ರಾಜಸ್ಥಾನದ ಸರ್ಕಾರಿ ಭೂಮಿಯ ತೆರವಿಗೆ ಆದೇಶಿಸಿದ ಜಿಲ್ಲಾಧಿಕಾರಿ: 150 ಪಾಕಿಸ್ತಾನದ ಹಿಂದೂ ವಲಸಿಗರು ನಿರಾಶ್ರಿತ

Update: 2023-05-18 09:40 GMT

ಜೈಪುರ: ಐಎಎಸ್ ಅಧಿಕಾರಿಣಿ ಟೀನಾ ಡಾಬಿ ರಾಜಸ್ಥಾನದ ಜೈಸ್ಮಲೇರ್‌ನ ಸರ್ಕಾರಿ ಭೂಮಿಯಲ್ಲಿನ ಮನೆಗಳನ್ನು ತೆರವುಗೊಳಿಸಿರುವ ಕ್ರಮವನ್ನು ವಿರೋಧಿಸಿ ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಪ್ರತಿಭಟಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ವರದಿಗಳ ಪ್ರಕಾರ, 50ಕ್ಕೂ ಹೆಚ್ಚು ತಾತ್ಕಾಲಿಕ ಮನೆಗಳನ್ನು ಅತಿಕ್ರಮಣ ಎಂದು ಪರಿಗಣಿಸಿದ ಪಟ್ಟಣ ಸುಧಾರಣಾ ಟ್ರಸ್ಟ್, ಆ ಮನೆಗಳನ್ನು ನೆಲಸಮಗೊಳಿಸಿ, ಬುಲ್ಡೋಜರ್ ನೆರವಿನಿಂದ ಆ ಪ್ರದೇಶದಲ್ಲಿನ ಕಟ್ಟಡ ತ್ಯಾಜ್ಯವನ್ನು ಸ್ವಚ್ಛಗೊಳಿಸಿತು ಎಂದು ಹೇಳಲಾಗಿದೆ.

ಈ ಕ್ರಮದಿಂದ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ನಿರಾಶ್ರಿತರಿಗೆ ಆಕಾಶವೇ ಸೂರಾಗಿ ಬದಲಾಗಿದೆ. ಆದರೆ, ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಜಿಲ್ಲಾಡಳಿತವು, ನಿರಾಶ್ರಿತರು ಅಮರ್ ಸಾಗರ್ ಕೆರೆ ಹಾಗೂ ಜೈಸ್ಮಲೇರ್ ಕೆರೆ ದಡದ ಬಳಿ ಕಾನೂನು ಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದುದರಿಂದ ಆ ಕೆರೆಗಳಿಗೆ ಸರಾಗವಾಗಿ ನೀರು ಹರಿದು ಹೋಗುವುದು ಸ್ಥಗಿತಗೊಂಡಿತ್ತು ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಐಎಎಸ್ ಅಧಿಕಾರಿಣಿ ಟೀನಾ ಡಾಬಿ, ಅಮರ್‌ಸಾಗರ್ ಗ್ರಾಮದ ಮುಖ್ಯಸ್ಥರು ಹಾಗೂ ಆ ಪ್ರದೇಶದ ನಿವಾಸಿಗಳ ದೂರನ್ನು ಆಧರಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Similar News