ಆಡಳಿತ ವಿರೋಧಿ ಅಲೆ ಮಾತ್ರವಲ್ಲ, ಜನಾಂಗ ದ್ವೇಷಿ ಹಿಂದುತ್ವಕ್ಕೆ ಜನತೆ ಕಲಿಸಿದ ಪಾಠ

Update: 2023-05-22 05:20 GMT

ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧದ ಅಂಶವನ್ನು ಸೇರಿಸಿದಾಗ ಕೋಮುವಾದಿ ಮಾಧ್ಯಮಗಳು ಎಷ್ಟೊಂದು ಕೋಲಾಹಲ ಎಬ್ಬಿಸಿದವೆಂದರೆ ಕಾಂಗ್ರೆಸ್‌ಗರೇ ಎಲ್ಲಿ ತಪ್ಪಾಯಿತೋ ಎಂದು ಹೆದರಿ ವೀರಪ್ಪ ಮೊಯ್ಲಿಯವರು ಸ್ಪಷ್ಟೀಕರಣ ನೀಡಿದರು. ಆದರೆ ಚುನಾವಣೆ ಫಲಿತಾಂಶ ಬಂದ ನಂತರ ಅಚ್ಚರಿ ಕಾದಿತ್ತು. ಬಜರಂಗದಳ ಮುಂತಾದ ಕೋಮುವಾದಿ ಸಂಘಟನೆಗಳ ಪುಂಡಾಟಿಕೆಯಿಂದ ರೋಸಿ ಹೋದ ಮುಸಲ್ಮಾನರು ಮಾತ್ರವಲ್ಲ ಹಿಂದೂಗಳು ಕೂಡ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಸಮಾಜವಾದಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ನುರಿತ, ಪಕ್ವ ರಾಜಕಾರಣಿಯಾಗಿ ಬದಲಾಗಿರುವ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ಕರ್ನಾಟಕವನ್ನು ಹಾಳು ಮಾಡಿದ ಕೋಮುವಾದಿ ಶಕ್ತಿಗಳಿಂದ ಪೆಟ್ಟು ತಿಂದ ನಾಡನ್ನು ಮತ್ತೆ ಸರಿದಾರಿಗೆ ತರುವುದು ಸುಲಭದ ಸಂಗತಿಯಲ್ಲ. ಚುನಾವಣೆಯಲ್ಲಿ ಜನತೆ ನೀಡಿದ ತೀರ್ಪು ಬರೀ ತೀರ್ಪಲ್ಲ ಅದು ಹಲವಾರು ಸಂದೇಶಗಳನ್ನು ನೀಡಿದೆ. ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರದ ಆಡಳಿತದ ಬಗೆಗೆ ಬೇಸರ ಮಾತ್ರವಲ್ಲ, ಸಂಘ ಪರಿವಾರದ ಜನಾಂಗ ದ್ವೇಷಿ ಹಿಂದುತ್ವ ಸಿದ್ಧಾಂತವನ್ನು ಜನತೆ ತಿರಸ್ಕರಿಸಿದ್ದಾರೆ. ಉತ್ತರ ಭಾರತದ ಮಾದರಿಯಲ್ಲಿ ಜನತೆಯನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ ಮತ ಬಾಚಿಕೊಳ್ಳುವ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಮತ್ತು ಮೋದಿ ಹಾಗೂ ಅಮಿತ್ ಶಾ ಮಸಲತ್ತನ್ನು ಕರ್ನಾಟಕದ ಶಾಂತಿಪ್ರಿಯ ಜನತೆ ತಿರಸ್ಕರಿಸಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಮರೆಮಾಚಿ ಧರ್ಮದ ಆಧಾರದಲ್ಲಿ ಜನರನ್ನು ಒಡೆದು ಅಧಿಕಾರಕ್ಕೆ ಬರಲು ಸಂಘ ಪರಿವಾರ ಈ ಸಲ ಆಯ್ಕೆ ಮಾಡಿಕೊಂಡಿದ್ದು ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಕೋಲಾರ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭಾಗಗಳನ್ನು.

