ಅವಕಾಶ ವಂಚಿತ ಸಮುದಾಯಕ್ಕೆ ನ್ಯಾಯ ಸಿಗಲಿ

Update: 2023-05-25 05:55 GMT

ಈಗ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷದ ಸರಕಾರದ ಮೇಲೆ ವಿಶ್ವಾಸವಿಟ್ಟಿರುವ ಅಲ್ಪಸಂಖ್ಯಾತ ಸಮುದಾಯವು ಸಾಕಷ್ಟು ಆಶಾಭಾವನೆ ಇಟ್ಟುಕೊಂಡಿರುವುದು ಸತ್ಯ. ಸರಕಾರ ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು. ಆನಂತರ ಹಿಂದೆ ಸಿದ್ದರಾಮಯ್ಯನವರ ಸರಕಾರ ಇದ್ದಂತಹ ಸಂದರ್ಭದಲ್ಲಿ ಜಾರಿಯಲ್ಲಿರುವ ಎಲ್ಲಾ ಯೋಜನೆಗಳನ್ನು ಯಾವುದೇ ಬದಲಾವಣೆ ಇಲ್ಲದೆ ಮರು ಜಾರಿಗೊಳಿಸಬೇಕು.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಿದೆ. ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಈ ಸರಕಾರ ಬರಲೇಬೇಕೆಂದು ನಾಡಿನ ಪ್ರಜ್ಞಾವಂತ ಜನತೆ ಮುಕ್ತ ಮನಸ್ಸಿನಿಂದ ಮತದಾನ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕಳೆದ ನಾಲ್ಕು ವರ್ಷಗಳಿಂದ ನಿರಂತರ ಶೋಷಣೆಗೆ ಒಳಗಾದಂತಹ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಹಿಂದಿನ ಬಹುತೇಕ ಚುನಾವಣೆಗಿಂತ ಯಾರೂ ನಿರೀಕ್ಷಿಸದಷ್ಟು ಹೆಚ್ಚು ಶೇಕಡಾವಾರು ಮತದಾನ ಮಾಡುವುದರ ಮೂಲಕ ಬಿಜೆಪಿ ಸರಕಾರವನ್ನು ಈ ರಾಜ್ಯದಿಂದ ಕಿತ್ತೆಸೆಯಲು ಪಣ ತೊಟ್ಟವರಂತೆ ಕೆಲಸವನ್ನು ಮಾಡಿದ್ದಾರೆ. ಇತರ ಪಕ್ಷಗಳಲ್ಲಿ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲೇಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿ, ಆಯಾ ಕ್ಷೇತ್ರದ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮುಸ್ಲಿಮ್ ಸಮುದಾಯದ  ಈ ನಡೆಗೆ ಮೂಲ ಕಾರಣ ಹಿಂದಿನ ಸರಕಾರದಿಂದ ಸಮುದಾಯದ ಮೇಲೆ ಆದಂತಹ ಶೋಷಣೆ. ಹಿಂದಿನ ಸರಕಾರದಲ್ಲಿ ಅತೀ ಹೆಚ್ಚು ಅನ್ಯಾಯಕ್ಕೆ ಒಳಗಾಗಿರುವುದು ಮುಸ್ಲಿಮ್ ಸಮುದಾಯವೇ ಆಗಿದ್ದು, ಆದ ಕಾರಣ ಒಗ್ಗಟ್ಟಾಗಿ ಮತ ಚಲಾವಣೆ ಮಾಡಲಾಗಿದೆ.

