ತಾಯಿಯ ಶ್ರಮ ತಪ್ಪಿಸಲು ಬಾವಿ ತೋಡಿದ ಆದಿವಾಸಿ ಬಾಲಕ
ಮಹಾರಾಷ್ಟ್ರ : ಕುಡಿಯುವ ನೀರು ತರುವ ಸಲುವಾಗಿ ಪ್ರತಿದಿನ ನದಿ ದಂಡೆಗೆ ಹೋಗುತ್ತಿದ್ದ ತಾಯಿಯ ಶ್ರಮ ತಪ್ಪಿಸಲು ತನ್ನ ಗುಡಿಸಲಿನ ಬಳಿ ಸ್ವತಃ ಪರಿಶ್ರಮದಿಂದ ಬಾವಿ ತೋಡುವ ಪುಟ್ಟ ಆದಿವಾಸಿ ಬಾಲಕನೊಬ್ಬನ ಭಗೀರಥ ಪ್ರಯತ್ನ ಕೊನೆಗೂ ಫಲಿಸಿದೆ.
ಮುಂಬೈನಿಂದ 128 ಕಿಲೋಮೀಟರ್ ದೂರದ ಪಾಲ್ಘರ್‌ನ ಕೆಳ್ವೆ ಎಂಬ ಗ್ರಾಮದ ಒಂಬತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಪ್ರಣವ್ ರಮೇಶ್ ಸಲ್ಕಾರ್ ಎಂಬ ಬಾಲಕ 15 ದಿನಗಳಲ್ಲಿ ಈ ಅಮೋಘ ಸಾಧನೆ ಮಾಡಿದ್ದಾನೆ.
ಈ ಸಾಧನೆಗೆ ಪ್ರೇರಣೆ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬಾಲಕ, ಪ್ರತಿದಿನ ಅಡುಗೆಗೆ ಮುನ್ನ ನೀರಿಗಾಗಿ ತಾಯಿ ನದಿ ಬದಿಗೆ ಹೋಗಿ ನೀರು ತರಬೇಕಿತ್ತು. ಇದು ನನಗೆ ಮನಸ್ಸಿರಲಿಲ್ಲ. ಇದೀಗ ನನ್ನ ತಾಯಿ ಪ್ರತಿದಿನ ನೀರಿಗಾಗಿ ನದಿ ದಂಡೆಗೆ ಹೋಗುವ ಕಷ್ಟ ತಪ್ಪಿದೆ. ನನಗೆ ಈಗ ಅತೀವ ಸಂತಸವಾಗುತ್ತಿದೆ" ಎಂದು ಹೇಳಿದ್ದಾನೆ.
ಮಾಧ್ಯಮಗಳಲ್ಲಿ ಬಾಲಕನ ಸಾಧನೆ ವರದಿಯಾಗುತ್ತಿದ್ದಂತೆ ಸೆಲೆಬ್ರಿಟಿ ಎನಿಸಿಕೊಂಡಿರುವ ಬಾಲಕನಿಗೆ ದಿಢೀರ್ ಜನಪ್ರಿಯತೆ ಕಿರಿ ಕಿರಿ ಎನಿಸಿದೆ. ಬಾಲಕನ ದೈನಂದಿನ ಚಟುವಟಿಕೆಗಳಾದ ಸುಧೀರ್ಘ ನಡಿಗೆ, ಮರ ಏರುವುದು ಮತ್ತು ಪಕ್ಷಿ ವೀಕ್ಷಣೆಯ ಹವ್ಯಾಸಗಳಿಗೆ ಅಡ್ಡಿಯಾಗಿದೆ.
ಮೊಬೈಲ್, ಪಿಜ್ಝಾ, ಗೂಗಲ್‌ನಿಂದ ದೂರ ಉಳಿಯಲು ಬಯಸಿರುವ ಬಾಲಕ ತಾನು ಕೈಹಾಕಬಹುದಾದ ಕಾರ್ಯಗಳ ಬಗ್ಗೆ ಪ್ರಯೋಗ ನಡೆಸುವ ಉತ್ಸಾಹದಲ್ಲಿದ್ದಾನೆ. ಬಾಲಕ ಇತ್ತೀಚೆಗೆ ಮೋಟಾರ್ ಬೈಕ್ ಬ್ಯಾಟರಿಗೆ ಸೋಲಾರ್ ಪ್ಯಾನಲ್ ಸಂಪರ್ಕಿಸುವ ಮೂಲಕ ತನ್ನ ಗುಡಿಸಲು ಬೆಳಗಲು ವ್ಯವಸ್ಥೆ ಮಾಡಿದ್ದಾನೆ.
ಮೇ ತಿಂಗಳ ಸುಡು ಬಿಸಿಲಲ್ಲಿ ಗುದ್ದಲಿ, ಶಾಲು ಹಾಗೂ ಪುಟ್ಟ ಏಣಿಯೊಂದಿಗೆ 14 ವರ್ಷದ ಬಾಲಕ ತನ್ನ ಮನೆ ಪಕ್ಕದಲ್ಲಿ ಬಾವಿ ತೋಡಲು ಆರಂಭಿಸಿದ್ದಾನೆ. ಊಟದ ವಿರಾಮ ಬಿಟ್ಟು ದಿನವಿಡೀ ತನ್ನ ಕಾಯಕದಲ್ಲಿ ನಿರತನಾಗುತ್ತಿದ್ದ ಎಂದು ತಂದೆ ರಮೇಶ್ ಹೇಳುತ್ತಾರೆ. ಬಾಲಕನ ಸಾಧನೆಯನ್ನು ತಾಯಿ ದರ್ಶನಾ ಕೊಂಡಾಡಿದ್ದಾರೆ. ಸ್ವಚ್ಛ ನೀರು ಹೊರಚಿಮ್ಮಿದಾಗ ಬಾಲಕನ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಾಲಕನ ಸಾಧನೆಯನ್ನು ಬಿಂಬಿಸುವ ಪುಟ್ಟ ಫಲಕವನ್ನು ಬಾವಿಯ ಮೇಲೆ ಅಳವಡಿಸಲಾಗಿದೆ.
ನಾಲ್ವರು ಮಕ್ಕಳ ಪೈಕಿ ಕಿರಿಯವನಾದ ಪ್ರಣವ್ ತೋಡಿರುವ 20 ಅಡಿಯ ಬಾವಿಗೆ ಮಣ್ಣಿನ ಕಟ್ಟೆ ಕಟ್ಟಲು ತಂದೆ ರಮೇಶ್ ಸಹಕರಿಸಿದ್ದಾರೆ.