ಮೊದಲು ಉತ್ತರ ಕರ್ನಾಟಕದ ಲಿಂಗಾಯತರನ್ನು ದಾರಿ ತಪ್ಪಿಸಲು ಯತ್ನಿಸಿ ವಿಫಲಗೊಂಡ ನಂತರ ಹಳೆಯ ಮೈಸೂರು ಭಾಗದ ಜಿಲ್ಲೆಗಳ ಮೇಲೆ ಕಣ್ಣು ಹಾಕಿದ ಅಮಿತ್ ಶಾ ಸಂಘದ ಕಾರ್ಯಕರ್ತರ ಮೂಲಕ ಐದಾರು ವರ್ಷಗಳ ಹಿಂದೆಯೇ ಕಾರ್ಯಾಚರಣೆ ಆರಂಭಿಸಿದರು. ಈ ಕಾರ್ಯತಂತ್ರದ ಭಾಗವಾಗಿ ಟಿಪ್ಪು ಸುಲ್ತಾನ್ ಇತಿಹಾಸವನ್ನು ಕೆದಕಿ ಉರಿಗೌಡ ಮತ್ತು ನಂಜೇಗೌಡ ಎಂಬ ಸುಳ್ಳು ಪಾತ್ರಗಳನ್ನು ಸೃಷ್ಟಿಸಿ ವಿಭಜನೆಯ ವಿಷ ಬೀಜ ಬಿತ್ತಲು ಯತ್ನಿಸಿದರು. ಆದರೆ ಅದಕ್ಕೆ ಮಂಡ್ಯದ ಒಕ್ಕಲಿಗ ಸಮುದಾಯದ ಶಾಂತಿ ಪ್ರಿಯ ಜನ ಮತ್ತು ವಿಶೇಷವಾಗಿ ಆದಿ ಚುಂಚನಗಿರಿ ಮಠದ ಸ್ವಾಮಿಗಳು ಅವಕಾಶ ನೀಡಲಿಲ್ಲ. ಚುನಾವಣೆಯಲ್ಲಿ ಮತ ಬಾಚಿಕೊಳ್ಳಲು ಬಿಜೆಪಿಗೆ ಈ ಕಟ್ಟುಕತೆ ನೆರವಾಗಲಿಲ್ಲ.

ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಅಲ್ಪಸಂಖ್ಯಾತರ ಅದರಲ್ಲೂ ವಿಶೇಷವಾಗಿ ಮುಸಲ್ಮಾನರ ವಿರುದ್ಧ ಯಾವ ಪರಿ ದ್ವೇಷದ ವಾತಾವರಣ ನಿರ್ಮಿಸಲು ಯತ್ನಿಸಲಾಯಿತೆಂದರೆ ಜಾತ್ರೆಗಳಲ್ಲಿ ಮುಸಲ್ಮಾನರು ವ್ಯಾಪಾರ ಮಾಡುವುದನ್ನು ನಿರ್ಬಂಧಿಸಲಾಯಿತು. ಹಿಜಾಬ್, ಹಲಾಲ್ ಕಟ್, ಅಝಾನ್ ಹೆಸರಿನಲ್ಲಿ ಜನಸಾಮಾನ್ಯರ ನಡುವೆ ದ್ವೇಷದ ದಳ್ಳುರಿ ಎಬ್ಬಿಸಲು ಯತ್ನಿಸಲಾಯಿತು. ಮುಖ್ಯವಾಗಿ ಇದನ್ನು ತಡೆಯಬೇಕಾಗಿದ್ದ ಬಸವರಾಜ ಬೊಮ್ಮಾಯಿಯವರು ‘‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’’ ಎಂದು ಜಾರಿಕೊಂಡರು. ವಾಸ್ತವವಾಗಿ ಜನರನ್ನು ವಿಭಜಿಸುವ ಸಂಘ ಪರಿವಾರದ ಕುತಂತ್ರ ಅದಕ್ಕೆ ತಿರುಗುಬಾಣವಾಯಿತು.

