ಹೃದಯ ಬೆಸೆಯುವ 'ಡೇರ್ ಡೆವಿಲ್ ಮುಸ್ತಫಾ'

Update: 2023-05-21 06:41 GMT

ಶಶಾಂಕ್ ಸೋಗಾಲ್ ನಿರ್ದೇಶಿಸಿದ, ಪೂರ್ಣಚಂದ್ರ ತೇಜಸ್ವಿ ಅವರು ಬರೆದ ಕತೆಯಾಧಾರಿತ 'ಡೇರ್ ಡೆವಿಲ್ ಮುಸ್ತಫಾ' ಬಿಡುಗಡೆಯಾಗಿದೆ. ಸುಂದರವಾದ ಕನ್ನಡ ಸಿನೆಮಾ. ಯೋಚನೆಗೆ ಹಚ್ಚುವ ಸಿನೆಮಾ. ಮರೆತು ಹೋಗಬಾರದ, ಆದರೆ ಮರೆತು ಹೋಗುತ್ತಿರುವ ವಿಷಯಗಳ ಬಗ್ಗೆ ಎಚ್ಚರಿಸುವ ಸಿನೆಮಾ. ಹಸಿವು, ಬಡತನ, ಶಿಕ್ಷಣ, ಆರೋಗ್ಯ, ನಿರುದ್ಯೋಗ ಇತ್ಯಾದಿಗಳಿಗಿಂತ ಜಾತಿ ತುರ್ತಿನ ವಿಷಯವಾಗಿಬಿಟ್ಟಿರುವ ಇಂದಿನ ವಿಷಮಯ ದಿನಗಳಲ್ಲಿ, ಇದೊಂದು ಸರಿಯಾದ ದಿಕ್ಕಿನಲ್ಲಿ ಇಟ್ಟ ದಿಟ್ಟ ಹೆಜ್ಜೆ.

''ಕನ್ನಡ ಉಳಿಸಿ'' - ''ಜಾತಿ ಅಳಿಸಿ'' ಇತ್ಯಾದಿ ಕೂಗಿನ, ಕರೆಗಳ ನಡುವಿನಲ್ಲಿ, ಜಾತಿಗಳ ಇರುವಿಕೆಯನ್ನು ಗುರುತಿಸುತ್ತಲೇ, ಅದರಾಚೆಗಿನ ಜೀವನ, ಮನುಷ್ಯತ್ವವನ್ನು ಎತ್ತಿ ಹಿಡಿದು, ಇಂದಿನ ತುರ್ತಿನ ಬಗ್ಗೆ ಮಾತನಾಡುವ, ಕನ್ನಡದ ಭಿನ್ನತೆಗಳನ್ನು ಗುರುತಿಸುತ್ತಲೇ, ಅದನ್ನು ಒಳಗೊಂಡೇ ಇರುವ ವಿಭಿನ್ನ ಸಂಸ್ಕೃತಿಯ ಸೌಂದರ್ಯವನ್ನು ಗುರುತಿಸುವ ಈ ಸಿನೆಮಾ, ಜಾತ್ಯತೀತ ಮನಸ್ಸುಗಳನ್ನು ನಿರ್ಮಿ ಸುವ ಕಡೆಗೆ, ಕನ್ನಡ ಉಳಿಸುವಲ್ಲಿ ಸುಂದರ ಪ್ರಯತ್ನ.

