ಕತ್ತರಿಗುಡ್ಡೆ: ಎಂ.ಫ್ರೆಂಡ್ಸ್ ವತಿಯಿಂದ ವಿದ್ಯಾರ್ಥಿ ಕಾರ್ಯಾಗಾರ
ಉಜಿರೆ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಸಂಯಮವನ್ನು ಕಾಪಾಡಿಕೊಂಡು ಸತ್ಪ್ರಜೆಯಾಗಿ ಗುರುತಿಸಿಕೊಳ್ಳಬೇಕು. ಜೊತೆಗೆ ಉತ್ತಮ ನಡತೆಯೊಂದಿಗೆ ಪ್ರತಿಭಾವಂತರಾಗಿ ಮುನ್ನಡೆಯಬೇಕು ಎಂದು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಹೇಳಿದರು.
ಅವರು ರವಿವಾರ ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಜಿರೆ ಕಕ್ಕಿಂಜೆ ಸಮೀಪದ ಕತ್ತರಿಗುಡ್ಡೆ ಸಿರಾಜುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆದ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ 90 ಶೇಕಡಾಕ್ಕಿಂತ ಅಧಿಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುತ್ತೇವೆ. ಉನ್ನತ ವಿದ್ಯಾರ್ಜನೆ ಮಾಡುವ ಆರ್ಥಿಕ ಸಂಕಷ್ಟದ ವಿದ್ಯಾರ್ಥಿಗಳಿಗೆ ಸಹಕರಿಸುತ್ತೇವೆ. ಇಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಬ್ಯಾಗ್ ವಿತರಿಸಲಾಗುವುದೆಂದು ಹೇಳಿದರು.
ಕತ್ತರಿಗುಡ್ಡೆ ಮದ್ರಸದ ಮುಖ್ಯಗುರು ಸದಕತುಲ್ಲಾ ದಾರಿಮಿ ದುವಾ ನೆರವೇರಿಸಿ ಮಾತನಾಡಿದರು. ಎಂ.ಫ್ರೆಂಡ್ಸ್ ಸದಸ್ಯ ಅಬೂಬಕರ್ ಪುತ್ತು ಉಪ್ಪಿನಂಗಡಿ, ಮದ್ರಸ ಅಧ್ಯಕ್ಷ ಅಬ್ದುಲ್ಲ, ಕಾರ್ಯದರ್ಶಿ ಸಾಜಿದ್, ಉಬೈದ್ ವಿಟ್ಲ ಉಪಸ್ಥಿತರಿದ್ದರು. ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು.