ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಂವಿಧಾನದ ಆಶಯ: ಕಾನೂನು ವಿವಿ ಕುಲಪತಿ ಡಾ.ಬಸವರಾಜು

Update: 2023-05-26 15:55 GMT

ಉಡುಪಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬುದು ನಮ್ಮ ಸಂವಿಧಾನದ ಆಶಯ. ಇದಕ್ಕಾಗಿ ನ್ಯಾಯಾಂಗ ಕ್ಷೇತ್ರದ ವೃತ್ತಿಪರರು ಶ್ರಮಿಸಬೇಕು ಎಂದು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.(ಡಾ.) ಸಿ.ಬಸವರಾಜ್ ಹೇಳಿದ್ದಾರೆ.

ಕುಂಜಿಬೆಟ್ಟಿನ ವೈಕುಂಠ ಬಳಿಗಾ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ನ್ಯಾಯವಾದಿ ಪಿ. ಶಿವಾಜಿ ಶೆಟ್ಟಿ ಸ್ಮಾರಕ ರಾಷ್ಟ್ರಮಟ್ಟದ ಏಳನೇ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಉದ್ಘಾಟಿಸಿ, ಟ್ರೋಫಿ ಅನಾವರಣಗೊಳಿಸಿ ಅವರು ಮಾತನಾಡಿದರು. 

ದೇಶಕ್ಕೆ ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷಗಳು ಸಂದರೂ ಅಸಮಾನತೆ ಜೀವಂತವಾಗಿರುವ ನಮ್ಮ ಸಮಾಜದಲ್ಲಿ ಜನಸಾಮಾನ್ಯರು, ಸಮಾಜದ ಕಟ್ಟಕಡೆಯ ವ್ಯಕ್ತಿ, ದುರ್ಬಲ ವರ್ಗಕ್ಕೆ ನ್ಯಾಯ ಸಿಗುವಂತೆ ನ್ಯಾಯಾಂಗ ಕ್ಷೇತ್ರದ ವೃತ್ತಿಪರರು ಶ್ರಮಿಸದಿದ್ದರೆ ಸಂವಿಧಾನ ನಿರ್ಮಾತೃಗಳ ಆಶಯ, ಶ್ರಮ ನಿರರ್ಥಕ ಎಂದು ಡಾ.ಬಸವರಾಜು ಅಭಿಪ್ರಾಯಪಟ್ಟರು.

ವೃತ್ತಿಪರ ಕಾನೂನು ಕ್ಷೇತ್ರ ಜಾಗತಿಕ ಮಾನ್ಯತೆ ಜೊತೆಗೆ ಸ್ಪರ್ಧೆ ಎದುರಿಸುತ್ತಿದೆ. ಕಾನೂನು ವಿದ್ಯಾರ್ಥಿಗಳು ಸಮಗ್ರ ತರಬೇತಿ, ಪ್ರಾಯೋಗಿಕ ಅನುಭವ, ಕೌಶಲ್ಯದ ಜತೆಗೆ ಪಠ್ಯೇತರ ಜ್ಞಾನವನ್ನು ಹೊಂದಬೇಕು. ಜಾಗತಿಕವಾಗಿ  ಪರಿಸರ, ಸಾಮಾಜಿಕ ನ್ಯಾಯ, ಕುಟುಂಬ, ಅಪರಾಧ ವಿಚಾರದಲ್ಲಿ ಸಮಸ್ಯೆಗಳಿದ್ದು ಶೇ.8ರಿಂದ 10ಜನರಿಗಷ್ಟೇ ಸಂವಿಧಾನದ ಅರಿವಿದ್ದು  ಅನ್ಯರಿಗೆ ಕಾನೂನಿನ ನೆರವು, ಅರಿವಿನ ಅಗತ್ಯವಿದೆ ಎಂದರು.

ದೇಶದ ಶೇ.70ರಷ್ಟು ಮಂದಿ ಇನ್ನೂ ನ್ಯಾಯ ವ್ಯವಸ್ಥೆಯ ಮುಖ್ಯ ವಾಹಿನಿಗೆ ಬಂದಿಲ್ಲ. ಶೇ.72ರಷ್ಟು ಕಕ್ಷಿಗಾರರು ಬಡವರಿದ್ದು ವಿದ್ಯಾರ್ಥಿಗಳಲ್ಲಿ ಸಮಾನತೆಯ ಸಾಂವಿಧಾನಿಕ ಮೌಲ್ಯದ ಅರಿವು ಮೂಡಿಸಬೇಕು. ಕಾನೂನು ಸಹಿತ ವೃತ್ತಿಪರ, ಉನ್ನತ ಶಿಕ್ಷಣದಲ್ಲಿ  ಮಾತೃಭಾಷೆಯ ಶಿಕ್ಷಣಕ್ಕೂ ಅವಕಾಶವಿದ್ದು ಕನ್ನಡದಲ್ಲೂ ಯುವ ನ್ಯಾಯವಾದಿಗಳು ವಾದಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಕಿವಿ ಮಾತು ಹೇಳಿದರು. 

ವಿಬಿಸಿಎಲ್‌ನ ನಿರ್ದೇಶಕಿ ಪ್ರೊ.(ಡಾ.) ನಿರ್ಮಲಾ ಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಜಯಂತಿ ಪಿ. ಶಿವಾಜಿ ಶೆಟ್ಟಿ,  ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀಧರ ಪಿ. ಎಸ್., ಸುರೇಖಾ ಕೆ., ಅಭಯ ಶ್ರೀಕುಮಾರ್, ನಯನಾ ಉಪಸ್ಥಿತರಿದ್ದರು.

ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ರಘುನಾಥ್ ಕೆ. ಎಸ್. ಸ್ವಾಗತಿಸಿದರು.  ವಿದ್ಯಾರ್ಥಿಗಳಾದ ಅವಿನಾಶ್ ಕೆ., ಶರಣ್ ಕುಮಾರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮರಿಯಾ ಥೆರೇಸಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ.ಪ್ರೀತಿ ಹರೀಶ್‌ರಾಜ್ ವಂದಿಸಿದರು.

Similar News