ನೂರು ವರ್ಷಗಳ ಹಿಂದೆಯೇ ಕರ್ನಾಟಕದ ಸಹಬಾಳ್ವೆಯ ಸಂಸ್ಕೃತಿಯನ್ನು ಮಹಾತ್ಮಾ ಗಾಂಧಿ ಶ್ಲಾಘಿಸಿದ್ದರು. 1927ರ ಆಗಸ್ಟ್ 28 ರಂದು ಬೆಂಗಳೂರಿಗೆ ಬಂದಿದ್ದ ಗಾಂಧೀಜಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ ‘‘ನಿಮ್ಮ ನೆಲದಲ್ಲಿ ಉತ್ತರ ಭಾರತದಂತೆ ಹಿಂದೂ-ಮುಸ್ಲಿಮ್ ಜಗಳವಿಲ್ಲ. ದ್ವೇಷವಿಲ್ಲ’’ ಎಂದಿದ್ದರು. ಇಂಥ ರಾಜ್ಯದಲ್ಲಿ ಉತ್ತರದ ದ್ವೇಷದ ದಳ್ಳುರಿ ಎಬ್ಬಿಸಲು ಯತ್ನಿಸಿದವರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಇಡೀ ಕರ್ನಾಟಕ ಶಾಂತಿ,ಸೌಹಾರ್ದದ ಪರವಾಗಿ ನಿಂತಿದೆ.

ಕರ್ನಾಟಕದ ಶತಮಾನಗಳ ಕಾಲದ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ ಜನತೆ ನೀಡಿದ ಈ ತೀರ್ಪು ಅನಿರೀಕ್ಷಿತವೆನಿಸುವುದಿಲ್ಲ.ಇಲ್ಲಿ ಜನಾಂಗ ದ್ವೇಷ, ಕೋಮುವಾದ ಎಂದೂ ಮೇಲುಗೈ ಸಾಧಿಸಿಲ್ಲ.ಸ್ವಾತಂತ್ರ್ಯೋತ್ತರ ಭಾರತದಲ್ಲೂ ಇಲ್ಲಿ ಅಧಿಕಾರಕ್ಕೆ ಬಂದದ್ದು ಸಾಮಾಜಿಕ ನ್ಯಾಯದ, ಸಮಾನತೆಯ ಆಶಯಗಳಲ್ಲಿ ನಂಬಿಕೆ ಹೊಂದಿದ ಪಕ್ಷಗಳು. ಕೋಮುವಾದ ಸಿದ್ಧಾಂತವನ್ನು ಪ್ರತಿಪಾದಿಸುವ ಯಡಿಯೂರಪ್ಪನವರಂಥ ಮುಖವಾಡ ಹಾಕಿಕೊಂಡು ಜನರ ಬಳಿ ಹೋದಾಗಲೂ ಜನರು ಆ ಪಕ್ಷಕ್ಕೆ ಎಂದೂ ನಿಚ್ಚಳ ಬಹುಮತವನ್ನು ನೀಡಿಲ್ಲ. ಅಂತಲೇ ಆಪರೇಶನ್ ಕಮಲದ ಕುತಂತ್ರದಿಂದ ಅದು ಅಧಿಕಾರಕ್ಕೆ ಬಂದು ಅಧಿಕಾರ ಕಳೆದುಕೊಂಡಿದೆ.

ಕರ್ನಾಟಕದ ಸಾಮಾಜಿಕ ಜೀವನದಲ್ಲಿ ಬಸವಣ್ಣ, ಮಹಾತ್ಮಾ ಗಾಂಧಿ, ಕಾರ್ಲ್‌ಮಾರ್ಕ್ಸ್, ಡಾ.ಅಂಬೇಡ್ಕರ್, ರಾಮ ಮನೋಹರ ಲೋಹಿಯಾ, ಜವಾಹರಲಾಲ್ ನೆಹರೂ ಅವರಂಥ ಜೀವಪರ ಕಾಳಜಿಯ ಉದಾರವಾದಿ, ಪುರೋಗಾಮಿ ವಿಚಾರಧಾರೆ ಹಾಗೂ ಆಶಯಗಳು ಆಳವಾಗಿ ಬೇರು ಬಿಟ್ಟಿವೆ. ಅಂತಲೇ ಸಾವರ್ಕರ್, ಗೋಳ್ವಾಲ್ಕರ್, ಹೆಡ್ಗೆವಾರ್, ಭಾಗವತರ ಜನ ವಿಭಜಕ ಸಿದ್ಧಾಂತಗಳಿಗೆ ಕನ್ನಡಿಗರು ಮಾರುಹೋಗಲಿಲ್ಲ.

