ವಿಟ್ಲ: ಬಜರಂಗದಳ, ಬಿಜೆಪಿ - ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಜಗಳ; ಇಬ್ಬರಿಗೆ ಗಾಯ

ತಲವಾರ್ ದಾಳಿ ನಡೆದಿಲ್ಲ: ಎಸ್ಪಿ ಸ್ಪಷ್ಟನೆ

Update: 2023-05-24 13:47 GMT

ವಿಟ್ಲ:  ಬಜರಂಗದಳ, ಬಿಜೆಪಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಜಗಳ ನಡೆದ ಘಟನೆ ಮಾಣಿಯಲ್ಲಿ ನಡೆದಿದೆ.

ಘಟನೆಯಲ್ಲಿ ಪೆರಾಜೆ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಗಾಯಗೊಂಡಿದ್ದು, ಇಬ್ಬರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚುನಾವಣಾ ಫಲಿತಾಂಶದ ದಿನ ಬಂಟ್ವಾಳ ಶಾಸಕರ ಗೆಲುವಿನ ಹರ್ಷ ಆಚರಣೆ ವೇಳೆ ಪಟಾಕಿ ಸಿಡಿಸಿ ಸಂಭ್ರಮ ಮಾಡುವ ವೇಳೆ ಇದೇ ತಂಡಗಳ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತ ಮಹಾಲಿಂಗ ನಾಯ್ಕ ಅವರಿಗೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 

ಈ ಘಟನೆ ಬಗ್ಗೆ ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರ್ ದಾಳಿ ನಡೆಸಲಾಗಿದೆ ಎಂಬ ಸಂದೇಶ ಹರಿದಾಡುತ್ತಿದ್ದು, ಈ ಬಗ್ಗೆ ದ.ಕ ಎಸ್ಪಿ ಸ್ಪಷ್ಟನೆ ನೀಡಿ, "ಮಾಣಿಯಲ್ಲಿ ನಡೆದ ಪ್ರಕರಣದಲ್ಲಿ ತಲವಾರ್ ನಿಂದ ಹಲ್ಲೆ ನಡೆಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಸದರಿ ಗಲಾಟೆಯಲ್ಲಿ ಕಟ್ಟಿಗೆಯಿಂದ ಹಲ್ಲೆ ನಡೆಸಿರುವುದಾಗಿದೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ಮಾಹಿತಿ ನೀಡಲಾಗುವುದು" ಎಂದು ತಿಳಿಸಿದ್ದಾರೆ.

Similar News