×
Ad

ಗುತ್ತಿಗೆ ರಾಷ್ಟ್ರಪತಿಗಳ ಹೆಸರಿನಲ್ಲಿದೆ ಎಂಬ ಮಾತ್ರಕ್ಕೆ ಕೇಂದ್ರವು ಕಾನೂನಿಂದ ವಿನಾಯಿತಿ ಪಡೆಯುವಂತಿಲ್ಲ: ಸುಪ್ರೀಂ

Update: 2023-05-21 21:09 IST

ಹೊಸದಿಲ್ಲಿ,ಮೇ 21: ಗುತ್ತಿಗೆಯು ರಾಷ್ಟ್ರಪತಿಗಳ ಹೆಸರಿನಲ್ಲಿದೆ ಎಂಬ ಮಾತ್ರಕ್ಕೆ ಅದಕ್ಕೆ ಸಂಬಂಧಿಸಿದ ಕಾನೂನು ನಿಬಂಧನೆಗಳಿಂದ ಕೇಂದ್ರ ಸರಕಾರವು ವಿನಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಟೆಂಡರ್ ಗೆ ಸಂಬಂಧಿಸಿದ ವಿವಾದದಲ್ಲಿ ಸಂಸ್ಥೆಯಿಂದ ಮಧ್ಯಸ್ಥಗಾರರ ನೇಮಕ ಕುರಿತು ಕೇಂದ್ರದ ವಿರುದ್ಧ ಗ್ಲೋಕ್-ಏಶ್ಯಾ ಪೆಸಿಫಿಕ್ ಲಿ.ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಈ ತೀರ್ಪನ್ನು ನೀಡಿದೆ.

ಗ್ಲೋಕ್-ಏಶ್ಯಾ ಪೆಸಿಫಿಕ್ ಲಿ.ಪಿಸ್ತೂಲುಗಳ ಪೂರೈಕೆಗಾಗಿ ಕೇಂದ್ರ ಗೃಹ ಸಚಿವಾಲಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಬ್ಯಾಂಕ್ ಗ್ಯಾರಂಟಿಯನ್ನು ಅನುಷ್ಠಾನಗೊಳಿಸುವ ಕುರಿತು ವಿವಾದವುಂಟಾದ ಬಳಿಕ ಕಂಪನಿಯು ಜುಲೈನಲ್ಲಿ ಮಧ್ಯಸ್ಥಿಕೆಯನ್ನು ಕೋರಿ ನೋಟಿಸ್ ಅನ್ನು ನೀಡಿತ್ತು.

ಗೃಹ ಕಾರ್ಯದರ್ಶಿಗಳು ನೇಮಕಗೊಳಿಸುವ ಕಾನೂನು ಸಚಿವಾಲಯದ ಅಧಿಕಾರಿಯೋರ್ವರ ಮಧ್ಯಸ್ಥಿಕೆಗೆ ಮಾತ್ರ ವಿವಾದವನ್ನು ಒಪ್ಪಿಸಬೇಕು ಎನ್ನುವುದನ್ನು ಕಡ್ಡಾಯಗೊಳಿಸಿರುವ ಗುತ್ತಿಗೆಯ ಷರತ್ತನ್ನು ಕೇಂದ್ರವು ಉಲ್ಲೇಖಿಸಿತ್ತು. ಕಾನೂನು ಸಚಿವಾಲಯದ ಅಧಿಕಾರಿಯನ್ನು ಮಧ್ಯಸ್ಥಗಾರರನ್ನಾಗಿ ನೇಮಕಗೊಳಿಸಬೇಕೇಬ ಒಪ್ಪಂದದಲ್ಲಿನ ನಿಬಂಧನೆಯನ್ನು ಗ್ಲೋಕ್ ಪ್ರಶ್ನಿಸಿತ್ತು.

ಸರಕಾರವು ಮಧ್ಯಸ್ಥಗಾರನಾಗಿ ಆಯ್ಕೆ ಮಾಡುವ ವ್ಯಕ್ತಿಯು ‘ನಿಷ್ಪಕ್ಷಪಾತ ಮತ್ತು ಸ್ವತಂತ್ರ’ ಆಗಿರಬೇಕು ಹಾಗೂ ಸರಕಾರದೊಂದಿಗೆ ಹಿಂದೆ ಅಥವಾ ಪ್ರಸ್ತುತ ಯಾವುದೇ ವೃತ್ತಿಪರ ಸಂಬಂಧಗಳನ್ನು ಹೊಂದಿರಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಿಚಾರಣೆ ಸಂದರ್ಭ ತಿಳಿಸಿತು.

ಗ್ಲೋಕ್ ರಾಷ್ಟ್ರಪತಿಗಳೊಂದಿಗೆ ಗುತ್ತಿಗೆ ಒಪ್ಪಂದವನ್ನು ಮಾಡಿಕೊಂಡಿರುವುದರಿಂದ ಇದು ಇತರ ಪ್ರಕರಣಗಳಿಗಿಂತ ಭಿನ್ನವಾಗಿದೆ ಎಂದು ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ವಾದಿಸಿದರು. ಆದರೆ ಪೀಠವು ಈ ವಾದವನ್ನು ಒಪ್ಪಿಕೊಳ್ಳಲಿಲ್ಲ.

ಸಂವಿಧಾನದ ವಿಧಿ 299 (ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರ ಹೆಸರಿನಲ್ಲಿ ಕೇಂದ್ರ ಅಥವಾ ರಾಜ್ಯ ಮಾಡಿಕೊಂಡಿರುವ ಒಪ್ಪಂದಗಳು) ಶಾಸನಬದ್ಧ ಕಾನೂನುಗಳನ್ನು ಉಲ್ಲಂಘಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುವುದಿಲ್ಲ ಎಂದೂ ಸರ್ವೋಚ್ಚ ನ್ಯಾಯಾಲಯವು ಹೇಳಿತು.

ನ್ಯಾಯಾಲಯವು ವಿವಾದವನ್ನು ಇತ್ಯರ್ಥಗೊಳಿಸಲು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರಾದ ನ್ಯಾ.ಇಂದು ಮಲೋತ್ರಾ ಅವರನ್ನು ಏಕೈಕ ಮಧ್ಯಸ್ಥಗಾರರನ್ನಾಗಿ ನೇಮಕಗೊಳಿಸಿತು.

Similar News