×
Ad

ಉಡುಪಿ: ಜಿಲ್ಲೆಗೆ ಕೈಕೊಟ್ಟ ಮುಂಗಾರು ಪೂರ್ವ ಮಳೆ

Update: 2023-05-19 22:06 IST

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಈ ಬಾರಿ ಸಂಪೂರ್ಣ ಕೈಕೊಟ್ಟಿದೆ. ಪ್ರತಿ ವರ್ಷ ಸಹಜವಾಗಿ ಮಾರ್ಚ್ ಕೊನೆಯಿಂದ ಮೇ ತಿಂಗಳ ಕೊನೆಯವರೆಗೆ ಅಂದರೆ ಜೂನ್ ತಿಂಗಳಲ್ಲಿ ಮಳೆಗಾಲ ಪ್ರಾರಂಭಗೊಳ್ಳುವವರೆಗೆ ಬರಬೇಕಾಗಿದ್ದ ಮುಂಗಾರು ಪೂರ್ವ ಮಳೆ ಈ ಬಾರಿ ಕೈಕೊಟ್ಟಿದೆ. ಇದರ ಪರಿಣಾಮ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ತೀವ್ರ ಕೊರತೆ ಹಾಗೂ ವಿಪರೀತ ಸೆಕೆ, ದಾಹ ಎಲ್ಲವೂ ಕರಾವಳಿಯ ಈ ಜಿಲ್ಲೆ ಮಟ್ಟಿಗೆ ಅಸಹಜ ಎನ್ನುವ ಮಟ್ಟಕ್ಕೆ ಬೆಳೆಯತೊಡಗಿದೆ.

ಪ್ರತಿ ವರ್ಷ ಮಾರ್ಚ್ ತಿಂಗಳು ತಪ್ಪಿದರೆ ಎಪ್ರಿಲ್ ತಿಂಗಳಲ್ಲಿ ಪ್ರಿ ಮಾನ್ಸೂನ್ ಮಳೆ ಕರಾವಳಿ ಜಿಲ್ಲೆಗೆ ಖಾಯಂ ಎನ್ನುವಷ್ಟು ಸಹಜವಾಗಿತ್ತು. ಮೇ ತಿಂಗಳಂತೂ ಗುಡುಗು- ಸಿಡಿಲು- ಬಿರುಗಾಳಿ ಸಹಿತ ಮಳೆ ಮಳೆಗಾಲದ ಮಳೆಗಿಂತಲೂ ಅಬ್ಬರಿಸಿ ಬೊಬ್ಬಿರಿಯಬೇಕಿತ್ತು. ಆದರೆ ಈ ಬಾರಿ ಮೇ ತಿಂಗಳ ಕೊನೆಯ ವಾರ ಆರಂಭಗೊಳ್ಳುತಿದ್ದು, ಇದುವರೆಗೆ ಬಿದ್ದ ಮಳೆಯ ನೀರು ತಲೆಯಿಂದ ಕಾಲಿನವರೆಗೆ ಬರುವಷ್ಟು ಇಲ್ಲವೆಂದರೂ ತಪ್ಪಿಲ್ಲ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಹವಾಮಾನ ಇಲಾಖೆಯ ಮೂಲಗಳ ಪ್ರಕಾರ ಈ ಬಾರಿ ಜನವರಿ ಒಂದರಿಂದ ಇಂದಿನವರೆಗೆ (ಮೇ 19) ಉಡುಪಿ ಜಿಲ್ಲೆಯಲ್ಲಿ ಬಿದ್ದ ಮಳೆಯ ಒಟ್ಟು ಪ್ರಮಾಣ ಕೇವಲ 33ಮಿ.ಮೀ. ಮಾತ್ರ. ಈ ಬಾರಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ಹನಿ ಮಳೆ ಕೂಡಾ ಬಿದ್ದಿರಲಿಲ್ಲ. ಮಾರ್ಚ್ ತಿಂಗಳಲ್ಲಿ ಕೇವಲ 3 ಮಿ.ಮೀ. ಮಳೆಯಾಗಿತ್ತು. ಎಪ್ರಿಲ್ ತಿಂಗಳಲ್ಲೂ ಯಾವುದೇ ಸುಧಾರಣೆ ಕಾಣದೇ 6ಮಿ.ಮೀ. ಮಳೆ ಬಿದ್ದಿತ್ತು. ಇನ್ನು ಧಾರಾಕಾರ ಮಳೆ ಸುರಿಯ ಬೇಕಿದ್ದ ಮೇ ತಿಂಗಳಲ್ಲಿ ಇದುವರೆಗೆ ಬಿದ್ದಿರುವುದು 24ಮಿ.ಮೀ. ಮಳೆ ಮಾತ್ರ.