ಹಿಂದಿನ ಬಿಜೆಪಿ ಸರಕಾರದಲ್ಲಿ ಮುಸ್ಲಿಮ್ ಸಮುದಾಯವನ್ನು ಅತ್ಯಂತ ಕೆಳದರ್ಜೆಯ ಪ್ರಜೆಯನ್ನಾಗಿ ಪರಿಗಣಿಸಿ, ಸರಕಾರದ ಯೋಜನೆಗಳನ್ನು ಸ್ಥಗಿತಗೊಳಿಸಿ, ಸರಕಾರದ ಯೋಜನೆ ಪಡೆಯಲು ಅರ್ಹರಲ್ಲ ಎನ್ನುವ ರೀತಿ ನಡೆದುಕೊಂಡು ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ಎನ್ನುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ವಿಶೇಷವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ. 2019ರಲ್ಲಿ 2,500 ಕೋಟಿ ರೂ. ಇದ್ದಂತಹ ಅನುದಾನವನ್ನು 2023ಕ್ಕೆ 1,100 ಕೋಟಿ ರೂ. ಇಳಿಸುವುದರ ಮೂಲಕ ಆ ಇಲಾಖೆಯ ಎಲ್ಲಾ ಯೋಜನೆಗಳನ್ನು ರದ್ದುಪಡಿಸಿರುವ ಕೀರ್ತಿ ಆ ಸರಕಾರಕ್ಕೆ ಸಲ್ಲುತ್ತದೆ. ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ಜಾರಿಯಲ್ಲಿದ್ದ ಶಾದಿಭಾಗ್ಯ, ಕಾಲನಿ ಅಭಿವೃದ್ಧಿ ಯೋಜನೆ, ವಿದೇಶದಲ್ಲಿ ಉನ್ನತ ವ್ಯಾಸಂಗ, ನಾಗರಿಕ ಪರೀಕ್ಷೆ ತರಬೇತಿ ಯೋಜನೆ ಸ್ಥಗಿತ, ಮೆಟ್ರಿಕ್ ಪೂರ್ವ, ಮೆಟ್ರಿಕ್ನಂತರ, ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿವೇತನ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ನೀಡದೇ ಇರುವುದು, ಶುಲ್ಕ ವಿನಾಯಿತಿ, ವಿದ್ಯಾಸಿರಿ ಯೋಜನೆಗಳ ಅನುದಾನ ಕಡಿತ, ಉರ್ದು ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆ, ಮುಖ್ಯಮಂತ್ರಿಗಳ 12 ಅಂಶಗಳ ಕಾರ್ಯಕ್ರಮ ಯೋಜನೆ, ಮೌಲಾನಾ ಆಝಾದ್ ಇಂಗ್ಲಿಷ್ ಮಾಧ್ಯಮ ಶಾಲೆ ಮಂಜೂರಾತಿ, ವಸತಿ ನಿಲಯಗಳ ಮಂಜೂರಾತಿ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಸ್ಥಗಿತಗೊಳಿಸಲಾಗಿದೆ. ಅದೇ ರೀತಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಜಾರಿಯಲ್ಲಿದ್ದ ಅರಿವು ಯೋಜನೆ ಮೂಲಕ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ನೀಡಲಾಗುತ್ತಿದ್ದ ಶೈಕ್ಷಣಿಕ ಸಾಲ ಸೇರಿದಂತೆ ವೈಯಕ್ತಿಕ ಸಾಲ ಸೌಲಭ್ಯ ಯೋಜನೆಗಳ ಅನುದಾನ ಕಡಿತಗೊಳಿಸಿ ಯಾವುದೇ ಯೋಜನೆ ನಾಗರಿಕರಿಗೆ ಸಿಗದ ರೀತಿ ಹಿಂದಿನ ಸರಕಾರ ನಡೆದುಕೊಂಡಿದೆ.