ಸ್ವಾತಂತ್ರ್ಯಾ ನಂತರದ ಕರ್ನಾಟಕ ರಾಜಕೀಯದ ಆರಂಭದ ದಿನಗಳಲ್ಲಿ ಬಸವಾನುಯಾಯಿ ನಿಜಲಿಂಗಪ್ಪ, ಬಿ.ಡಿ.ಜತ್ತಿ, ರಾಮ ಮನೋಹರ ಲೋಹಿಯಾ ಅನುಯಾಯಿಗಳಾದ ಶಾಂತವೇರಿ ಗೋಪಾಲಗೌಡರು, ಕೆ.ಎಚ್.ರಂಗನಾಥ, ಜೆ.ಎಚ್.ಪಟೇಲ್, ಬಂಗಾರಪ್ಪ ಹಾಗೂ ಭಾರತದ ಮೊದಲ ಮಾರ್ಕ್ಸ್‌ವಾದಿಯಾದ ಮಾನವೇಂದ್ರನಾಥ ರಾಯ್ ( ಎಂ.ಎನ್.ರಾಯ್) ಅವರ ಅನುಯಾಯಿ ಎಸ್.ಆರ್.ಬೊಮ್ಮಾಯಿ ಹಾಗೂ ಮಾರ್ಕ್ಸ್‌ವಾದಿ ಸಿದ್ಧಾಂತದ ಬದ್ಧತೆ ಇದ್ದ ದೇವರಾಜ ಅರಸು ಹಾಗೂ ಅಂಬೇಡ್ಕರ್‌ವಾದಿ ಬಿ.ಬಸವಲಿಂಗಪ್ಪ ಇವರೆಲ್ಲರೂ ಬಂದದ್ದು ಜೀವಪರ, ಜನಪರ ಕಾಳಜಿಯ ವಿಚಾರ ಶಾಲೆಯಿಂದ. ದೇವೇಗೌಡರು ಕೂಡ ಸಹಬಾಳ್ವೆಯ ಬದುಕಿನ ಒಲವು ಹೊಂದಿದವರು. ಹೀಗಾಗಿ ಜನತೆ ಸರಿಯಾದ ತೀರ್ಪು ನೀಡಿದರು.

