ಅಂಗಾಂಗ ದಾನದ ಮೂಲಕ ಆರು ಮಂದಿಗೆ ಜೀವದಾನ ಮಾಡಿದ ಅಪಘಾತದಲ್ಲಿ ಮೃತಪಟ್ಟ 10ನೇ ತರಗತಿ ವಿದ್ಯಾರ್ಥಿ

Update: 2023-05-21 12:31 GMT

ತಿರುವನಂತಪುರಂ: ಶುಕ್ರವಾರ ಪ್ರಕಟವಾದ ಕೇರಳ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕದಲ್ಲಿ ಉತ್ತೀರ್ಣನಾಗಿದ್ದ ತಿರುವನಂತಪುರಂ ನಿವಾಸಿ ಸಾರಂಗ್ (16) ಎಂಬ ವಿದ್ಯಾರ್ಥಿಯು ಫಲಿತಾಂಶ ಪ್ರಕಟವಾಗುವ ಎರಡು ದಿನ ಮುನ್ನ ರಸ್ತೆ ಅಪಘಾತಕ್ಕೀಡಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಕೇರಳ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಆಯೋಜಿಸಿದ್ದ 10ನೇ ತರಗತಿ ಪರೀಕ್ಷೆಯಲ್ಲಿ ಎ+ ಶ್ರೇಯಾಂಕ ಪಡೆದು ಉತ್ತೀರ್ಣನಾಗಿದ್ದ ಸಾರಂಗ್, ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು ಅಂಗಾಂಗ ದಾನದ ಮೂಲಕ ಆರು ಮಂದಿಗೆ ಜೀವದಾನ ಮಾಡಿದ್ದಾನೆ ಎಂದು thenewsminute.com ವರದಿ ಮಾಡಿದೆ.

ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ 10ನೇ ತರಗತಿ ಫಲಿತಾಂಶವನ್ನು ಪ್ರಕಟಿಸುವ ಮೊದಲು ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಮೃತ ಸಾರಂಗ್‌ಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭಾವುಕರಾಗಿದ್ದ ಶಿಕ್ಷಣ ಸಚಿವ ಶಿವನ್ ಕುಟ್ಟಿ, ಯಾವುದೇ ಕೃಪಾಂಕವಿಲ್ಲದೆ ಸಾರಂಗ್ ಎ+ ಶ್ರೇಯಾಂಕದಲ್ಲಿ ಉತ್ತೀರ್ಣನಾಗಿದ್ದ. ಆತ ಫುಟ್‌ಬಾಲ್ ಆಟಗಾರನಾಗಿದ್ದ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡದ ಅಭಿಮಾನಿಯಾಗಿದ್ದ ಎಂದು ಅವರು ಸ್ಮರಿಸಿದರು. ಅಂಗಾಂಗ ದಾನ ಮಾಡುವ ನಿರ್ಣಯ ಕೈಗೊಂಡ ಆತನ ಪೋಷಕರನ್ನು ಸಚಿವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

ಈ ಸಂಬಂಧ ಫೇಸ್‌ಬುಕ್‌ ಪೋಸ್ಟ್ ಮಾಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್, ಆತನ ಎರಡು ಮೂತ್ರಪಿಂಡ, ಒಂದು ಯಕೃತ್ತು, ಹೃದಯ ಕವಾಟ ಹಾಗೂ ಎರಡು ಕಾರ್ನಿಯಾವನ್ನು ದಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Similar News