×
Ad

2000 ನೋಟು ಹಿಂಪಡೆದ ಆರ್‌ಬಿಐ: ಎಲ್ಲೆಡೆ ಚಿನ್ನ ಖರೀದಿಯ ಭರಾಟೆ

Update: 2023-05-21 07:32 IST

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿಯ ನೋಟನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ನಿರ್ಧಾರ ಪ್ರಕಟಿಸುತ್ತಿದ್ದಂತೆ, ಆತಂಕಗೊಂಡಿರುವ ಜನತೆ 2000 ರೂಪಾಯಿ ನೋಟು ಬಳಸಿ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ರಾಜಧಾನಿಯಲ್ಲಿ ಗ್ರಾಹಕರೊಬ್ಬರು ಶನಿವಾರ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆಗಳಿಗೆ ಬುಕ್ಕಿಂಗ್ ಮಾಡಿ 2000 ರೂಪಾಯಿಯ ನೋಟುಗಳನ್ನು ನೀಡಿದ್ದಾರೆ. ಆರ್‌ಬಿಐ ನಿರ್ಧಾರದ ಬೆನ್ನಲ್ಲೇ ಗ್ರಾಹಕರು ತಮ್ಮಲ್ಲಿರುವ ನೋಟುಗಳಿಂದ ಚಿನ್ನಾಭರಣಗಳ ಖರೀದಿಗೆ ಮುಂದಾಗಿದ್ದಾರೆ.

ಪ್ರಮುಖ ಜ್ಯುವೆಲ್ಲರಿ ಬ್ರಾಂಡ್‌ಗಳು ಸೇರಿದಂತೆ ರಾಜಧಾನಿಯ ಹಲವು ಮಳಿಗೆಗಳಲ್ಲಿ ಇಂಥದ್ದೇ ಚಿತ್ರಣ ಕಂಡುಬಂತು. ಮಳಿಗೆಗಳ ಸಹಾಯಕರು 2000 ರೂಪಾಯಿ ನೋಟುಗಳನ್ನು ಮೆಷಿನ್ ಅಥವಾ ಕೈಯಿಂದ ಎಣಿಸುವ ದೃಶ್ಯ ಎಲ್ಲೆಡೆ ಕಂಡುಬಂದಿದೆ. "ಬೆಳಿಗ್ಗೆಯಿಂದ ತಿಳಿ ಗುಲಾಬಿ ಬಣ್ಣದ ನೋಟುಗಳು ಅಲ್ಲೋಲ ಕಲ್ಲೋಲದ ಸ್ಥಿತಿ ಸೃಷ್ಟಿಸಿವೆ" ಎಂದು ನೋಯ್ಡಾದ ಪ್ರಮುಖ ಚಿಲ್ಲರೆ ಮಾರಾಟ ಮಳಿಗೆಯ ಸೇಲ್ಸ್‌ಮನ್ ಒಬ್ಬರು ಉದ್ಗರಿಸಿದರು.

2000 ರೂಪಾಯಿಯ ನೋಟುಗಳನ್ನೇ ನೀಡುವ ಗ್ರಾಹಕರಿಗೆ ಮಳಿಗೆಗಳು ಚಿನ್ನಕ್ಕೆ ಹೆಚ್ಚಿನ ದರ ವಿಧಿಸುತ್ತಿವೆ ಎಂದೂ ಕೆಲ ಗ್ರಾಹಕರು ದೂರಿದ್ದಾರೆ. ಆದರೆ ತೆರಿಗೆ ಅಧಿಕಾರಿಗಳ ಗಮನಕ್ಕೆ ಬರದಂತೆ 2000 ರೂಪಾಯಿಯ ನೋಟುಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡಿ ಚಿನ್ನ ಖರೀದಿಸುವುದು ಅಸಾಧ್ಯ ಎನಿಸಿದೆ. ಏಕೆಂದರೆ ಎಲ್ಲ ಅಧಿಕ ಮೌಲ್ಯದ ವಹಿವಾಟುಗಳಿಗೆ ಪಾನ್ ಕಾರ್ಡ್ ವಿವರಗಳು ಕಡ್ಡಾಯ.

2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಶುಕ್ರವಾರ ಆರ್‌ಬಿಐ ಪ್ರಕಟಿಸಿದ್ದು, ಸಾರ್ವಜನಿಕರು ತಮ್ಮ ಬಳಿ ಇರುವ ನೋಟುಗಳನ್ನು 2023ರ ಸೆಪ್ಟೆಂಬರ್ 30ರ ಮೊದಲು ಬ್ಯಾಂಕ್ ಶಾಖೆಗಳಿಗೆ ಮರಳಿಸುವಂತೆ ಸೂಚಿಸಿದೆ. ಆ ಬಳಿಕವೂ ಇದರ ಚಲಾವಣೆ ಕಾನೂನುಬದ್ಧ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

Similar News