ಇಂಥ ಸೌಹಾರ್ದದ ನೆಲದಲ್ಲೂ ದಳ್ಳುರಿ ಎಬ್ಬಿಸಲು ಕೋಮುವಾದಿ ಗಳು ನಾನಾ ಮಸಲತ್ತು ನಡೆಸಿದರು. ಅವರ ಕುತಂತ್ರಕ್ಕೆ ಒಂದು ಉದಾಹರಣೆ ಕಲಬುರಗಿ ಜಿಲ್ಲೆಯ ಆಳಂದ. ಸೌಹಾರ್ದಕ್ಕೆ ಹೆಸರಾದ ಈ ಆಳಂದದಲ್ಲಿ ಕಳೆದ ಸಲ ಬಿಜೆಪಿಯ ಸುಭಾಷ್‌ಗುತ್ತೇದಾರ ಶಾಸಕರಾಗಿದ್ದರು. ಇಲ್ಲಿ ಚುನಾವಣೆ ಉದ್ದೇಶದಿಂದ ಆರೆಸ್ಸೆಸ್ ಲಾಡ್ಲೆ ಮಶಾಕ್ ದರ್ಗಾ ವಿವಾದವನ್ನು ಹುಟ್ಟು ಹಾಕಿತು. ದರ್ಗಾ ಆವರಣದಲ್ಲಿ ಶಿವಲಿಂಗ ಇದೆ ಎಂದು ಉರೂಸಿನ ದಿನವೇ ಅಲ್ಲಿ ಪೂಜೆ ಮಾಡಲು ಹೋಗಿ ಕೋಮು ಕಲಹದ ವಾತಾವರಣ ಉಂಟಾಗಿತ್ತು. ಕೇಂದ್ರ ಸಚಿವರಾದ ಭಗವಂತ ಖೂಬಾ, ಬಿಜೆಪಿ ಶಾಸಕ ರಾದ ರಾಜಕುಮಾರ್ ತೆಲ್ಕೂರ ಮುಂತಾದವರು ತಮ್ಮ ಸಂವಿಧಾನದ ಸ್ಥಾನಮಾನದ ಘನತೆಯನ್ನು ಮರೆತು ಆಳಂದಕ್ಕೆ ಬಂದು ಗಲಭೆಗೆ ಪ್ರಚೋದಿಸಿದರು. ಇದರಿಂದ ಹಿಂದೂ-ಮುಸ್ಲಿಮ್ ವಿಭಜನೆ ಆಗಲಿಲ್ಲ. ಬದಲಿಗೆ ಹಿಂದೂಗಳು ಬಿಜೆಪಿ ವಿರುದ್ಧ ತಿರುಗಿ ಬಿದ್ದರು. ಯಾಕೆಂದರೆ ಈ ದರ್ಗಾ ಹಿಂದೂಗಳ ಭಕ್ತಿಯ ತಾಣವೂ ಹೌದು. ಇಲ್ಲಿ ಹಿಂದೆ ಸುಭಾಷ್ ಗುತ್ತೆದಾರ ಚುನಾಯಿತರಾಗಿದ್ದು ಕೋಮು ವಿಭಜನೆಯಿಂದಲ್ಲ, ಬದಲಾಗಿ ಅಭಿವೃದ್ಧಿ ಕಾರ್ಯಗಳಿಂದಾಗಿ. ಈ ಸಲ ಆರೆಸ್ಸೆಸ್ ನಾಯಕರ ಮಾತು ಕೇಳಿ ರಾಜಕಾರಣದಲ್ಲಿ ಧರ್ಮವನ್ನು ತರಲು ಹೋಗಿ ಜನರಿಂದ ತಿರಸ್ಕರಿಸಲ್ಪಟ್ಟರು.ಕಾಂಗ್ರೆಸ್‌ನ ಸಮಾಜವಾದಿ ನಾಯಕ ಬಿ.ಆರ್.ಪಾಟೀಲ್ ಇವರನ್ನು ಸೋಲಿಸಿ ಆರಿಸಿ ಬಂದರು.

ಈ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ನಾಗಪುರದಿಂದ ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತರು ಸ್ವತಃ ಕಲಬುರಗಿಗೆ ಬಂದು ಬೈಠಕ್ ನಡೆಸಿದರು. ಅವರು ಬಂದು ಹೋದ ನಂತರವೇ ಆಳಂದ ದರ್ಗಾ ವಿವಾದ ಭುಗಿಲೆದ್ದಿತು. ಆದರೆ ಆಳಂದ ಸೇರಿದಂತೆ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳು ಧರ್ಮ ನಿರಪೇಕ್ಷತೆಗೆ  ಹೆಸರಾಗಿವೆ. ಉತ್ತರ ಭಾರತದ ಕೋಮು ವಿಭಜನೆಯ ಅಸ್ತ್ರವನ್ನು ಇಲ್ಲಿ ಪ್ರಯೋಗಿಸಲು ಹೋದ ಸಂಘ ಪರಿವಾರ ಇಂಗು ತಿಂದ ಮಂಗ ನಂತಾಯಿತು.

ಈ ಬಾರಿ ಕಲ್ಯಾಣ ಕರ್ನಾಟಕವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದ ಬಿಜೆಪಿ ಉತ್ತರ ಪ್ರದೇಶದ ಗಲಭೆಕೋರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೋಮು ಪ್ರಚೋದಕ ಭಾಷಣಗಳಿಗೆ ಹೆಸರಾದ ಆಂದೋಲಾದ ಸಿದ್ಧಲಿಂಗ ಸ್ವಾಮಿ ಮುಂತಾದವರನ್ನು ಬಳಸಿಕೊಂಡಿತಾದರೂ ಇದೇ ಬಿಜೆಪಿಗೆ ತಿರುಗುಬಾಣವಾಗಿ ಜನರಿಂದ ತಿರಸ್ಕರಿಸಲ್ಪಟ್ಟಿತು.

