ಮಕ್ಕಳೆದುರೇ ಬಡಿದಾಡಿಕೊಂಡ ಶಾಲಾ ಶಿಕ್ಷಕಿಯರು: ವಿಡಿಯೋ ವೈರಲ್‌

Update: 2023-05-26 13:49 GMT

ಪಾಟ್ನಾ: ಮುಖ್ಯಶಿಕ್ಷಕಿ ಹಾಗೂ ಸಹಾಯಕ ಶಿಕ್ಷಕಿ ಶಾಲೆಯಲ್ಲಿ ಮಕ್ಕಳೆದುರೇ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ನಡೆದಿದೆ.

ಕೌರಿಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಮುಖ್ಯ ಶಿಕ್ಷಕಿ ಕಾಂತಿ ಕುಮಾರಿ ಹಾಗೂ ಸಹ ಶಿಕ್ಷಕಿ ಸುನೀತಾ ಕುಮಾರಿ ನಡುವೆ ಯಾವುದೋ ವಿಷಯಕ್ಕೆ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸುನೀತಾ ಕುಮಾರಿ ತಾಯಿ ಕೂಡ ಅಲ್ಲೇ ಇದ್ದರು. ಪರಸ್ಪರ ಮಾತಿಗೆ ಮಾತು ಬೆಳೆದು ಕಾಂತಿ ಕುಮಾರಿ ಹಾಗೂ ಸುನೀತಾ ಕುಮಾರಿ ಹೊಡೆದಾಡಿಕೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಈ ವೇಳೆ ಸುನೀತಾ ಕುಮಾರಿ ತಾಯಿ ಕೂಡ ಜಗಳದಲ್ಲಿ ಭಾಗಿಯಾಗಿ ಮುಖ್ಯ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಶಾಲೆಯ ಪಕ್ಕದ ಹೊಲದ ಬದಿಗೆ ಹೋಗಿ ಕೂಡ ಶಿಕ್ಷಕಿಯರು ಹೊಡೆದಾಡಿಕೊಂಡಿದ್ದಾರೆ.

ಇಬ್ಬರು ಶಿಕ್ಷಕಿಯರು ವೈಯಕ್ತಿಕ ವಿಚಾರವಾಗಿ ಹೊಡೆದಾಡಿಕೊಂಡಿದ್ದಾರೆ ಎಂದು ಬಿಡ್ತಾ ಕ್ಷೇತ್ರ ಶಿಕ್ಷಣಾಧಿಕಾರಿ ನವೀಶ್ ಕುಮಾರ್ ಹೇಳಿದ್ದು, ಇಬ್ಬರಿಗೂ ನೋಟಿಸ್ ನೀಡಲಾಗಿದೆ, ಶೀಘ್ರದಲ್ಲೇ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.

Similar News