ಅದಾನಿ ಪವರ್ ಎರಡು ಪ್ರಕರಣಗಳಲ್ಲಿ ಕಂಪನಿಗಳ ಕಾಯ್ದೆಯನ್ನು ಉಲ್ಲಂಘಿಸಿದೆ: ಆರ್‌ಒಸಿ ತೀರ್ಪು
ಹೊಸದಿಲ್ಲಿ,ಮೇ 22: ಗೌತಮ ಅದಾನಿ ನೇತೃತ್ವದ ಅದಾನಿ ಪವರ್ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಂಪನಿಗಳ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ರಿಜಿಸ್ಟ್ರಾರ್ ಆಫ್ ಕಂಪನೀಸ್ (ಆರ್‌ಒಸಿ)ನ ಗುಜರಾತ್ ಕಚೇರಿಯು ತೀರ್ಪು ನೀಡಿದೆ.
ಮೊದಲ ಪ್ರಕರಣದಲ್ಲಿ 2017-18,2018-19 ಮತ್ತು 2019-20 ಈ ಮೂರು ಹಣಕಾಸು ವರ್ಷಗಳಲ್ಲಿ ಸಂಬಂಧಿತ-ಪಾರ್ಟಿ ವಹಿವಾಟುಗಳನ್ನು ಬಹಿರಂಗಗೊಳಿಸದೆ ಕಂಪನಿಯು ತಪ್ಪೆಸಗಿದೆ ಎಂದು ಘೋಷಿಸಿರುವ ಆರ್‌ಒಸಿ, ಅಧ್ಯಕ್ಷ ಗೌತಮ್ ಅದಾನಿ ಸೇರಿದಂತೆ ಕಂಪನಿಯ ಮೂವರು ಕಾರ್ಯನಿರ್ವಹಣಾಧಿಕಾರಿಗಳಿಗೆ ತಲಾ 75,000 ರೂ.ಗಳ ದಂಡವನ್ನು ವಿಧಿಸಿದೆ. ಇನ್ನೊಂದು ಪ್ರಕರಣದಲ್ಲಿ ಅದಾನಿ ಪವರ್ 2014-15 ಮತ್ತು 2016-17ನೇ ಹಣಕಾಸು ವರ್ಷಗಳಿಗೆ ವಾರ್ಷಿಕ ರಿಟರ್ನ್‌ಗಳನ್ನು ಸಲ್ಲಿಕೆಯನ್ನು ವಿಳಂಬಿಸುವ ಮೂಲಕ ತಪ್ಪಿತಸ್ಥನಾಗಿದೆ ಎಂದು ಎತ್ತಿ ಹಿಡಿದಿರುವ ಆರ್‌ಒಸಿ,ಕಂಪನಿಗೆ ಮತ್ತು ಅದರ ಮೂವರು ಅಧಿಕಾರಿಗಳಿಗೆ ತಲಾ 10,200 ರೂ.ಗಳ ದಂಡವನ್ನು ವಿಧಿಸಿದೆ.
ಆರ್‌ಒಸಿಯ ಗುಜರಾತ್ ಕಚೇರಿಯು ಮೇ 8ರಂದು ಈ ಎರಡೂ ಆದೇಶಗಳನ್ನು ಹೊರಡಿಸಿದ್ದು,ಮೇ 15ರಂದು ಅವುಗಳನ್ನು ಸಾರ್ವಜನಿಕಗೊಳಿಸಲಾಗಿದೆ.