ಕಾನ್ಸರ್‌ಗೆ ಅತ್ಯಾಧುನಿಕ ಪ್ರೊಟೊನ್ ಥೆರಪಿ ನೀಡಲಿರುವ ಟಾಟಾ ಮೆಮೊರಿಯಲ್ ಆಸ್ಪತ್ರೆ
ಹೊಸದಿಲ್ಲಿ,ಮೇ16: ನಿರ್ದಿಷ್ಟ ರೀತಿಯ ಕ್ಯಾನ್ಸರ್ ರೋಗಿಗಳಿಗೆ ನೀಡುವ ಅತ್ಯಾಧುನಿಕ ವಿಧಾನದ ವಿಕಿರಣ ಚಿಕಿತ್ಸೆಯಾದ ಪ್ರೊಟೊನ್ ಬೀಮ್ ಥೆರಪಿಯು, ಭಾರತದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲೊಂದಾದ ಟಾಟಾ ಮೆಮೋರಿಯಲ್ ಸೆಂಟರ್‌ನಲ್ಲಿ ಈ ವಾರದಿಂದ ಲಭ್ಯವಾಗಲಿದೆ.
ಚೆನ್ನೈನ ಖಾಸಗಿ ವೈದ್ಯಕೀಯ ಆಸ್ಪತ್ರೆಯಾದ ಅಪೊಲ್ಲೊ ಪ್ರೊಟೊನ್ ಕ್ಯಾನ್ಸರ್ ಸೆಂಟರ್ (APCC) ನಲ್ಲಿ ಈವರೆಗೆ ದೇಶದಲ್ಲಿ ಪ್ರೊಟೊನ್ ಬೀಮ್ ಥೆರಪಿ ಲಭ್ಯವಿತ್ತು. ಆದರೆ ಟಾಟಾ ಮೆಮೋರಿಯಲ್ ಸೆಂಟರ್ ಇಡೀ ದೇಶದಲ್ಲಿ ಈ ಅತ್ಯಾಧುನಿಕ ವಿಕಿರಣ ಚಿಕಿತ್ಸೆ ಲಭ್ಯವಿರುವ ಏಕೈಕ ಸರಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈನಲ್ಲಿರುವ ಟಾಟಾ ಮೆಮೋರಿಯಲ್ ಸೆಂಟರ್ ಆಸ್ಪತ್ರೆಯಲ್ಲಿ ಪ್ರೊಟೊನ್ ಬೀಮ್ ಥೆರಪಿಯನ್ನು ಆಳವಡಿಸುವ ಯೋಜನೆಯನ್ನು 2014ರಲ್ಲಿ ಆರಂಭಿಸಲಾಗಿತ್ತು. ಆದರೆ ಸುಮಾರು ಒಂದು ದಶಕದವರೆಗೆ ಸ್ಥಳವಕಾಶದ ಕೊರತೆ ಹಾಗೂ ಕೋವಿಡ್ ಸಾಂಕ್ರಾಮಿಕ ಹಾವಳಿಯ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿತ್ತು.
ಪ್ರೊಟೋನ್ ಬೀಮ್ ಥೆರಪಿಯಲ್ಲಿ, ಕ್ಯಾನ್ಸರ್ ಚಿಕಿತ್ಸೆಗೆ ಸಾಂಪ್ರದಾಯಿಕವಾಗಿ ಎಕ್ಸ್‌ರೇಗಳನ್ನು ಬಳಸುವ ಬದಲು ಪ್ರೊಟೊನ್‌ಗಳನ್ನು ಉಪಯೋಗಿಸಲಾಗುತ್ತದೆ. ಜಾಗತಿಕವಾಗಿ ಒಟ್ಟು 92 ಪ್ರೊಟೊನ್ ಬೀಮ್ ಥೆರಪಿ ಕೇಂದ್ರಗಳಿದ್ದು, ಅವುಗಳಲ್ಲಿ ಹೆಚ್ಚಿನವು ಪಾಶ್ಚಾತ್ಚ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 2019ರಲ್ಲಿ ಅಪೊಲೊ ಆಸ್ಪತ್ರೆ ಸಮೂಹವು ದಕ್ಷಿಣ ಏಶ್ಯದಲ್ಲೇ ಮೊದಲ ಬಾರಿಗೆ ಪ್ರೊಟೊನ್ ಬೀಮ್ ಥೆರಪಿಯ ಪ್ರಪ್ರಥಮ ಕೇಂದ್ರ ‘ಎಪಿಸಿಸಿ’ಯನ್ನು ಚೆನ್ನೈನಲ್ಲಿ ತೆರೆದಿತ್ತು.
ಸಾಂಪ್ರದಾಯಿಕ ಕ್ಯಾನ್ಸರ್‌ಥೆರಪಿಗಿಂತ ಪ್ರೊಟೊನ್‌ಥೆರಪಿಯು ದುಬಾರಿಯಾಗಿದ್ದು, ಸುಮಾರು 30 ಲಕ್ಷ ರೂ. ವೆಚ್ಚ ತಗಲುತ್ತದೆ.ಆದರೆ ಕ್ಯಾನ್ಸರ್ ಗಡ್ಡೆಗಳಿಗೆ ನಿಖರವಾಗಿ ಚಿಕಿತ್ಸೆಯನ್ನು ನೀಡುವುದಕ್ಕೆ ಇದರಲ್ಲಿ ಅವಕಾಶವಿದೆ ಹಾಗೂ ಈ ಚಿಕಿತ್ಸೆಯಲ್ಲಿ ಅಡ್ಡಪರಿಣಾಮಗಳು ಕೂಡಾ ಅತ್ಯಂತ ಕಡಿಮೆಯಾಗಿವೆ.
ಕ್ಯಾನ್ಸರ್‌ನ ಸಾಂಪ್ರದಾಯಿಕ ಚಿಕಿತ್ಸೆಗೆ 5ರಿಂದ 20 ಲಕ್ಷ ರೂ. ವೆಚ್ಚ ತಗಲುತ್ತದೆ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಸಬ್ಸಿಡಿ ದರವನ್ನು ಅವಲಂಭಿಸಿ 5 ಲಕ್ಷ ರೂ.ಗಿಂಲೂ ಕಡಿಮೆ ವೆಚ್ಚ ತಗಲುತ್ತದೆ.