×
Ad

ನಮ್ಮ ಯೋಧರ ಮೃತದೇಹಗಳ ಮೇಲೆ 2019 ರ ಲೋಕಸಭಾ ಚುನಾವಣೆ ನಡೆದಿದೆ: ಸತ್ಯಪಾಲ್‌ ಮಲಿಕ್‌

''ಘಟನೆಯ ಬಗ್ಗೆ ತನಿಖೆ ನಡೆದಿದ್ದರೆ ರಾಜನಾಥ್‌ ಸಿಂಗ್‌ ರಾಜಿನಾಮೆ ನೀಡಬೇಕಿತ್ತು''

Update: 2023-05-22 20:09 IST

ಹೊಸದಿಲ್ಲಿ: ಪುಲ್ವಾಮಾ ದಾಳಿಗೆ ಕೇಂದ್ರ ಸರ್ಕಾರದ ವೈಫಲ್ಯ ಕಾರಣ ಎಂದು ಆರೋಪಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಸೋಮವಾರ ಪುಲ್ವಾಮಾ ದಾಳಿಯ ವಿಷಯದ ಬಗ್ಗೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 2019 ರ ಲೋಕಸಭೆಯ ಚುನಾವಣೆಯು "ನಮ್ಮ ಸೈನಿಕರ ಮೃತದೇಹಗಳ ಮೇಲೆ ನಡೆದಿವೆ" ಎಂದು ಹೇಳಿದ್ದಾರೆ.

ಘಟನೆ ನಡೆದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿದ್ದೆ,  ಆದರೆ ಅವರು ನನಗೆ ಮೌನವಾಗಿರಲು ಹೇಳಿದರು ಎಂದು ಸತ್ಯಪಾಲ್‌ ನುಡಿದಿದ್ದಾರೆ. ಒಂದು ವೇಳೆ ಘಟನೆಯ ಬಗ್ಗೆ ತನಿಖೆ ನಡೆದಿದ್ದರೆ ಅಂದಿನ ಸಚಿವರು ರಾಜೀನಾಮೆ ನೀಡಬೇಕಿತ್ತು ಎಂದು ಅವರು ಹೇಳಿದ್ದಾರೆ. 

ನಮ್ಮ ಸೈನಿಕರ ದೇಹಗಳ ಮೇಲೆ ಚುನಾವಣೆಗಳು ನಡೆದವು. ಅದರ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಒಂದು ವೇಳೆ ತನಿಖೆ ನಡೆದಿದ್ದರೆ ಅಂದಿನ ಗೃಹ ಸಚಿವ ರಾಜನಾಥ್ ಸಿಂಗ್ ರಾಜೀನಾಮೆ ನೀಡಬೇಕಿತ್ತು. ಅನೇಕ ಅಧಿಕಾರಿಗಳು ಜೈಲು ಪಾಲಾಗುತ್ತಿದ್ದರು ಮತ್ತು ದೊಡ್ಡ ವಿವಾದಕ್ಕೆ ಕಾರಣವಾಗುತ್ತಿತ್ತು ಎಂದು ಅಲ್ವಾರ್ ಜಿಲ್ಲೆಯ ಬನ್ಸೂರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಲಿಕ್ ಹೇಳಿದ್ದಾರೆ.

ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಾಜ್ಯವನ್ನು ವಿಭಜಿಸುವ ಮುನ್ನ ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಆಗಿದ್ದರು.

ಪುಲ್ವಾಮಾ ದಾಳಿಯ ದಿನವಾದ ಫೆಬ್ರವರಿ 14, 2019 ರಂದು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಅವರು ಚಿತ್ರೀಕರಣದಲ್ಲಿ ತೊಡಗಿದ್ದರು. ಅವರು ಅಲ್ಲಿಂದ ಹೊರಗೆ ಬಂದ ಮೇಲೆ ಅವರಿಂದ ನನಗೆ ಕರೆ ಬಂತು. ನಮ್ಮ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಅವರು ನಮ್ಮ ತಪ್ಪಿನಿಂದ ಕೊಲ್ಲಲ್ಪಟ್ಟರು ಎಂದು ನಾನು ಅವರಿಗೆ ಹೇಳಿದೆ. ಅವರು ನನಗೆ ಸುಮ್ಮನಿರಲು ಹೇಳಿರುವುದಾಗಿ ಮಲಿಕ್ ಹೇಳಿದ್ದಾರೆ.

Similar News