ಇಲಾಖೆಯ ಪ್ರಕಾರ ಜನವರಿಯಿಂದ ಮೇ ತಿಂಗಳವರೆಗೆ ಜಿಲ್ಲೆಯ ವಾಡಿಕೆ ಮಳೆ 201ಮಿ.ಮೀ. ಆಗಿದೆ. ಸಾಮಾನ್ಯವಾಗಿ ಜನವರಿ-ಫೆಬ್ರವರಿಯಲ್ಲಿ 1ಮಿ.ಮೀ., ಮಾರ್ಚ್ನಲ್ಲಿ 8.5ಮಿ.ಮೀ., ಎಪ್ರಿಲ್ನಲ್ಲಿ 26ಮಿ.ಮೀ. ಹಾಗೂ ಮೇ ತಿಂಗಳಲ್ಲಿ 165 ಮಿ.ಮೀ. ವಾಡಿಕೆ ಮಳೆಯಾಗಿದೆ. ಈಗಿನ್ನೂ ಮೇ 19 ಆಗಿರುವುದರಿಂದ ಮೇ ತಿಂಗಳಲ್ಲಿ ಇಂದಿನವರೆಗೆ 100ಮಿ.ಮೀ. ವಾಡಿಕೆ ಮಳೆ ಬೀಳಬೇಕಿತ್ತು. ಆದರೆ ಜಿಲ್ಲೆಯಲ್ಲಿ ಇದುವರೆಗೆ (ಜನವರಿ-ಮೇ) ಬಿದ್ದಿರುವುದು ಒಟ್ಟು ಕೇವಲ 33ಮಿ.ಮೀ. ಮಳೆ ಮಾತ್ರ.

ಜಿಲ್ಲೆಯಲ್ಲಿ ಐದು ವರ್ಷಗಳ ಹಿಂದೆ ಒಮ್ಮೆ ಇದೇ ಪರಿಸ್ಥಿತಿ ತಲೆದೋರಿತ್ತು. 2019ರಲ್ಲಿ ಜನವರಿಯಿಂದ ಮೇವರೆಗೆ ಸುರಿದ ಒಟ್ಟು ಮಳೆ 27 ಮಿ.ಮೀ. ಮಾತ್ರ. ಜನವರಿ- ಫೆಬ್ರವರಿ- ಮಾರ್ಚ್ನಲ್ಲಿ 0, ಎಪ್ರಿಲ್ನಲ್ಲಿ 16 ಮಿ.ಮೀ. ಹಾಗೂ ಮೇಯಲ್ಲಿ 11ಮಿ.ಮೀ.ಮಳೆಯಾಗಿತ್ತು. ಆಗಲೂ ಜೂನ್ ಎರಡನೇ ವಾರದವರೆಗೆ ಜಿಲ್ಲೆಯಲ್ಲಿ ನೀರಿಗಾಗಿ ದೊಡ್ಡ ಮಟ್ಟದ ಹಾಹಾಕಾರ ಎದ್ದಿತ್ತು.

ಇದು ಹೊರತು ಪಡಿಸಿದರೆ 2020ರಲ್ಲಿ ಮೇ ಕೊನೆಯವರೆಗೆ ಒಟ್ಟು 170ಮಿ.ಮೀ ಮಳೆಯಾಗಿತ್ತು. 2021ರಲ್ಲಿ ಇದು 616ಮಿ.ಮೀ.ಗೆ ಏರಿತ್ತು. (ಇದಕ್ಕೆ ಮೇ ತಿಂಗಳಲ್ಲಿ ಬಂದ ಸೈಕ್ಲೋನ್ ಕಾರಣವಾಗಿತ್ತು), ಕಳೆದ ವರ್ಷ ಅಂದರೆ 2022ರಲ್ಲಿ ಜಿಲ್ಲೆಯಲ್ಲಿ 434 ಮಿ.ಮೀ. ಮಳೆಯಾಗಿತ್ತು.

ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಎಪ್ರಿಲ್- ಮೇ ತಿಂಗಳಲ್ಲಿ ಸುರಿಯುವ ಮುಂಗಾರು ಪೂರ್ವ ಮಳೆ, ಅಲ್ಲಲ್ಲಿ ಕಾಸಿಕೊಳ್ಳುವ ಕುಡಿಯುವ ನೀರಿನ ಕೊರತೆಯನ್ನು ನೀಗಿಸುತ್ತಿತ್ತು. ಹೀಗಾಗಿ ನದಿಯನ್ನು ನೀರಿನಾಶ್ರಯವಾಗಿ ಹೊಂದಿದ್ದ ಗ್ರಾಮಗಳು ಮೇ ತಿಂಗಳ ಮಳೆ ನೀರನ್ನೇ ಕಡುಬೇಸಿಗೆ ದಾಹ ತಸಲು ಎದುರು ನೋಡುತಿದ್ದವು. ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ಉಡುಪಿ ಸೇರಿದಂತೆ ಹಲವು ಕಡೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಜನ ಟ್ಯಾಂಕರ್ ನೀರನ್ನು ಆಶ್ರಯಿಸುವಂತಾಗಿದೆ.

ಕೆಲವೊಮ್ಮೆ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಬೀಳುವ ಪ್ರಿ ಮಾನ್ಸೂನ್ ಮಳೆ ಜನರಿಗೆ ಅದರಲ್ಲೂ ರೈತರಿಗೆ ಸಂಕಷ್ಟಗಳ ಸರಮಾಲೆಯನ್ನು ತರುವುದಿದೆ. ರೈತರು ಬೆಳೆಸುತಿದ್ದ ತರಕಾರಿ, ಅಲಸಂಡೆ, ಮೆಣಸು, ನೆಲಗಡಲೆ ಬೆಳೆಗಳು ಭಾರೀ ಮಳೆಗೆ ಕೊಚ್ಚಿಕೊಂಡು ಹೋದ ಉದಾಹರಣೆಗಳೂ ಇವೆ.

ಆದರೆ ಜಿಲ್ಲೆಗೆ ಸಮಪ್ರಮಾಣದ ಮುಂಗಾರುಪೂರ್ವ ಮಳೆ ಅಗತ್ಯವಿದೆ. ಎಪ್ರಿಲ್-ಮೇ ತಿಂಗಳಲ್ಲಿ ಸುರಿಯುವ ಈ ಮಳೆಯಿಂದ ರೈತರು, ಗ್ರಾಮೀಣ ಪ್ರದೇಶಗಳ ಜನರು ಮಳೆಗಾಲಕ್ಕೆ ಪೂರ್ವಸಿದ್ಧತೆಯಲ್ಲಿ ತೊಡಗಿಕೊಳ್ಳುವ ಸಮಯವಾಗಿರುತ್ತದೆ. ರೈತರು ತಮ್ಮ ಗದ್ದೆಗಳನ್ನು ಹಸನುಗೊಳಿಸಲು, ನೇಜಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಇದು ಸಕಾಲವಾಗಿರುತ್ತದೆ. ಮೇ ತಿಂಗಳಲ್ಲಿ ಬರುವ ಮಳೆ ಜೂನ್ ವೇಳೆಗೆ ಸಕಾಲದಲ್ಲಿ ಗದ್ದೆ ಉತ್ತು, ಬಿತ್ತಿ, ನೇಜಿ ನೆಡಲು ಸಹಾಯಕವಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ಆಕಾಶ ಬೀರಿದು ಸುರಿಯದ ಮಳೆಯಿಂದಾಗಿ ಜೂನ್ ಎರಡು-ಮೂರನೇ ವಾರದವರೆಗೂ ಅವರ ಪೂರ್ವ ಸಿದ್ಧತೆ ಮುಗಿಯಲು ಸಾಧ್ಯವಿಲ್ಲ.

ಹೀಗಾಗಿ ಇಂದು ರೈತನ ದೃಷ್ಠಿ ಆಕಾಶದತ್ತ ನೆಟ್ಟಿದೆ. ಮೋಡದ ಸುಳಿವಿಲ್ಲದ ನೀಲ ಆಕಾಶದಲ್ಲಿ ಆತನ ನಿಟ್ಟುಸಿರು ಯಾರಿಗೂ ಕೇಳದಂತೆ ಅಂತರ್ದಾನಗೊಳ್ಳುತ್ತಿದೆ. 

Similar News