ಸಿನೆಮಾಕ್ಕಾಗಿ ತೇಜಸ್ವಿ ಅವರ ಮೂಲ ಕಥೆಯನ್ನು ಹಿಗ್ಗಿಸಿದರೂ, ಅದು ಕಥೆಯ ಪ್ರಪಂಚದೊಳಗಿನಿಂದಲೇ ಹುಟ್ಟಿದ ವಿಸ್ತರಣೆ ಎನ್ನಿಸುವಷ್ಟು ಸಹಜವಾಗಿ ಬೆಳೆಸಲಾಗಿದೆ. ಒಲಿವಿಯಾ ಎನ್ನುವ ಕ್ರೈಸ್ತ ಪಾತ್ರ ತಂದಿದ್ದು, ಕಥೆಯ ಒಳಗಿನ ಆಶಯದ ವಿಸ್ತರಣೆಯೇ ಆಗಿದೆ. ಹಾಗೆಯೇ, ಸಿನೆಮಾದಲ್ಲಿ ಬರುವ, ಕಥೆಯಲ್ಲಿ ಬರುವ ಅನೇಕ ಎಳೆಗಳು, ಇಂದಿಗೂ ದುರದೃಷ್ಟಕರವಾಗಿ ಎಷ್ಟು ಪ್ರಸಕ್ತ ಅನಿಸುತ್ತೆ. ಮುಸ್ತ್ತಫಾನ ಟೊಪ್ಪಿಘಟನೆ, ಹಿಜಾಬ್ ಪ್ರಕರಣವನ್ನು ನೆನಪಿಸಿದರೆ, ''ಎದೆ ಸೀಳಿದರೆ ಎರಡಕ್ಷರ ಸಿಗದವನು'' ಎನ್ನುವ ಡೈಲಾಗ್, ಇಂದಿನ ನಿಜಜೀವನದ ಡೈಲಾಗನ್ನೇ ನೆನಪಿಸುತ್ತದೆ. ಲವ್ ಜಿಹಾದ್, ಮತಾಂತರ, ಹೀಗೆ ಎಷ್ಟೊಂದು ವಿಷಯಗಳ ಹಿಂದಿನ ಮೂಢ ಮನಸ್ಸುಗಳನ್ನು, ಅಪಪ್ರಚಾರಗಳನ್ನು ನೆನಪಿಸುತ್ತಲೇ, ಅವನ್ನು ಮೀರಬೇಕಾದ ಅಗತ್ಯವನ್ನೂ ಗಟ್ಟಿಯಾಗಿ ಹೇಳುತ್ತದೆ.

ಸಿನೆಮಾ ನೋಡುತ್ತಲೇ, ಇಂದಿನ ಆಗು-ಹೋಗುಗಳನ್ನು ಹೋಲಿಸಿ ನೋಡಿದರೆ, ಇಂದು ಮುಸ್ತಫಾ, ತಾನು ಟೊಪ್ಪಿ ತೆಗೆಯುವುದಿಲ್ಲ ಎಂದು ಹಠ ಹಿಡಿದಿದ್ದರೆ, ಅವನನ್ನು ಶಾಲೆಯಲ್ಲಿ ಉಳಿಯಲು ಬಿಡುವಂತಹ ದಿಟ್ಟ ಗುರುಗಳು ಎಷ್ಟು ಜನ ಇದ್ದಾರು? ಅಂಗಿ ಜೇಬಲ್ಲಿ ಮೊಟ್ಟೆಯೊಡೆದು ತಮಾಷೆ ಮಾಡಿದ ಮುಸ್ತಫಾನನ್ನು ಹಾಗೇ ಸುಮ್ಮನೆ ಬಿಟ್ಟಾರೆ? ಅಥವಾ ಟೊಪ್ಪಿಯನ್ನು ಬೀಳಿಸಿದ್ದಕ್ಕಾಗಿ ಪ್ರತಿಕಾರವಾಗದೇ ಇದ್ದೀತೇ ಎಂದೆಲ್ಲಾ ಯೋಚಿಸುವಾಗ, ಸಿನೆಮಾದ ಮೊದಲಲ್ಲೇ ಬರುವ ತೇಜಸ್ವಿಯವರ ವೀಡಿಯೊ ಹೇಳಿಕೆಯಲ್ಲಿ ಅವರು ಹೇಳುವಂತೆ, ''ಈ ಕೋಮುವಾದ ಬೆಳೆಯುತ್ತಿರುವ ಪರಿ ನೋಡಿದರೆ, ನಮ್ಮ ಮಕ್ಕಳಿಗೆ ಭವಿಷ್ಯ ಇದೆಯೇ ಎಂದು ಚಿಂತೆಯಾಗುತ್ತೆ'' ಎನ್ನುವುದು ಇಂದು ನಿಜವೇ ಆಗಿಬಿಟ್ಟಿ ದೆಯಲ್ಲಾ ಎಂದು ದುಃಖಃವೂ ಆಗುತ್ತದೆ. ಧರ್ಮದ ಹೆಸರಲ್ಲಿ, ಪಕ್ಷದ ಹೆಸರಲ್ಲಿ ಗೆಳೆಯರು ದೂರವಾಗುತ್ತಿರುವ ಇಂದಿನ ದಿನಗಳಲ್ಲಿ, ಈ ಸಿನೆಮಾ ಅಪರೂಪದ ಕೃತಿ ಎಂದು ಇದೇ ಕಾರಣಕ್ಕೆ ಅನಿಸುತ್ತದೆ.

