ಇಮ್ರಾನ್ ಪಕ್ಷದ ಮುಖಂಡ ಖುರೇಶಿ ಮರುಬಂಧನ

Update: 2023-05-24 17:57 GMT

ಇಸ್ಲಮಾಬಾದ್, ಮೇ 24: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಉಪಾಧ್ಯಕ್ಷ ಶಾ ಮಸೂದ್ ಖುರೇಶಿಯನ್ನು ರಾವಲ್ಪಿಂಡಿಯ ಜೈಲಿನಿಂದ ಬಿಡುಗಡೆಗೊಳಿಸಿದ ಮರುಕ್ಷಣವೇ ಮತ್ತೆ ಬಂಧಿಸಲಾಗಿದೆ ಎಂದು `ಜಿಯೊ ನ್ಯೂಸ್' ವರದಿ ಮಾಡಿದೆ.
ಪಕ್ಷದ ಮತ್ತೊಬ್ಬ ಮುಖಂಡ ಮುಸರತ್ ಜಮ್ಷೇಡ್ ಚೀಮಾರನ್ನೂ ಜೈಲಿನಿಂದ ಬಿಡುಗಡೆಗೊಳಿಸಿದ ನಂತರ ಮತ್ತೆ ಬಂಧಿಸಲಾಗಿದೆ. 

ಇದಕ್ಕೂ ಮುನ್ನ ಖುರೇಷಿ `ತಾನು ಚಳವಳಿಯಿಂದ ದೂರ ಇರುತ್ತೇನೆ ಮತ್ತು ಕಾರ್ಯಕರ್ತರನ್ನು ಪ್ರಚೋದಿಸುವುದಿಲ್ಲ' ಎಂದು ಇಸ್ಲಮಾಬಾದ್ ಹೈಕೋರ್ಟ್ಗೆ ಮುಚ್ಚಳಿಕೆ ಬರೆದುಕೊಟ್ಟ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಬಿಡುಗಡೆಗೊಂಡ ಬಳಿಕ ಜೈಲಿನ ಹೊರಗೆ ಸುದ್ಧಿಗಾರರ ಜತೆ ಮಾತನಾಡಿದ ಖುರೇಶಿ, ತಾನೀಗಲೂ ಪಿಟಿಐಯ ಭಾಗವಾಗಿದ್ದೇನೆ ಮತ್ತು ಪಿಟಿಐ ಪಕ್ಷದಲ್ಲಿಯೇ ಇದ್ದೇನೆ ಎಂದು ಹೇಳಿದ್ದರು. 

ಆಗ ಅವರನ್ನು ಮತ್ತೆ ವಶಕ್ಕೆ ಪಡೆದ ಪೊಲೀಸರು, ರಹಸ್ಯ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ, ತಾನು ಪಿಟಿಐಗೆ ರಾಜೀನಾಮೆ ನೀಡಿ ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಪಕ್ಷದ ಹಿರಿಯ ಉಪಾಧ್ಯಕ್ಷೆ ಶಿರೀನ್ ಮಝಾರಿ ಘೋಷಿಸಿದ್ದಾರೆ.

Similar News