×
Ad

ಮುಂದಿನ ಒಂದು ವರ್ಷದಲ್ಲಿ ಕರ್ನಾಟಕದ ಹೊಸ ಸರಕಾರ ಪತನ: ಅಣ್ಣಾಮಲೈ

Update: 2023-05-21 12:44 IST

ಚೆನ್ನೈ: ಮುಂದಿನ ಒಂದು ವರ್ಷದಲ್ಲಿ ಕರ್ನಾಟಕದ ಹೊಸ ಸರಕಾರವು  ಇಸ್ಪೀಟ್  ಎಲೆಗಳಂತೆ ಕುಸಿತ ಕಾಣಲಿದೆ  ಎಂದು ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಭವಿಷ್ಯ ನುಡಿದಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ  ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ ಅಣ್ಣಾಮಲೈ, ಈ ಅವಧಿಯಲ್ಲಿ ಪರಸ್ಪರ ಜಗಳವಾಡದೇ ಇದ್ದರೆ ಇಬ್ಬರಿಗೂ  ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗುವುದು ಎಂದರು.

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ  ವಿಭಜನೆಯಾಗಿದೆ. ಸಿದ್ದರಾಮಯ್ಯ ಹಾಗೂ  ಡಿಕೆ ಶಿವಕುಮಾರ್ ಇಬ್ಬರೂ ತಮ್ಮದೇ ಬಣಗಳ ಬೆಂಬಲವನ್ನು ಹೊಂದಿದ್ದಾರೆ. ಇದು ಆಡಳಿತವನ್ನು ನಿರ್ಲಕ್ಷಿಸಲು ಕಾರಣವಾಗುತ್ತದೆ ಎಂದರು. 

ಮುಂದಿನ ವರ್ಷದ ವೇಳೆಗೆ ಕರ್ನಾಟಕದ ಹೊಸ ಸರಕಾರ ಇಸ್ಪೀಟ್ ಕಾರ್ಡ್‌ಗಳಂತೆ ಪತನವಾಗುವುದು ಖಚಿತ. ಕ್ಯಾಬಿನೆಟ್‌ನಲ್ಲಿರುವ ಯಾವುದೇ ಸಚಿವರಿಗೆ ಯಾವುದಕ್ಕೂ ಹೊಣೆಗಾರಿಕೆ ಇರುವುದಿಲ್ಲ ಹಾಗೂ  ಅದು ಆಡಳಿತದಲ್ಲಿ ಅವ್ಯವಸ್ಥೆಗೆ ಕಾರಣವಾಗುತ್ತದೆ ಎಂದರು.

ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಧ್ಯೆ ಉತ್ತಮ ಬಾಂಧವ್ಯವನ್ನು ಬಿಂಬಿಸಲು ಕಾಂಗ್ರೆಸ್ ಪಕ್ಷವು ಪ್ರಯತ್ನಿಸುತ್ತಿದೆ ಎಂದಿರುವ  ಅಣ್ಣಾಮಲೈ “ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಗಳವಾಡದೆ ತಮ್ಮ ಅಧಿಕಾರದ ಅವಧಿಯನ್ನು ಮುಗಿಸಿದರೆ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು. ಬಿಜೆಪಿ ವಿರೋಧಿ ಪಕ್ಷಗಳು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿರುವುದನ್ನು ನೋಡಿದ್ದೇವೆ ಹಾಗೂ  ಅವರ ಒಗ್ಗಟ್ಟು ಬೆಂಗಳೂರಿನಲ್ಲಿ ಔತಣಕೂಟಕ್ಕೆ ಸೀಮಿತವಾಗಿದೆ. ಮುಂದೊಂದು ದಿನದಿಂದ ನಾಯಕರು ಅಧಿಕಾರಕ್ಕಾಗಿ ಕ್ಷುಲ್ಲಕ ರಾಜಕಾರಣ ಮಾಡುತ್ತಾರೆ. ಈ ರೀತಿ ಆಗಿದ್ದನ್ನು  ನಾವು ಈಗಾಗಲೇ ಹಲವು ಬಾರಿ ನೋಡಿದ್ದೇವೆ ”ಎಂದು  ಹೇಳಿದರು.

Similar News