ಕಲ್ಯಾಣ ಕರ್ನಾಟಕ ಎಂದು ಇತ್ತೀಚೆಗೆ ಕರೆಯಲ್ಪಡುವ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಯಿಂದ ಹಿಂದುಳಿದಿದೆ. ಈ ಭಾಗದ ಅಭಿವೃದ್ಧಿಗೆ ಸಂವಿಧಾನದ 370 ವಿಧಿಯನ್ವಯ ವಿಶೇಷ ಸ್ಥಾನಮಾನ ನೀಡುವಂತೆ ಮಾಡಿದವರು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು. ಆದರೆ ಬಿಜೆಪಿ ನಾಯಕರು ಅಭಿವೃದ್ಧಿಯ ವಿಷಯ ಬಿಟ್ಟು ಅಳಂದ ದರ್ಗಾ ವಿವಾದವನ್ನು ಕೆರಳಿಸಿ ಹಿಂದುತ್ವದ ಆಧಾರದಲ್ಲಿ ಮತಯಾಚನೆ ಮಾಡಲು ಹೋಗಿ ಅವರ ಲೆಕ್ಕಾಚಾರ ಬುಡಮೇಲಾಯಿತು.

ಲೋಹಿಯಾವಾದಿ ಬಿ.ಆರ್.ಪಾಟೀಲ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಹಿಂದೂ ವಿರೋಧಿ ಗಳೆಂದು ಬಿಂಬಿಸಲು ಹರ ಸಾಹಸ ಪಟ್ಟ ಬಿಜೆಪಿಯನ್ನು ಹಿಂದೂಗಳೇ ತಿರಸ್ಕರಿಸಿದರು.

ಸಂಘ ಪರಿವಾರದ ಕೋಮುವಾದಿ ಕುತಂತ್ರ ವಿಫಲಗೊಂಡ ಇನ್ನೊಂದು ಮತಕ್ಷೇತ್ರ ಚಿಕ್ಕಮಗಳೂರು ಬಾಬಾ ಬುಡಾನಗಿರಿ ವಿವಾದವನ್ನು ಕೆರಳಿಸಿ ದತ್ತ ಮಾಲೆಯ ನಕಲಿ ನಾಟಕ ಮಾಡಿದ ಸಿ.ಟಿ. ರವಿಯ ಕೋಮು ವಿಭಜಕ ರಾಜ ಕಾರಣವನ್ನು ಚಿಕ್ಕಮಗಳೂರಿನ ಜನ ಈ ಸಲ ತಿರಸ್ಕರಿಸಿದರು. ಚಿಕ್ಕಮಗಳೂರು ಮಾತ್ರವಲ್ಲ ಮಲೆನಾಡಿನ ಜನತೆ ಗೋಡ್ಸೆವಾದಿಗಳಿಗೆ ತಕ್ಕ ಪಾಠಕಲಿಸಿದರು. ಅಚ್ಚರಿಯೆಂದರೆ ಕಳೆದ ಐವತ್ತು ವರ್ಷಗಳಿಂದ ಸಂಘ ಪರಿವಾರದ ಕೋಟೆಯಾಗಿದ್ದ ಕೊಡಗಿನ ಜನ ಈ ಸಲ ಬಿಜೆಪಿಯನ್ನು ತಿರಸ್ಕರಿಸಿದರು.

ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧದ ಅಂಶವನ್ನು ಸೇರಿಸಿದಾಗ ಕೋಮುವಾದಿ ಮಾಧ್ಯಮಗಳು ಎಷ್ಟೊಂದು ಕೋಲಾಹಲ ಎಬ್ಬಿಸಿದವೆಂದರೆ ಕಾಂಗ್ರೆಸ್‌ಗರೇ ಎಲ್ಲಿ ತಪ್ಪಾಯಿತೋ ಎಂದು ಹೆದರಿ ವೀರಪ್ಪ ಮೊಯ್ಲಿಯವರು ಸ್ಪಷ್ಟೀಕರಣ ನೀಡಿದರು. ಆದರೆ ಚುನಾವಣೆ ಫಲಿತಾಂಶ ಬಂದ ನಂತರ ಅಚ್ಚರಿ ಕಾದಿತ್ತು. ಬಜರಂಗದಳ ಮುಂತಾದ ಕೋಮುವಾದಿ ಸಂಘಟನೆಗಳ ಪುಂಡಾಟಿಕೆಯಿಂದ ರೋಸಿ ಹೋದ ಮುಸಲ್ಮಾನರು ಮಾತ್ರವಲ್ಲ ಹಿಂದೂಗಳು ಕೂಡ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ.

ಬಿಜೆಪಿ ಸೀಟುಗಳನ್ನು ಕಡಿಮೆ ಗೆದ್ದರೂ ಅದು ಶೇ.36ರಷ್ಟು ಮತಗಳನ್ನು ಪಡೆದಿದೆ. ಅದರ ಮೇಲ್ಜಾತಿಯ, ಮೇಲ್ವರ್ಗದ ನೆಲೆ ಪೂರ್ತಿಯಾಗಿ ಕಳೆದು ಹೋಗಿಲ್ಲ. ಆದರೆ ಕಾಂಗ್ರೆಸ್ ಲಿಂಗಾಯತ, ಒಕ್ಕಲಿಗ, ದಲಿತ, ಹಿಂದುಳಿದ, ಮುಸ್ಲಿಮ್ ಹೀಗೆ ಬಹುತೇಕ ಸಮುದಾಯಗಳ ಮತ ಪಡೆದು ರಾಜ್ಯದ ಅಧಿಕಾರ ಸೂತ್ರ ಹಿಡಿದಿದೆ. ಅಧಿಕಾರವನ್ನು ಕಳೆದುಕೊಂಡ ಕೋಮುವಾದಿ ಶಕ್ತಿಗಳು ಸುಮ್ಮನಿರುವುದಿಲ್ಲ. ಆಡಳಿತಾಂಗದಲ್ಲಿ ನುಸುಳಿ ತಮ್ಮ ಅಜೆಂಡಾ ಜಾರಿಗೆ ಯತ್ನಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಚುನಾವಣೆ ಫಲಿತಾಂಶದಿಂದ ಸಂತೃಪ್ತರಾ ಗದೆ ಕೋಮುವಾದದ ಬೇರುಗಳನ್ನು ಕತ್ತರಿಸಲು ಕಾರ್ಯಕ್ರಮ ರೂಪಿಸ ಬೇಕು. ಹಿಂದಿನ ಬಿಜೆಪಿ ಸರಕಾರ ಪಠ್ಯಕ್ರಮದಲ್ಲಿ ತಂದ ಅಪಾಯಕಾರಿ ಬದಲಾವಣೆಗಳನ್ನು ಮರು ಪರಿಷ್ಕಾರಗೊಳಿಸಬೇಕು. ರಾಷ್ಟ್ರೋತ್ಥಾನ ಪರಿಷತ್, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಸಂಘ ಪರಿವಾರದ ಸಂಘಟನೆಗಳಿಗೆ ನೀಡಿರುವ ಸರಕಾರಿ ಗೋಮಾಳ ಭೂಮಿಯನ್ನು ರದ್ದುಗೊಳಿಸಿ ಸರಕಾರ ವಾಪಸ್ ಪಡೆದು ಭೂ ರಹಿತ ದಲಿತರಿಗೆ ಹಂಚಬೇಕು. ಇಷ್ಟೇ ಅಲ್ಲ ಬೆಟ್ಟದಷ್ಟು ಸವಾಲುಗಳು ಎದುರಿಗಿವೆ,ಅವುಗಳನ್ನು ಎದುರಿಸಿ ದಿಟ್ಟವಾಗಿ ನಿಲ್ಲಿ. ಗೆಲುವು ನಿಮ್ಮ ಜೊತಗಿದೆ.

Similar News