×
Ad

ಮಣಿಪುರ ಹಿಂಸಾಚಾರ: ಇಂಟರ್ನೆಟ್ ನಿಷೇಧ ಮೇ 26ರವರೆಗೆ ವಿಸ್ತರಣೆ 4,700ಕ್ಕೂ ಅಧಿಕ ಮಕ್ಕಳ ಸ್ಥಳಾಂತರ

Update: 2023-05-22 21:37 IST

ಇಂಫಾಲ್,ಮೇ 22: ಹಿಂಸಾಗ್ರಸ್ತ ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಮೇ 26ರವರೆಗೆ ವಿಸ್ತರಿಸಲಾಗಿದೆ. ಅಗ್ನಿಸ್ಪರ್ಶ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಣಿಪುರ ಆಯುಕ್ತ (ಗೃಹ) ಎಚ್.ಜ್ಞಾನಪ್ರಕಾಶ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಮೈತೆಯಿ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ವಿರೋಧಿಸಿ ಮೇ 3ರಂದು ಮಣಿಪುರ ಸರ್ವ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯ ಬಳಿಕ ಹಿಂಸಾಚಾರ ಭುಗಿಲೆದ್ದಾಗ ಮೊದಲ ಬಾರಿಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಪ್ರತಿಭಟನಾಕಾರರಲ್ಲಿ ಮಣಿಪುರದ ದೊಡ್ಡ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಕುಕಿಗಳು ಸೇರಿದ್ದು,ರಾಜ್ಯ ಸರಕಾರ ಮತ್ತು ವಿಶೇಷವಾಗಿ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಸಿಂಗ್ ಮೈತೆಯಿ ‘ಬಹುಸಂಖ್ಯಾಕ ’ಭಾವನೆಗಳನ್ನು ಪೋಷಿಸುತ್ತಿದ್ದಾರೆ ಎಂದು ಕುಕಿಗಳು ಆರೋಪಿಸಿದ್ದಾರೆ. ಹಿಂಸಾಚಾರಗಳಲ್ಲಿ ಕನಿಷ್ಠ 73 ಜನರು ಮೃತಪಟ್ಟಿದ್ದು,35,000ಕ್ಕೂ ಹೆಚ್ಚಿನ ಜನರು ನಿರ್ವಸಿತರಾಗಿದ್ದಾರೆ. ಈ ಪೈಕಿ ಸುಮಾರು 4,747 ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಸ್ಥಾಪಿಸಲಾಗಿರುವ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಶಿಕ್ಷಣ ಸಚಿವ ಟಿ.ಬಸಂತ ಸಿಂಗ್ ತಿಳಿಸಿದ್ದಾರೆ.

ರಾಜ್ಯದಲ್ಲಿಯ ಅಶಾಂತಿಯು ವ್ಯಾಪಕ ಹಾನಿಗೆ ಕಾರಣವಾಗಿದೆ. ಚರ್ಚ್ಗಳು ಮತ್ತು ದೇವಸ್ಥಾನಗಳು ಸೇರಿದಂತೆ 1,700ಕ್ಕೂ ಅಧಿಕ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ.

ಮೈತೆಯಿ ಸಮುದಾಯದ ಬೇಡಿಕೆಯೊಂದಿಗೆ ಅರಣ್ಯ ಭೂಮಿಗಳಲ್ಲಿ ಅತಿಕ್ರಮಣ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಅಫೀಮು ಕೃಷಿ ವಿರುದ್ಧ ರಾಜ್ಯದ ಬಿಜೆಪಿ ಸರಕಾರದ ಕಾರ್ಯಾಚರಣೆಯೂ ಹಿಂಸಾಚಾರಕ್ಕೆ ಪ್ರಮುಖ ಕಾರಣಗಳಾಗಿವೆ.

ಹಿಂಸಾಚಾರಕ್ಕೆ ಅಂತ್ಯ ಹಾಡುವ ಸಮಯವು ಬಂದಿದೆ ಎಂದು ರವಿವಾರ ಹೇಳಿದ ಎನ್.ಬೀರೇನ್ ಸಿಂಗ್ ಅವರು,ರಾಜ್ಯದಲ್ಲಿ ಸಹಜ ಪರಿಸ್ಥಿತಿ ಮರಳಿಸಲು ಸಹಕರಿಸುವಂತೆ ಜನರನ್ನು ಕೋರಿಕೊಂಡಿದ್ದಾರೆ. ಸರಕಾರವನ್ನು ದೂಷಿಸಿ,ಸಮುದಾಯಗಳನ್ನಲ್ಲ ಎಂದು ಅವರು ಆಗ್ರಹಿಸಿದ್ದಾರೆ.

Similar News