ಈಗ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷದ ಸರಕಾರದ ಮೇಲೆ ವಿಶ್ವಾಸವಿಟ್ಟಿರುವ ಅಲ್ಪಸಂಖ್ಯಾತ ಸಮುದಾಯವು ಸಾಕಷ್ಟು ಆಶಾಭಾವನೆ ಇಟ್ಟುಕೊಂಡಿರುವುದು ಸತ್ಯ. ಸರಕಾರ ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು. ಆನಂತರ ಹಿಂದೆ ಸಿದ್ದರಾಮಯ್ಯನವರ ಸರಕಾರ ಇದ್ದಂತಹ ಸಂದರ್ಭದಲ್ಲಿ ಜಾರಿಯಲ್ಲಿರುವ ಎಲ್ಲಾ ಯೋಜನೆಗಳನ್ನು ಯಾವುದೇ ಬದಲಾವಣೆ ಇಲ್ಲದೆ ಮರು ಜಾರಿಗೊಳಿಸಬೇಕು. ಅಲ್ಲದೆ ಬೇಡಿಕೆ ಇರುವ ಕಡೆ ಹೆಚ್ಚಿನ ಪ್ರಮಾಣದಲ್ಲಿ ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಶಾಲೆಗಳನ್ನು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಮಹಿಳಾ ಪದವಿ ಪೂರ್ವ ಕಾಲೇಜು ಮಾದರಿಯಲ್ಲಿ ಜಿಲ್ಲೆಗೊಂದರಂತೆ ಬಾಲಕರ ಪದವಿ ಪೂರ್ವ ಕಾಲೇಜುಗಳನ್ನು, ರಾಜ್ಯದ ಪ್ರತೀಯೊಂದು ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತವಾದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು, ಹೊಸದಾಗಿ ವಸತಿ ನಿಲಯಗಳನ್ನು ಜೊತೆಗೆ ಈಗಿರುವ ವಸತಿ ನಿಲಯಗಳ ಪ್ರವೇಶ ಸಂಖ್ಯೆ ಹೆಚ್ಚಿಸಿ ಮಂಜೂರು ಮಾಡಬೇಕು. ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಅನುದಾನ ನಿಗದಿಗೊಳಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರತ ಅಲ್ಪಸಂಖ್ಯಾತರ ಮಹಿಳಾ ವಸತಿ ನಿಲಯಗಳನ್ನು ಮಂಜೂರು ಮಾಡಬೇಕು. ಅಲ್ಪಸಂಖ್ಯಾತ ಸಮುದಾಯ ಕೇಂದ್ರಿತ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸುವ ಪ್ರಧಾನ ಮಂತ್ರಿ ಜನವಿಕಾಸ ಯೋಜನೆಯಡಿಯಲ್ಲಿ ಸೂಕ್ತ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಕಳುಹಿಸಬೇಕು, ಅಲ್ಲದೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ 1,000 ಕೋಟಿ ರೂ. ಅನುದಾನ ನಿಗದಿಗೊಳಿಸಿ ಆ ನಿಗಮದ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಕರ್ನಾಟಕ ಸರಕಾರ ರಚನೆಯಲ್ಲಿ ಬಹುಮುಖ್ಯ ಪಾತ್ರವಹಿಸಿರುವ ಮುಸ್ಲಿಮ್ ಸಮುದಾಯದ ನಾಯಕರನ್ನು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯಲ್ಲಿ ಶೇ. 20ರಷ್ಟು ಹುದ್ದೆಗಳಿಗೆ ನಾಮನಿರ್ದೇಶನ ಮಾಡಬೇಕು. ಕನಿಷ್ಠ ಉಚ್ಚ ನ್ಯಾಯಾಲಯಗಳಲ್ಲಿ ಅಪರ ಅಡ್ವೊಕೇಟ್ ಜನರಲ್ ಹುದ್ದೆಗೆ ಹಾಗೂ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ಸರಕಾರಿ ಅಭಿಯೋಜಕರ ನೇಮಕಾತಿಗೆ ಶೇ. 