ಹವಾಮಾನ ಬದಲಾವಣೆ: ಈ ಶತಮಾನದ ಅಂತ್ಯದ ವೇಳೆಗೆ ವಾರ್ಷಿಕ 90 ಲ.ಕ್ಕೂ ಹೆಚ್ಚು ಸಾವುಗಳು ಸಂಭವಿಸಬಹುದು: WHO ವರದಿ
ಹೊಸದಿಲ್ಲಿ,ಮೇ 19: ಹವಾಮಾನ ಬದಲಾವಣೆಯ ಪರಿಣಾಮವಾಗಿ 2030ರ ವೇಳೆಗೆ ಪ್ರತಿ ವರ್ಷ 2.5 ಲ.ಹೆಚ್ಚುವರಿ ಸಾವುಗಳು ಮತ್ತು ಈ ಶತಮಾನದ ಅಂತ್ಯದ ವೇಳೆಗೆ ಪ್ರತಿ ವರ್ಷ 90 ಲ.ಕ್ಕೂ ಅಧಿಕ ಸಾವುಗಳು ಸಂಭವಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO)ಯು ತನ್ನ ಇತ್ತೀಚಿನ ವಿಶ್ವ ಆರೋಗ್ಯ ಅಂಕಿಅಂಶ 2023 ವರದಿಯಲ್ಲಿ ಹೇಳಿದೆ.
ಹೆಚ್ಚುವರಿ ಸಾವುಗಳು ಒಂದು ನಿರ್ದಿಷ್ಟ ವರ್ಷದಲ್ಲಿ ಎಲ್ಲ ಕಾರಣಗಳಿಂದ ಸಂಭವಿಸಿದ ಸಾವುಗಳು ಮತ್ತು ಸಾಮಾನ್ಯ ಪರಿಸ್ಥಿತಿಗಳಲ್ಲಿ ನಿರೀಕ್ಷಿತ ಸಾವುಗಳ ನಡುವಿನ ವ್ಯತ್ಯಾಸವಾಗಿದೆ.
ಪ್ರಸ್ತುತ ಪುರಾವೆಗಳು ಹಾಗೂಈ ಜಾಗತಿಕ ಹೊರಸೂಸುವಿಕೆಯ ಆಧಾರದಲ್ಲಿ ಪ್ರಮುಖ ಸಂಶೋಧಕರು ಮತ್ತು ಹವಾಮಾನ ಬದಲಾವಣೆಯ ಕುರಿತು ಅಂತರ್ಸರಕಾರಿ ಸಮಿತಿಯ ಆರನೇ ವೌಲ್ಯಮಾಪನ ವರದಿಯ ಕಾರ್ಯಪಡೆ ರ IIತಜ್ಞರು ಈ ಅಂದಾಜುಗಳನ್ನು ಮಾಡಿದ್ದಾರೆ.
ವಿಶ್ವ ಆರೋಗ್ಯ ಅಂಕಿಅಂಶ ವರದಿಯು ಇದೇ ಮೊದಲ ಬಾರಿಗೆ ಹವಾಮಾನ ಬದಲಾವಣೆ ಮತ್ತು ಅದರ ಆರೋಗ್ಯ ಪರಿಣಾಮಗಳ ಕುರಿತು ಅಧ್ಯಾಯವನ್ನು ಒಳಗೊಂಡಿದೆ.
ಜಾಗತಿಕ ಹೊರಸೂಸುವಿಕೆಯಲ್ಲಿ ಕನಿಷ್ಠ ಪಾಲು ಹೊಂದಿದ್ದರೂ ಹೆಚ್ಚಿನ ಪರಿಣಾಮಗಳನ್ನು ಎದುರಿಸುತ್ತಿರುವ ಭಾರತದಂತಹ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳೊಂದಿಗೆ ಜಾಗತಿಕವಾಗಿ ಸುಮಾರು 300 ಕೋ.ಜನರು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಒಡ್ಡಿಕೊಂಡಿದ್ದಾರೆ ಎಂದು ಹೇಳಿರುವ ವರದಿಯು,ದೇಶವೊಂದರ ಒಳಗೂ ಬಡವರು,ವೃದ್ಧರು,ಮಹಿಳೆಯರು, ಮಕ್ಕಳು,ಮೂಲನಿವಾಸಿಗಳು,ಹೊರಾಂಗಣ ಕಾರ್ಮಿಕರು ಮತ್ತು ಈಗಾಗಲೇ ಅನಾರೋಗ್ಯ ಪೀಡಿತರಾಗಿರುವವರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ತಿಳಿಸಿದೆ.