ಗೆಳೆಯರಿಂದ, ಸಂಬಂಧಿಕರಿಂದ ಹಣಗೂಡಿಸಿ ಮಾಡಿದ ಸಿನೆಮಾ ಇದಾದರೂ, ತಾಂತ್ರಿಕವಾಗಿ ಸೊರಗದಂತೆ ಮಾಡಿದ್ದು, ಈ ತಂಡದ ಇನ್ನೊಂದು ಗೆಲುವು. ಪ್ರಸಕ್ತ ಅನಿಸುವಂತೆ ಚಿತ್ರಿಸುತ್ತಲೇ, ತುಸು ಹಿಂದಿನ ಕಾಲದ ಚಿತ್ರಣವನ್ನು ತಂದು, ಚಿತ್ರಕ್ಕೆ ಒಂದು ಅಂದದ ಕಾಲ ಘಟ್ಟವನ್ನು ರೂಪಿಸಿದ್ದಾರೆ. ಘಟನೆಗಳಿಗೆ, ರೂಪಕಗಳ ಭಾರವನ್ನು ಅತಿಯಾಗಿ ಹೇರದೆ, ಸಂಭಾಷಣೆಗಳಲ್ಲಿ, ತಿಳಿ ಹಾಸ್ಯವನ್ನು ಇಟ್ಟುಕೊಳ್ಳುತ್ತಲೇ, ಹೇಳಬೇಕಾದ್ದನ್ನು ನಿರ್ಭಿಡೆಯಿಂದ ಹೇಳುವುದು ಈ ಸಿನೆಮಾದ ಬರವಣಿಗೆಯ ಶಕ್ತಿ ಅನಿಸುತ್ತದೆ. ಸಿನೆಮಾ ಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡು, ವಾಚ್ಯವಾಗದಂತಹ ಬರವಣಿಗೆ. ಸಿನೆಮಾದಲ್ಲಿ ಅ್ಯನಿಮೇಷನ್ ಬಳಕೆಯ ಮೂಲಕ ಕಥೆಯ ಓಟಕ್ಕೆ ತೀವ್ರತೆಯನ್ನೂ ತರಲಾಗಿದೆ. ಚಿತ್ರದ ಮೊದಲಲ್ಲಿ ಬರುವ ಪುನೀತ್ ರಾಜ್‌ಕುಮಾರ್ ಅವರ ಚನ್ನಪಟ್ಟಣದ ಬೊಂಬೆ, ಪುನೀತ್ ಎನ್ನುವ ಹೆಸರಿಗಿರುವ ಭಾವನೆಯನ್ನು ಮಧುರವಾಗಿ ನೆನಪಿಸಿತು. ಚಿತ್ರದಲ್ಲಿ ಬರುವ ರಾಜ್‌ಕುಮಾರ್ ಚಿತ್ರಿಕೆಯೂ, ಕನ್ನಡ ಚಿತ್ರಗಳ ಅಪರೂಪದ ಚಿತ್ರಗಳ ಸ್ಮರಣೆ ಮಾಡಿಸಿತು. ಇಲ್ಲಿ ಅದು ಕೇವಲ ನಾಮಸ್ಮರಣೆಯಲ್ಲದೇ, ಕಥನಕ್ಕೆ ಸೂಕ್ತವಾದ ಕೊಡುಗೆಯೂ ನೀಡಿದ್ದು, ನಿರ್ದೇಶಕರ ಚಳಕವೇ ಸರಿ. ಕಥೆಯಲ್ಲಿ, ಮುಸಲ್ಮಾನರ ಕುತೂಹಲಕಾರೀ ಜೀವನದ ಬಗ್ಗೆ ವಿವರಣೆ ಬರುವಾಗ, ಗಾತ್ರ ಹಿಗ್ಗಿಸಿದ ಚಂದ್ರನ ಬಿಂಬ, ಕೆಕ್ಕರಿಸಿದ ಕಣ್ಣಿನ ಮೊಗಲ್ ದಾಳಿಕೋರ ಹೀಗೆ ಬಳಸಿದ ಅ್ಯನಿಮೇಷನ್, ಪುಸ್ತಕ ಓದುವಾಗ ಮೂಡಿಬರುವ ಕೌತುಕಕ್ಕೆ ಸಮರ್ಪಕವಾದ ಬಿಂಬ ಅನಿಸಿತು. ಈ ಚಿತ್ರಗಳಲ್ಲಿ, ಸಮಾಜದೊಳಗೆ ಹುದುಗಿರುವ ಬಣ್ಣದ ಕಣ್ಣನ್ನೂ ಎತ್ತಿತೋರಿಸಿದ್ದು, ಈ ಸಿನೆಮಾವನ್ನು ಇನ್ನಷ್ಟು ಶಕ್ತಗೊಳಿಸುತ್ತದೆ. ಸಿನೆಮಾದಲ್ಲಿ ಮಂಗಗಳ ಮುಖವಾಡ ಹಾಕಿದ ನರ್ತಕರಿರುವ ಹಾಡು, ನೇರ ವಾಟ್ಸ್‌ಆ್ಯಪ್ ಯೂನಿವರ್ಸಿಟಿ ಶಿಷ್ಯವೃಂದದವರನ್ನು ಎಚ್ಚರಿಸುವ ಪ್ರಯತ್ನ ಮಾಡಿದರೆ, ಸರ್ವಜನಾಂಗದ ಶಾಂತಿಯ ತೋಟ ಹಾಡು ಮೂಡಿದಾಗ, ದ್ವೇಷದ, ವಿಷಮಯವಾಗಿರುವ ಇಂದಿನ ಕಾಲ ನೆನಪಾಗಿ ಕಣ್ಣೀರು ಮೂಡುತ್ತದೆ.

ಈ ಸಿನೆಮಾದಲ್ಲಿ ನಟಿಸಿದ ಒಬ್ಬೊಬ್ಬರೂ, ಸಿನೆಮಾಕ್ಕೆ ಅವರದ್ದೇ ಕೊಡುಗೆ ನೀಡಿದ್ದಾರೆ. ಗೆಳೆಯರೆಲ್ಲಾ ಸೇರಿಕೊಂಡು ಸಿನೆಮಾ ಮಾಡಿದಾಗ ಸಿಗುವ ಸುಖ, ತೆರೆಯಮೇಲೆ ಕಾಣಿಸುತ್ತಿದೆ. ಇಲ್ಲಿರುವ ಒಬ್ಬೊಬ್ಬರದ್ದೂ ಒಂದೊಂದು ಪ್ರಯಾಣ. ನಿಜಜೀವನದ ಪ್ರಯಾಣದೊಂದಿಗೆ, ವೈಚಾರಿಕವಾಗಿ ಇಷ್ಟುದೊಡ್ಡ ತಂಡ ಸರಿಯಾದ ದಿಕ್ಕಿನಲ್ಲಿ ನಡೆದಿದೆ ಎನ್ನುವುದೇ ಸಂಭ್ರಮದ ವಿಷಯ ಅನಿಸಿತು. ಅವರೆಲ್ಲರಿಗೂ ಹಿರಿಯಣ್ಣನಾಗಿ ನಟ ಧನಂಜಯ ನಿಂತು, ಚಿತ್ರಕ್ಕೆ ತಾರಾಬೆಂಬಲ ನೀಡಿದ್ದಾರೆ. ಅಪರೂಪದ ತಂಡ ಇದು. ಇವತ್ತು ಕನ್ನಡ ಸಿನೆಮಾ ಇರುವ ಪರಿಸ್ಥಿತಿಯಲ್ಲಿ, ಎರಡು ವಾರ ಬಿಟ್ಟು ಹೋದರಾಯಿತು. ನಾಲ್ಕು ವಾರ ಬಿಟ್ರೆ ಒಟಿಟಿಯಲ್ಲಿ ಬರುತ್ತೆ ಎಂದೆಲ್ಲಾ ಕಾಯುವ ಸಮಯವಿಲ್ಲ. ಇಂದೇ, ಸಿನೆಮಾ ಮಂದಿರಕ್ಕೆ ಹೋಗಿ, ಈ ಸಿನೆಮಾವನ್ನು ಬೆಂಬಲಿಸಬೇಕಾಗಿದೆ.

Similar News