ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ಅರ್ಜಿ ವಿಚಾರಣೆ ಜುಲೈಗೆ ಮುಂದೂಡಿದ ಸುಪ್ರೀಂ

Update: 2023-05-17 07:43 GMT

ಹೊಸದಿಲ್ಲಿ:  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ .ಕೆ. ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ತನಿಖೆಗೆ ಮಧ್ಯಂತರ ತಡೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಜುಲೈ 14ಕ್ಕೆ ಮುಂದೂಡಿದೆ.

ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಮೇ 23ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ ಎಂದು ಹೇಳಿದ ನಂತರ ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ ಹಾಗೂ  ಸಂಜಯ್ ಕರೋಲ್ ಅವರ ಪೀಠವು ವಿಚಾರಣೆಯನ್ನು ಮುಂದೂಡಿತು.

ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಫೆ.10ರಂದು ತಡೆ ನೀಡಿತ್ತು. ತಡೆಯಾಜ್ಞೆಯನ್ನು  ನಂತರ ಬೇರೆ ಬೇರೆ ದಿನಾಂಕಗಳಲ್ಲಿ ವಿಸ್ತರಿಸಲಾಯಿತು.

ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ 2017ರಲ್ಲಿ ದಾಳಿ ನಡೆಸಿತ್ತು, ಅದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಅವರ ವಿರುದ್ಧ ತನಿಖೆ ಆರಂಭಿಸಿತ್ತು.

ಈಡಿ ತನಿಖೆಯ ನಂತರ, ಸಿಬಿಐ,  ಶಿವಕುಮಾರ್  ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜ್ಯ ಸರಕಾರದಿಂದ ಅನುಮತಿ ಕೋರಿತು. ಸೆಪ್ಟೆಂಬರ್ 25, 2019 ರಂದು ಅನುಮತಿ ಲಭಿಸಿತ್ತು 

Similar News