ಮೇ 25ಕ್ಕೆ ಎಂಜಿಎಂ ಮುದ್ದಣ ಸಾಹಿತ್ಯೋತ್ಸವ: ಇನಾಂದಾರ್ ವಿಮರ್ಶಾ ಪ್ರಶಸ್ತಿ ಪ್ರದಾನ
ಉಡುಪಿ, ಮೇ 22: ನಗರದ ಎಂಜಿಎಂ ಕಾಲೇಜಿನಲ್ಲಿ ನಡೆಯುವ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವ ಮೇ 25ರ ಗುರುವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ 2020ನೇ ಸಾಲಿನಿಂದ 2022ರ ಸಾಲಿನವರೆಗೆ ಮೂರು ವರ್ಷಗಳ ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
2020ನೇ ಸಾಲಿನ ಪ್ರಶಸ್ತಿಯನ್ನು ಬೆಂಗಳೂರಿನ ಕೆ.ಸತ್ಯನಾರಾಯಣ ಇವರ ‘ಚಿನ್ನಮ್ಮನ ಲಗ್ನ 1893’ ಕೃತಿಗೆ, 2021ನೇ ಸಾಲಿನ ಪ್ರಶಸ್ತಿಯನ್ನು ಚಿತ್ರದುರ್ಗದ ಆರ್.ತಾರಿಣಿ ಶುಭದಾಯಿನಿ ಇವರ ‘ಅಂಗುಲ ಹುಳುವಿನ ಇಂಚು ಪಟ್ಟಿ’ ಕೃತಿಗೆ ಹಾಗೂ 2022ನೇ ಸಾಲಿನ ಪ್ರಶಸ್ತಿಯನ್ನು ಮೈಸೂರಿನ ಡಿ.ಎ.ಶಂಕರ್ ಇವರ ‘ವಾಗಾರ್ಥ’ ವಿಮರ್ಶಾ ಕೃತಿಗೂ ನೀಡಿ ಗೌರವಿಸಲಾಗುವುದು.
ಹಿರಿಯ ಲೇಖಕ ಹಾಗೂ ಸಂಸ್ಕೃತಿ ವಿಮರ್ಶಕ ಡಾ.ಬಿ.ಭಾಸ್ಕರ ರಾವ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಬಿ.ಜಗದೀಶ ಶೆಟ್ಟಿ ಉಪಸ್ಥಿತರಿರುವರು.
ಮೇ 26ರ ಶುಕ್ರವಾರ ಬೆಳಗ್ಗೆ 9:30ಕ್ಕೆ ತುಳು ಐಸಿರಿ ಕಾರ್ಯಕ್ರಮ ತುಳುಕೂಟದ ಸಹಯೋಗದೊಂದಿಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪತ್ರಕರ್ತ ವಾಲ್ಟರ್ ನಂದಳಿಕೆ ಭಾಗವಹಿಸುವರು. ಕಂಬಳ ನಿರ್ವಹಣೆ ಮತ್ತು ಸಂರಕ್ಷಣೆ ತರಬೇತಿ ಅಕಾಡೆಮಿಯ ಸಂಚಾಲಕ ಕೆ.ಗುಣಪಾಲ ಕಡಂಬ ಹಾಗೂ ತುಳುಕೂಟ ಉಡುಪಿ ಇದರ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.