ಸಚಿವ ಸಂಪುಟದಲ್ಲಿ ಸ್ಥಾನ ಕೊಡಿಸುವುದಾಗಿ 28 ಶಾಸಕರಿಗೆ ಕರೆ ಮಾಡಿದ್ದ ಗುಜರಾತ್ ನ ವಂಚಕ: ವರದಿ

ವಂಚನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ‌.ಪಿ.ನಡ್ಡಾ ಹೆಸರು ಬಳಸಿಕೊಳ್ಳುತ್ತಿದ್ದ ಆರೋಪಿ

Update: 2023-05-21 12:44 GMT

ನಾಗಪುರ: ಏಕನಾಥ್ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಿಸುವುದಾಗಿ ಮೂರು ಬಿಜೆಪಿ ಶಾಸಕರಿಂದ ಹಣ ಪಡೆದು ವಂಚಿಸಿದ್ದ ಗುಜರಾತ್ ಮೂಲದ ವಂಚಕನು ವಿವಿಧ ರಾಜ್ಯಗಳ 28 ಶಾಸಕರೊಂದಿಗೆ ಸಂಪರ್ಕದಲ್ಲಿದ್ದ ಎಂಬ ಸ್ಫೋಟಕ ಸಂಗತಿಯನ್ನು ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಗಳು ಶನಿವಾರ ಬಹಿರಂಗ ಪಡಿಸಿದ್ದಾರೆ. ಇಂತಹುದೇ ಪ್ರಕರಣದಲ್ಲಿ ಆತನನ್ನು ಕಳೆದ ವರ್ಷ ದಿಲ್ಲಿ ಪೊಲೀಸರು ಬಂಧಿಸಿದ್ದರು ಎಂದು ಅವರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಮಾರ್ಬಿಯ ನಿವಾಸಿಯಾದ ನೀರಜ್ ಸಿಂಗ್ ರಾಠೋಡ್ ಅನ್ನು ನಾಗಪುರಕ್ಕೆ ಕರೆ ತರುವ ಮುನ್ನ ಮಂಗಳವಾರ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಕಳೆದ ಮೂರು ತಿಂಗಳ ಅವಧಿಯಲ್ಲಿ ಆರೋಪಿ ರಾಠೋಡ್ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಹರ್ಯಾಣ, ಝಾರ್ಖಂಡ್ ಹಾಗೂ ದಿಲ್ಲಿಯ 28 ಶಾಸಕರೊಂದಿಗೆ ಸಂಪರ್ಕ ಸಾಧಿಸಿದ್ದು, ಅವರಿಗೆಲ್ಲ ದುಡ್ಡು ಪಡೆದು ಸಚಿವ ಸ್ಥಾನ ದೊರಕಿಸಿಕೊಡುವ ಭರವಸೆ ನೀಡಿದ್ದಾನೆ. ಈ ಪೈಕಿ ಮೂವರು ಶಾಸಕರನ್ನು ವಂಚಿಸುವಲ್ಲಿ ಯಶಸ್ವಿಯೂ ಆಗಿದ್ದಾನೆ.

ಆರೋಪಿ ರಾಠೋಡ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 (ಸೋಗು ಹಾಕಿ ವಂಚನೆ), 420 (ವಸ್ತುಗಳನ್ನು ಒದಗಿಸುವ ವಿಚಾರದಲ್ಲಿ ವಂಚನೆ ಮತ್ತು ಅಪ್ರಾಮಾಣಿಕತೆ), 511 (ಜೀವಾವಧಿ ಅಥವಾ ಇನ್ನಿತರ ಕಾರಾಗೃಹ ಶಿಕ್ಷೆಗೆ ಗುರಿಯಾಗುವಂಥ ಅಪರಾಧಗಳಿಗೆ ಕಾರಾಗೃಹ ಶಿಕ್ಷೆ ವಿಧಿಸುವಂಥ ಶಿಕ್ಷೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಲ್ಲದೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 (ಕ್ರಿಮಿನಲ್ ಪಿತೂರಿ) ಅಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿಯು ತನ್ನ ವಂಚನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ‌.ಪಿ.ನಡ್ಡಾ ಹೆಸರು ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Similar News