ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶೇಕಡಾ 85 ಅಂಕ ಗಳಿಸಿದ ಅಂಧ ಬಾಲಕಿಗೆ ಐಎಎಸ್ ಕನಸು

Update: 2023-05-26 05:25 GMT

ಗಾಂಧಿನಗರ: ಲ್ಯಾಪ್‌ಟಾಪ್ ಬಳಸಿ ಎಸ್‌ಎಸ್‌ಸಿ ಪರೀಕ್ಷೆ ಬರೆದ ಮೊಟ್ಟಮೊದಲ ಹಾಗೂ ಏಕೈಕ ದೃಷ್ಟಿಮಾಂದ್ಯ ಬಾಲಕಿ ಎಂಬ ಹೆಗ್ಗಳಿಕೆಗೆ  ಗುಜರಾತ್‌ನ ವಡೋದರ ನಿವಾಸಿ ಯೆಶಾ ಮಕ್ವಾನಾ ಪಾತ್ರಳಾಗಿದ್ದಾಳೆ.

ವೆಬ್ ಮೆಮೋರಿಯಲ್ ಸ್ಕೂಲ್‌ನ ವಿದ್ಯಾರ್ಥಿನಿಯಾಗಿರುವ ಮಕ್ವಾನಾ ಶೇಕಡ 85.2ರಷ್ಟು ಅಂಕ ಗಳಿಸಿ ರಾಜ್ಯದಲ್ಲಿ ದೃಷ್ಟಿಮಾಂದ್ಯ ವಿದ್ಯಾರ್ಥಿಗಳ ಪೈಕಿ ಪ್ರಥಮ ರ‍್ಯಾಂಕ್‌ ಗಿಟ್ಟಿಸಿಕೊಂಡಿದ್ದಾಳೆ. 

 ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿರುವ ಮಕ್ವಾನಾ, "ಪೋಷಕರು ಮತ್ತು ಸಮಾಜ ಸುರಕ್ಷಾ ಸಂಕುಲದ ಶಿಕ್ಷಕರ ಬೆಂಬಲದಿಂದ ಈ ಸಾಧನೆ ಸಾಧ್ಯವಾಯಿತು. ಅತೀವ ಸಂತಸವಾಗುತ್ತಿದೆ" ಎಂದು ಹೇಳಿದ್ದಾಳೆ.

ಲ್ಯಾಪ್‌ಟಾಪ್ ಬಳಕೆ ಕಲಿಯುವುದು ಯೆಶಾ ಮಕ್ವಾನಾಗೆ ಸುಲಭದ ತುತ್ತೇನೂ ಆಗಿರಲಿಲ್ಲ. ಒಂದು ವರ್ಷದ ಹಿಂದಷ್ಟೇ ಈಕೆ ಲ್ಯಾಪ್‌ಟಾಪ್‌ಗೆ ಪರಿಚಿತಳಾಗಿದ್ದಾಳೆ. ಪ್ರತಿ ದಿನ ಹಲವ ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದಳು ಎಂದು ತಾಯಿ ವಿಲಾಸ್ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಅಂಧ ವಿದ್ಯಾರ್ಥಿಗಳಿಗೆ ಧ್ವನಿ ನೆರವಿನ ವಿಶೇಷತೆ ಇರುವ ವಿಶೇಷ ಲ್ಯಾಪ್‌ಟಾಪ್‌ಗಳನ್ನು ನೀಡಲಾಗುತ್ತಿದೆ. ಈಕೆಯ ಶಾಲೆ ದೀಪಕ್ ಫೌಂಡೇಷನ್‌ನ ಸಂಕುಲ ಶಾಲೆ ಮತ್ತು ಸಂಪನ್ಮೂಲ ಕೇಂದ್ರದ ಭಾಗವಾಗಿದೆ.

"ಅಂಗವೈಕಲ್ಯ ಹೊಂದಿದ ಮಕ್ಕಳನ್ನು ಸಮಾಜ ನೋಡುವ ವಿಧಾನವನ್ನು ನಮ್ಮ ವಿದ್ಯಾರ್ಥಿಗಳು ಬದಲಿಸುತ್ತಿರುವ ಬಗ್ಗೆ ನಮಗೆ ಅತೀವ ಹೆಮ್ಮೆ ಇದೆ. ಅದ್ಭುತ ಪ್ರತಿಭೆಗಳಾಗಿರುವ ಅವರು, ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಮೀರಿ ತಮ್ಮ ಗುರಿಸಾಧನೆಗೆ ಹೋರಾಡುತ್ತಿದ್ದಾರೆ" ಎಂದು ದೀಪಕ್ ಫೌಂಡೇಷನ್‌ನ ಕಾರ್ಯತಂತ್ರ ವಿಭಾಗದ ಮುಖ್ಯಸ್ಥರಾದ ಡಾ.ರುಚಿ ಮೆಹ್ತಾ ಹೇಳಿದ್ದಾರೆ.

ರಾಜ್ಯದಲ್ಲಿ ಒಟ್ಟು 528 ಮಂದಿ ಅಂಧ ವಿದ್ಯಾರ್ಥಿಗಳು ಎಸ್‌ಎಸ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 508 ಮಂದಿ ಹಾಜರಾಗಿದ್ದರು. ಈ ಪೈಕಿ 300ಕ್ಕೂ ಹೆಚ್ಚು ಮಂದಿ ತೇರ್ಗಡೆಯಾಗಿದ್ದಾರೆ.

Similar News