'ದಿ ಕೇರಳ ಸ್ಟೋರಿ' ಸಿನೆಮಾ ದ್ವೇಷ ಹರಡುವ ವಿಷಯ ಹೊಂದಿದೆ: ಸುಪ್ರೀಂಕೋರ್ಟ್‌ಗೆ ತಿಳಿಸಿದ ಪಶ್ಚಿಮ ಬಂಗಾಳ ಸರ್ಕಾರ
ಹೊಸದಿಲ್ಲಿ: 'ದಿ ಕೇರಳ ಸ್ಟೋರಿ' ಸಿನಿಮಾವು ತಿರುಚಿದ ವಾಸ್ತವಗಳು ಹಾಗೂ ದ್ವೇಷಪೂರಿತ ಭಾಷಣಗಳನ್ನು ಹೊಂದಿದ್ದು, ರಾಜ್ಯದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಸಮುದಾಯಗಳ ನಡುವೆ ಸೌಹಾರ್ದತೆಗೆ ಧಕ್ಕೆಯಾಗಬಹುದು ಎಂದು ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ ಎಂದು aninews.in ವರದಿ ಮಾಡಿದೆ.
ಈ ಕುರಿತು ಸುಪ್ರೀಂಕೋರ್ಟ್ ಎದುರು ಪ್ರಮಾಣ ಪತ್ರ ಸಲ್ಲಿಸಿರುವ ಮಮತಾ ಬ್ಯಾನರ್ಜಿ ಸರ್ಕಾರವು, ಹಲವಾರು ಗುಪ್ತಚರ ಮಾಹಿತಿಗಳ ಪ್ರಕಾರ, ಈ ಸಿನಿಮಾದಿಂದ ಕೋಮು ಸಾಮರಸ್ಯಕ್ಕೆ ಧಕ್ಕೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕುಸಿತದಂಥ ಪರಿಸ್ಥಿತಿ ಉದ್ಭವಿಸಲಿದೆ ಎಂದು ವಾದಿಸಿದೆ.
ಸಿನಿಮಾ ನಿಷೇಧಿಸುವ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಪಶ್ಚಿಮ ಬಂಗಾಳ ಸರ್ಕಾರವು, ಸಿನಿಮಾ ಪ್ರದರ್ಶನದಿಂದ ತೀವ್ರವಾದಿ ಗುಂಪುಗಳ ನಡುವೆ ಘರ್ಷಣೆಗಳಾಗುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸಿದೆ.
ಪಶ್ಚಿಮ ಬಂಗಾಳ ಸರ್ಕಾರವು ಯಾವುದೇ ದ್ವೇಷ ಅಥವಾ ಹಿಂಸಾಚಾರವನ್ನು ತಪ್ಪಿಸಲು ಸಿನಿಮಾವನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದೆ ಎಂದೂ ಸಮರ್ಥಿಸಿಕೊಂಡಿದೆ.
ಪಶ್ಚಿಮ ಬಂಗಾಳ ಸರ್ಕಾರವು 'ದಿ ಕೇರಳ ಸ್ಟೋರಿ' ಸಿನಿಮಾವನ್ನು ನಿಷೇಧಿಸುವ ನಿರ್ಧಾರವನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕರು ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಮೇಲಿನಂತೆ ಪ್ರಮಾಣ ಪತ್ರ ಸಲ್ಲಿಸಿದೆ.