×
Ad

ದಂತ ಆರೈಕೆ ಉತ್ಪನ್ನದಲ್ಲಿ ಮಾಂಸಾಹಾರ ಅಂಶದ ಆರೋಪ: ಪತಂಜಲಿಗೆ ಕಾನೂನು ನೋಟಿಸ್‌

Update: 2023-05-19 15:56 IST

ಹೊಸದಿಲ್ಲಿ: ದಿಲ್ಲಿ ಮೂಲದ ಬಿಎಲ್ಜೆ ಹೆಸರಿನ ಕಾನೂನು ಸಂಸ್ಥೆಯೊಂದು ಪತಂಜಲಿ ಆಯುರ್ವೇದದ ವಿರುದ್ಧ ಕಾನೂನು ನೋಟಿಸ್‌ ಜಾರಿಗೊಳಿಸಿದ್ದು, ಸಂಸ್ಥೆ ತನ್ನ ದಿವ್ಯ ದಂತ ಮಂಜನ್‌ ಎಂಬ ದಂತ ಆರೈಕೆ ಉತ್ಪನ್ನದ ಲೇಬಲ್‌ನಲ್ಲಿ ಅದು ಸಸ್ಯಾಹಾರಿ ಎಂದು ಸೂಚಿಸುವ 'ಹಸಿರು' ಚಿಹ್ನೆಯನ್ನು ಹೊಂದಿದ್ದರೂ ಅದರ ತಯಾರಿಯಲ್ಲಿ ಮಾಂಸಾಹಾರಿ ವಸ್ತುಗಳನ್ನು ಬಳಸಿ ವಂಚಿಸಲಾಗಿದೆ ಎಂದು ಆರೋಪಿಸಿದೆ.

ಮಾಂಸಾಹಾರಿ ವಸ್ತುವಾದ ಸಮುದ್ರ ಫೆನ್‌ ಬಳಸಿ ಸಂಸ್ಥೆಯು ದಿವ್ಯ ದಂತ ಮಂಜನ್‌ ಅನ್ನು ಸಸ್ಯಾಹಾರಿ ಉತ್ಪನ್ನ ಎಂದು ಮಾರಾಟ ಮಾಡುತ್ತಿದೆ, ಇದು ಗ್ರಾಹಕ ಹಕ್ಕುಗಳ ಹಾಗೂ ಲೇಬಲಿಂಗ್‌ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವಕೀಲೆ ಸಶಾ ಜೈನ್‌ ಎಂಬವರು ಸಹಿ ಹಾಕಿದ ಈ ಕಾನೂನು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಕಟ್ಲ್‌ ಫಿಶ್‌ ಎಲುಬುಗಳಿಂದ ಸಮುದ್ರ ಫೆನ್‌ ಎಂಬ ಉತ್ಪನ್ನ ದೊರೆಯುತ್ತದೆ. ಅದರಲ್ಲಿ  ಕ್ಯಾಲ್ಶಿಯಂ ಕಾರ್ಬೊನೇಟ್‌, ಫಾಸ್ಪೇಟ್‌, ಸಲ್ಫೇಟ್‌ ಮತ್ತು ಸಿಲಿಕಾ ಇದ್ದು ದಂತ ಆರೈಕೆ ಉತ್ಪನ್ನಗಳಲ್ಲಿ ಸ್ಕ್ರೇಪಿಂಗ್‌ ಏಜಂಟ್‌ ಆಗಿ ಅದನ್ನು ಬಲಸಲಾಗುತ್ತದೆ.

“ನನ್ನ ಕೆಲ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ದಿವ್ಯ ದಂತ ಮಂಜನ್‌ ಬಳಸುತ್ತಾರೆ ಈ ರೀತಿ ಸಮುದ್ರ ಫೆನ್‌ ಬಳಸಿ ತಯಾರಿಸುತ್ತಾರೆಂದು ತಿಳಿದು ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ, ಬಾಬಾ ರಾಮದೇವ್‌ ಜಿ ಅವರ ಮೇಲಿನ ನಂಬಿಕೆಯಿಂದ ಜನರು ಕಣ್ಣು ಮುಚ್ಚಿ ಪತಂಜಲಿ ಉತ್ಪನ್ನಗಳನ್ನು ಖರೀದಿಸುತ್ತಾರೆ” ಎಂದು ಕಾನೂನು ನೋಟಿಸಿನಲ್ಲಿ ಹೇಳಲಾಗಿದೆ ಹಾಗೂ ಕಂಪೆನಿಯಿಂದ 15 ದಿನಗಳೊಳಗೆ ಸ್ಪಷೀಕರಣ ಕೇಳಲಾಗಿದೆ. ತಪ್ಪಿದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಎಚ್ಚರಿಸಲಾಗಿದೆ.

Similar News