ಮುಸ್ಲಿಂ ಯುವಕನನ್ನು ವರಿಸಲಿರುವ ಬಿಜೆಪಿ ನಾಯಕನ ಪುತ್ರಿ; ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ
ಹೊಸದಿಲ್ಲಿ: ಉತ್ತರಾಖಂಡದ ಪೌರಿ ಪ್ರಾಂತ್ಯದ ಬಿಜೆಪಿ ನಾಯಕ ಯಶ್ಪಾಲ್ ಬೆನಮ್ ಅವರ ಪುತ್ರಿಯ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ನಡುವೆ ಬಿಜೆಪಿ ನಾಯಕ ಟೀಕೆಗೂ ಗುರಿಯಾಗಿದ್ದಾರೆ. ಅವರ ಪುತ್ರಿ ಮುಸ್ಲಿಂ ಯುವಕನೊಬ್ಬನನ್ನು ವಿವಾಹವಾಗುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಬೇನಮ್ ಮತ್ತು ಬಿಜೆಪಿಯ ʻಇಬ್ಬಗೆ ನೀತಿʼಯನ್ನು ಬಲಪಂಥೀಯರು ಖಂಡಿಸಿದ್ದರೆ ಇನ್ನು ಕೆಲವರು ಇದೊಂದು ʻಲವ್ ಜಿಹಾದ್ʼ ಯತ್ನ ಎಂದೂ ಬಣ್ಣಿಸಿದ್ದಾರೆ ಹಾಗೂ ವಿವಾದಿತ ಚಿತ್ರ ʼದಿ ಕೇರಳ ಸ್ಟೋರಿʼಯನ್ನೂ ಉಲ್ಲೇಖಿಸಿದ್ದಾರೆ.
“ಬಿಜೆಪಿ ಆಡಳಿತದ ರಾಜ್ಯಗಳು 'ದಿ ಕೇರಳ ಸ್ಟೋರಿ'ಯಂತಹ ಚಿತ್ರಗಳಿಗೆ ತೆರಿಗೆ ಮನ್ನಾಗೊಳಿಸಿದೆ. ಇವು ಇಬ್ಬಗೆ ನೀತಿ, ಪಕ್ಷ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತದೆ,” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಇಂತಹ ವಿವಾಹಗಳನ್ನು ವಿಹಿಂಪ ಮತ್ತು ಬಜರಂಗದಳ ವಿರೋಧಿಸಬೇಕು ಎಂದು ಪೌರಿ ದೇವಸ್ಥಾನ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿ ಹಿಂದುಗಳ ರಕ್ಷಣೆಗಾಗಿರುವ ಪಕ್ಷ ಇಂತಹ ಜನರನ್ನು ತಕ್ಷಣ ಪಕ್ಷದಿಂದ ಉಚ್ಛಾಟಿಸಬೇಕು,” ಎಂದೂ ಅವರು ಆಗ್ರಹಿಸಿದರು.
ಯಶ್ಪಾಲ್ ಬೇನಮ್ ಅವರ ಪುತ್ರಿ ಲಕ್ನೋ ವಿವಿಯಲ್ಲಿ ಶಿಕ್ಷಣ ಪಡೆದಿದ್ದು ಆಕೆ ಪ್ರೀತಿಸುವ ವ್ಯಕ್ತಿಯನ್ನು ವಿವಾಹವಾಗಲಿದ್ದಾರೆ ಎಂದು ಬಿಜೆಪಿ ನಾಯಕನನ್ನು ಹತ್ತಿರದಿಂದ ಬಲ್ಲ ಜನರು ಹೇಳಿದ್ದಾರೆ.
ವಿವಾಹ ಮೇ 28ರಂದು ಪೌರಿಯ ರಿಸಾರ್ಟ್ ಒಂದರಲ್ಲಿ ನಡೆಯಲಿದೆ. ಬೇನಮ್ ಅವರು ಪೌರಿ ಮುನಿಸಿಪಲ್ ಕಾರ್ಪೊರೇಷನ್ ಅಧ್ಯಕ್ಷರಾಗಿದ್ದು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಅವರು 2007ರಲ್ಲಿ ಪೌರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು.