ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು 1 ಕಿ.ಮೀ. ಹಿಮ್ಮುಖವಾಗಿ ಚಲಿಸಿದ ರೈಲು…!

Update: 2023-05-22 04:13 GMT

ಕೊಚ್ಚಿ: ನಿಗದಿತ ನಿಲ್ದಾಣದಲ್ಲಿ ನಿಲುಗಡೆ ನೀಡದೇ ಮುಂದಕ್ಕೆ ಚಲಿಸಿದ ರೈಲು, ಕೊನೆಗೆ ಪ್ರಯಾಣಿಕರು ಮತ್ತು ರೈಲು ಅಧಿಕಾರಿಗಳನ್ನು ಹತ್ತಿಸಿಕೊಳ್ಳುವ ಸಲುವಾಗಿ ಒಂದು ಕಿಲೋಮೀಟರ್ ಹಿಮ್ಮುಖವಾಗಿ ಚಲಿಸಿದ ವಿಚಿತ್ರ ಪ್ರಕರಣ ವರದಿಯಾಗಿದೆ.

ಮಾವೇಲಿಕ್ಕರ ಮತ್ತು ಚೆಂಗನ್ನೂರು ನಿಲ್ದಾಣ ನಡುವಿನ ಡಿ ದರ್ಜೆ ನಿಲ್ದಾಣವಾದ ಚೆರಿಯನಾಡ್‌ನಲ್ಲಿ ಬೆಳಿಗ್ಗೆ 7.45ಕ್ಕೆ ಈ ಘಟನೆ ಸಂಭವಿಸಿದೆ.

ಶೋರನೂರಿಗೆ ಹೊರಟಿದ್ದ ವೇನಾಡ್ ಎಕ್ಸ್‌ಪ್ರೆಸ್ ರೈಲು ಭಾನುವಾರ ಆಲಪ್ಪುಝದ ಚೆರಿಯನಾಡ್ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕಿತ್ತು. ಈ ಘಟನೆಯಿಂದಾಗಿ ರೈಲಿನ ವೇಳಾಪಟ್ಟಿಯಲ್ಲಿ ಸುಮಾರು ಎಂಟು ನಿಮಿಷ ವ್ಯತ್ಯಯವಾಯಿತು. ಆದರೆ ಲೋಕೊ ಪೈಲಟ್ ಮುಂದಿನ ಪ್ರಯಾಣದಲ್ಲಿ ಅದನ್ನು  ಸರಿಪಡಿಸಿಕೊಂಡರು ಎಂದು ಹೇಳಲಾಗಿದೆ.

"ಚೆರಿಯನಾಡ್ ನಿಲ್ದಾಣ ಕೇವಲ ನಿಲುಗಡೆ ನಿಲ್ದಾಣವಾಗಿದ್ದರಿಂದ ಯಾವುದೇ ಸಿಗ್ನಲ್ ಇಲ್ಲ. ಕೇವಲ ದೊಡ್ಡ ಸ್ಟೇಷನ್‌ಗಳಲ್ಲಿ ಮಾತ್ರ ಸಿಗ್ನಲ್ ವ್ಯವಸ್ಥೆ ಇರುತ್ತದೆ. ಲೋಕೋಪೈಲಟ್‌ಗಳಿಂದದ ತಪ್ಪು ಆಗಿರಬಹುದು. ಕೆಲ ಮೀಟರ್ ದೂರ ಹೋಗುವಷ್ಟರಲ್ಲಿ ಗಮನಿಸಿದ್ದಾರೆ. ರೈಲಿಗೆ ದಿಢೀರ್ ಬ್ರೇಕ್ ಹಾಕುವಂತಿಲ್ಲ. ಇದರಿಂದಾಗಿ ಕೆಲ ಮೀಟರ್ ಮುಂದಕ್ಕೆ ಚಲಿಸಿದೆ" ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರೈಲು ಕೆಲ ಮೀಟರ್ ಮುಂದಕ್ಕೆ ಚಲಿಸಿದ್ದರಿಂದ ಸುಮಾರು 700 ಮೀಟರ್‌ನಷ್ಟು ಹಿಮ್ಮುಖವಾಗಿ ಚಲಿಸಿ ನಿಲ್ದಾಣಕ್ಕೆ ಬರಬೇಕಾಯಿತು. ಆದರೆ ಇದೇನೂ ದೊಡ್ಡ ಪ್ರಕರಣವಲ್ಲ ಅಥವಾ ಯಾರಿಗೂ ಯಾವುದೇ ಅನಾನುಕೂಲ ಆಗಿಲ್ಲ ಎಂದು ರೈಲು ಅಧಿಕಾರಿಗಳು ಸಮುಜಾಯಿಷಿ ನೀಡಿದ್ದಾರೆ. ರೈಲು ಹಿಮ್ಮುಖವಾಗಿ ಚಲಿಸಿ ಚೆರಿಯನಾಡ್ ನಿಲ್ದಾಣಕ್ಕೆ ಆಗಮಿಸಿದ್ದರಿಂದ ರೈಲು ಪ್ರಯಾಣಿಕರು ಹತ್ತಲು ಮತ್ತು ಇಳಿಯಲು ಸಾಧ್ಯವಾಗಿದೆ.

Similar News