×
Ad

ದಾಭೋಲ್ಕರ್‌ ಹತ್ಯೆ ಪ್ರಕರಣ: ಕೋರ್ಟ್‌ ಉಸ್ತುವಾರಿ ತನಿಖೆ ಮುಂದುವರಿಸಲು ಸುಪ್ರೀಂ ಕೋರ್ಟ್‌ ಕದ ತಟ್ಟಿದ ಪುತ್ರಿ

Update: 2023-05-19 16:08 IST

ಹೊಸದಿಲ್ಲಿ: ಖ್ಯಾತ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಅವರ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ನಡೆಸುತ್ತಿರುವ ತನಿಖೆಯ ಮೇಲೆ ನಿಗಾ ಇಡುವುದನ್ನು ಮುಂದುವರಿಸಲು ಬಾಂಬೆ ಹೈಕೋರ್ಟ್‌ ನಿರಾಕರಿಸಿರುವುದನ್ನು ಪ್ರಶ್ನಿಸಿ ಅವರ ಪುತ್ರಿ ಮುಕ್ತಾ ದಾಭೋಲ್ಕರ್‌ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದಾರೆ.

ಈ ಅರ್ಜಿಯ ವಿಚಾರಣೆಯನ್ನು ಗುರುವಾರ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಪೌಲ್‌ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ಪೀಠ ವಿಚಾರಣೆ ನಡೆಸಿ ಅರ್ಜಿಯ ಪ್ರತಿಗಳನ್ನು ಮತ್ತು ಬಾಂಬೆ ಹೈಕೋರ್ಟ್‌ ಆದೇಶ ಪದ್ರತಿಯನ್ನು ಸಿಬಿಐಗೆ ನೀಡುವಂತೆ ಸೂಚಿಸಿದೆ.

ಪ್ರಕರಣದ ಇಬ್ಬರು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದು ಹಾಗೂ ಈ ಹತ್ಯೆಯ ಹಿಂದೆ ದೊಡ್ಡ ಷಡ್ಯಂತ್ರವಿದೆಯೇ ಎಂದು ಸಿಬಿಐ ಇನ್ನೂ ತನಿಖೆ ನಡೆಸುತ್ತಿದೆ ಎಂದು ಮುಕ್ತಾ ಪರ ವಕೀಲ ಆನಂದ್‌ ಗ್ರೋವರ್‌ ಹೇಳಿದರು.

“ನಿರಂತರ ಉಸ್ತುವಾರಿ ಇರಲು ಸಾಧ್ಯವಿಲ್ಲ. ಸ್ವಲ್ವ ಉಸ್ತುವಾರಿ ಸರಿ ಆದರೆ ಚಾರ್ಜ್‌ ಶೀಟ್‌ ಸಲ್ಲಿಕೆಯಾದ ನಂತರ ಆರೋಪಿಗಳ ಹಕ್ಕುಗಳನ್ನೂ ಪರಿಗಣಿಸಬೇಕಿದೆ,” ಎಂದು ಬಾಂಬೆ ಬೈಕೋರ್ಟ್‌ ಹೇಳಿತ್ತು.

ದಾಭೋಲ್ಕರ್‌ ಅವರನ್ನು ಆಗಸ್ಟ್‌ 20, 2013ರಂದು ಬೈಕ್‌ನಲ್ಲಿ ಬಂದ ಇಬ್ಬರು ಹತ್ಯೆಗೈದಿದ್ದರು. ಪ್ರಕರಣದ ಮುಖ್ಯ ಸಂಚುಕೋರರನ್ನು ಇನ್ನಷ್ಟೇ ಬಂಧಿಸಬೇಕಿದೆ ಎಂದು ದಾಭೋಲ್ಕರ್‌ ಅವರ ಕುಟುಂಬ ಹೇಳುತ್ತಿದೆ. ಹಂತಕರು ಬಳಸಿದ ಮೋಟಾರ್‌ ಸೈಕಲ್‌ ಅಥವಾ ಶಸ್ತ್ರಗಳನ್ನು  ಸಿಬಿಐ ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ. ಆರೋಪಿಗಳು ಸನಾತನ ಸಂಸ್ಥಾಗೆ ಸೇರಿದವರೆಂಬ ಆರೋಪವಿದೆ.

Similar News