2014ರಲ್ಲಿ,ಹವಾಮಾನ ಬದಲಾವಣೆಯಿಂದ ಸಂಭವಿಸುವ ಸಾವುಗಳ ಅಂದಾಜನ್ನು ಮಾಡುವ ಹೊಣೆಯನ್ನು ಸಂಶೋಧಕರ ಗುಂಪೊಂದಕ್ಕೆ ವಹಿಸಲಾಗಿತ್ತು ಎಂದು ತಿಳಿಸಿರುವ ವರದಿಯು,ಮಲೇರಿಯಾ,ಉಷ್ಣಾಘಾತ,ಅಪೌಷ್ಟಿಕತೆ,ಅತಿಸಾರ ಮತ್ತು ಕರಾವಳಿ ಪ್ರದೇಶಗಳಲ್ಲಿ ನೆರೆಗಳ ಕಾರಣದಿಂದಾಗಿ 2030ರ ವೇಳೆಗೆ ಹೆಚ್ಚುವರಿಯಾಗಿ 2.5 ಲಕ್ಷದಷ್ಟು ಹವಾಮಾನ ಬದಲಾವಣೆ ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ಈ ಗುಂಪು ಅಂದಾಜಿಸಿದೆ ಎಂದು ಹೇಳಿದೆ.
ಹವಾಮಾನ ಬದಲಾವಣೆಯು ನೀರು ಮತ್ತು ಆಹಾರದ ಗುಣಮಟ್ಟದ ಮೇಲೂ ಪ್ರತಿಕೂಲ ಪರಿಣಾಮಗಳನ್ನು ಬೀರಬಲ್ಲದು ಎಂದು ಹೇಳಿರುವ ವರದಿಯು,ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಆಹಾರದಿಂದ ಹರಡುವ ರೋಗಗಳ ಶೇ.40ರಷ್ಟು ಅಪಾಯವನ್ನು ಎದುರಿಸುತ್ತಿದ್ದಾರೆ ಮತ್ತು ಪ್ರತಿವರ್ಷ 1.25 ಲ.ಮಕ್ಕಳ ಸಾವುಗಳು ಸಂಭವಿಸುತ್ತಿವೆ. ನಿರಂತರ ಹವಾಮಾನ ಬದಲಾವಣೆಯು ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ತಿಳಿಸಿದೆ.
ಬದಲಾಗುತ್ತಿರುವ ತಾಪಮಾನವು ಸೊಳ್ಳೆಗಳು,ಉಣ್ಣಿಗಳು ಮತ್ತು ದಂಶಕ (ಇಲಿ,ಹೆಗ್ಗಣ ಇತ್ಯಾದಿ)ಗಳಿಂದ ರೋಗಗಳ ಪ್ರಸಾರಕ್ಕೆ ಹೆಚ್ಚು ಪೂರಕವಾಗಿದೆ ಎಂದು ಹೇಳಿರುವ ವರದಿಯು,ತಡೆಗಟ್ಟುವ ವಿಧಾನಗಳನ್ನು ಬಲಗೊಳಿಸದಿದ್ದರೆ ಇದು ಪ್ರತಿ ವರ್ಷ ವೆಕ್ಟರ್ಗಳು ಅಥವಾ ವಾಹಕಗಳಿಂದ ಹರಡುವ ರೋಗಗಳಿಂದಾಗಿ ಸಂಭವಿಸುತ್ತಿರುವ ಏಳು ಲಕ್ಷಕ್ಕೂ ಅಧಿಕ ಸಾವುಗಳು ಇನ್ನಷ್ಟು ಹೆಚ್ಚಲು ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ.
ವಿಶ್ವ ಆರೋಗ್ಯ ಅಂಕಿಅಂಶ ವರದಿಯು ಹವಾಮಾನ ಬದಲಾವಣೆಯ ಆರೋಗ್ಯ ಪರಿಣಾಮಗಳನ್ನು ತಗ್ಗಿಸಲು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವುದು, ಹವಾಮಾನ ಬದಲಾವಣೆಯ ವಿರುದ್ಧ ಪುಟಿದೇಳಬಲ್ಲ ಆರೋಗ್ಯ ವ್ಯವಸ್ಥೆಗಳು ಹಾಗೂ ಹವಾಮಾನ ಬದಲಾವಣೆಯಿಂದ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಸಾಕಷ್ಟು ಹಣಕಾಸು ಪೂರೈಕೆ;ಹೀಗೆ ಮೂರು ನಿರ್ಣಾಯಕ ಕ್ರಮಗಳನ್ನು ಶಿಫಾರಸು ಮಾಡಿದೆ.