20ರಷ್ಟು ಅರ್ಹ ಮುಸ್ಲಿಮ್ ಸಮುದಾಯದ ವಕೀಲರನ್ನು ಮೀಸಲಿಡಬೇಕು. ಎಲ್ಲಾ ನಿಗಮ ಮಂಡಳಿ ಸದಸ್ಯರ ನೇಮಕಾತಿಯಲ್ಲಿ ಕಡ್ಡಾಯವಾಗಿ ಮುಸ್ಲಿಮ್ ಸಮುದಾಯದವರನ್ನು ನೇಮಿಸುವಂತೆ ಸೂಕ್ತ ಆದೇಶ ನೀಡುವಂತಾಗಬೇಕು. ಕೇವಲ ವಿವೇಚನಾಧಿಕಾರದ ಮೇಲೆ ನಾಮನಿರ್ದೇಶನ ಇದ್ದರೆ, ಎಲ್ಲಾ ಸರಕಾರಗಳಲ್ಲಿ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸುತ್ತಾರೆ. ಕರ್ನಾಟಕ ವಿಶ್ವವಿದ್ಯಾನಿಲಯ ಕಾಯ್ದೆಯಲ್ಲಿ ಇರುವಂತೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ಎಲ್ಲಾ ನಿಗಮ ಮಂಡಳಿಗಳ ಸದಸ್ಯರ ನಾಮನಿರ್ದೇಶನದಲ್ಲಿ ಕಡ್ಡಾಯವಾಗಿ ನೇಮಿಸುವಂತೆ ಸೂಕ್ತ ಆದೇಶವಾಗಬೇಕು. ಕಳೆದ ಐದು ವರ್ಷಗಳಿಂದ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರು ಮುಸ್ಲಿಮ್ ಸಮುದಾಯದ ಒಬ್ಬರೂ ಇಲ್ಲದೆ ಇರುವುದರಿಂದ ಅಲ್ಲಿ ನಡೆದಂತಹ ನೇಮಕಾತಿಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ನ್ಯಾಯ ಸಿಕ್ಕಿದೆಯೇ ಎನ್ನುವುದು ಅನುಮಾನವಿದೆ. ತಕ್ಷಣ ಒಬ್ಬ ಮುಸ್ಲಿಮ್ ಸಮುದಾಯದ ವ್ಯಕ್ತಿಯನ್ನು ಲೋಕಸೇವಾ ಆಯೋಗಕ್ಕೆ ಸದಸ್ಯರನ್ನಾಗಿ ನೇಮಿಸಬೇಕು. ರಾಜ್ಯದಲ್ಲಿ ಈಗಿರುವ 30 ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಒಬ್ಬರೂ ಮುಸ್ಲಿಮ್ ಸಮುದಾಯದ ಖಾಯಂ ಕುಲಪತಿಗಳು ಇಲ್ಲ. ‘‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’’ ಎನ್ನುವವರು ಉದ್ದೇಶಪೂರ್ವಕವಾಗಿಯೇ ಮುಸ್ಲಿಮರನ್ನು ಕುಲಪತಿ ಹುದ್ದೆಗಳಿಗೆ ಕಡೆಗಣಿಸಿದ್ದಾರೆ. ಹಾಗಾಗಿ ಸರಕಾರ ತಕ್ಷಣ ಖಾಲಿ ಇರುವ ವಿಶ್ವವಿದ್ಯಾನಿಲಯಗಳ ಕುಲಪತಿ ಹುದ್ದೆಗಳಿಗೆ ಕನಿಷ್ಠ 5 ಜನ ಪ್ರಾಧ್ಯಾಪಕರನ್ನು ನೇಮಿಸುವುದರ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕು. 

ಪ್ರಜಾಪ್ರಭುತ್ವ ಸರಕಾರದಲ್ಲಿ ಸೂಕ್ತ ಪ್ರಾತಿನಿಧ್ಯವಿಲ್ಲದೆ ಯಾವುದೇ ಸಮುದಾಯ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಪಡೆಯಲು ಸಾಧ್ಯವಿಲ್ಲ. ಈ ವಿಷಯ ಸಿದ್ದರಾಮ್ಯಯ್ಯನವರಿಗೆ ಸಮರ್ಪಕವಾಗಿ ಮನವರಿಕೆ ಇದೆ ಎಂದೇ ಭಾವಿಸಲಾಗಿದೆ, ಅವರ ನೇತೃತ್ವದ ಸರಕಾರದಲ್ಲಿ ಅವಕಾಶ ವಂಚಿತ ಮುಸ್ಲಿಮ್ ಸಮುದಾಯಕ್ಕೆ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ಇಡಬಹುದಾಗಿದೆ.

Similar News