಿಷಯವನ್ನು ರಾಜಕೀಯಗೊಳಿಸಲು ಬೇಜವಾಬ್ದಾರಿಯಿಂದ ವರ್ತಿಸಿರುವುದು,ಹುದ್ದೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿ ತನ್ನ ಪೂರ್ವಾಗ್ರಹ ಪೀಡಿತ ನಿರ್ಣಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲು ತನ್ನ ಹುದ್ದೆಯ ದುರುಪಯೋಗ ಮಾಡಿಕೊಂಡಿರುವುದು ಆಘಾತಕಾರಿಯಾಗಿದೆ ಎಂದೂ ಅದು ಹೇಳಿದೆ.
ಈವರೆಗೆ ಪಾಕಿಸ್ತಾನವು ಕಾಶ್ಮೀರದ ವಿವಾದಿತ ಸ್ಥಾನಮಾನದಿಂದಾಗಿ ಶ್ರೀನಗರದಲ್ಲಿ ಜಿ20 ಸಭೆಯ ಆಯೋಜನೆಯನ್ನು ಬಹಿರಂಗವಾಗಿ ಆಕ್ಷೇಪಿಸಿರುವ ಏಕೈಕ ದೇಶವಾಗಿದೆ. ಚೀನಾ ಸಾರ್ವಜನಿಕವಾಗಿ ಏನನ್ನೂ ಹೇಳಿರದಿದ್ದರೂ ಕಾಶ್ಮೀರ ಕುರಿತು ಅದರ ನಿಲುವು ಪಾಕಿಸ್ತಾನದ ನಿಲುವಿಗೆ ಅನುಗುಣವಾಗಿರುವುದರಿಂದ ಅದು ಜಿ20 ಸಭೆಗೆ ತನ್ನ ನಿಯೋಗವನ್ನು ಕಳುಹಿಸುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಭಾರತವು ಚೀನಾ ಸಂಪೂರ್ಣ ಹಕ್ಕು ಸಾಧಿಸುತ್ತಿರುವ ಅರುಣಾಚಲ ಪ್ರದೇಶದಲ್ಲಿ ಇನ್ನೊಂದು ಜಿ20 ಸಭೆಯನ್ನು ನಡೆಸಿತ್ತು. ಅಲ್ಲಿಯ ಸಭೆಗೆ ಚೀನಾ ಗೈರುಹಾಜರಾಗಿತ್ತು ಮತ್ತು ಸಭೆಯು ಜಿ20 ಪಾಲಿಗೆ ಕಡಿಮೆ ಮಹತ್ವದ್ದಾಗಿತ್ತು,ಅದು ಜಿ20 ವೆಬ್ಸೈಟ್ ನಲ್ಲಿಯ ಅಧಿಕೃತ ಕಾರ್ಯಕ್ರಮಗಳ ಕ್ಯಾಲೆಂಡರ್ನಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ತದ್ವಿರುದ್ಧವಾಗಿ ಶ್ರೀನಗರದಲ್ಲಿ ನಡೆಯಲಿರುವ ಸಭೆಯು ಖಂಡಿತವಾಗಿಯೂ ಹೆಚ್ಚು ಮಹತ್ವದ್ದಾಗಿದೆ.