ಹೊಸ ಸಂಸತ್ ಭವನ ನರಸಿಂಹ ರಾವ್ ಸರ್ಕಾರದ ಕನಸಿನ ಕೂಸು: ಗುಲಾಂ ನಬಿ ಆಝಾದ್

Update: 2023-05-25 04:59 GMT

ಹೊಸದಿಲ್ಲಿ: ಹೊಸ ಸಂಸತ್ ಕಟ್ಟಡವನ್ನು ನಿರ್ಮಿಸುವ ಪ್ರಸ್ತಾವವನ್ನು ಮೊದಲ ಬಾರಿಗೆ ಮುಂದಿಟ್ಟದ್ದು ಪಿ.ವಿ.ನರಸಿಂಹ ರಾವ್ ಸರ್ಕಾರ. ಆದರೆ ಕೆಲವೊಂದು ಕಾರಣಗಳಿಂದ ಅದು ನನೆಗುದಿಗೆ ಬಿದ್ದಿತ್ತು ಎಂದು ಮಾಜಿ ಕಾಂಗ್ರೆಸ್ ಮುಖಂಡ ಹಾಗೂ ಡೆಮಾಕ್ರಟಿಕ್ ಪ್ರೋಗ್ರಸ್ಸಿವ್ ಆಝಾದ್ ಪಾರ್ಟಿ ಮುಖ್ಯಸ್ಥ ಗುಲಾಂ ನಬಿ ಆಝಾದ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆಝಾದ್, ಇದೀಗ ಹೊಸ ಸಂಸತ್ ಕಟ್ಟಡ ನಿರ್ಮಾಣವಾಗಿದೆ. ಇದು ಒಳ್ಳೆಯ ಕಾರ್ಯ.ಭವಿಷ್ಯದಲ್ಲಿ ಒಂದು ವೇಳೆ ಲೋಕಸಭಾ ಸ್ಥಾನಗಳು ಹೆಚ್ಚಿದಲ್ಲಿ ಹೆಚ್ಚು ಮಂದಿ ಸಂಸದರಿಗೆ ಸ್ಥಳಾವಕಾಶ ಕಲ್ಪಿಸಲು ಅವಕಾಶವಾಗುವಂತೆ ಹೊಸ ಹಾಗೂ ದೊಡ್ಡ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ 2026ರವರೆಗೆ ಲೋಕಸಭಾ ಸ್ಥಾನಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇಲ್ಲ. 1952ರಲ್ಲಿ ಮೊದಲ ಚುನಾವಣೆ ನಡೆದ ಬಳಿಕ ಜನಸಂಖ್ಯೆ 5 ಪಟ್ಟು ಏರಿಕೆಯಾಗಿದ್ದು, 2026ರ ಬಳಿಕ ಸ್ಥಾನಗಳ ಸಂಖ್ಯೆಯನ್ನು ಹೊಂದಿಸುವ ಅಗತ್ಯವಿದೆ ಎಂದರು.

ಸಂಸತ್ ಕಟ್ಟಡ ಉದ್ಘಾಟನಾ ಸಮಾರಂಭವನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ, "ನಾನು ಈ ಬಗ್ಗೆ ಏನೂ ಹೇಳುವುದಿಲ್ಲ. ಭಾಗವಹಿಸುವುದು ಅಥವಾ ಬಹಿಷ್ಕರಿಸುವುದು ಸಂಸದರಿಗೆ ಬಿಟ್ಟದ್ದು" ಎಂದು ಕಳೆದ ವರ್ಷ ಕಾಂಗ್ರೆಸ್ ತೊರೆದ ಆಝಾದ್ ಪ್ರತಿಕ್ರಿಯಿಸಿದ್ದಾರೆ.

Similar News