ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಬಂಧನಕ್ಕೆ ರಾಮ್ ದೇವ್ ಆಗ್ರಹ

Update: 2023-05-27 09:53 GMT

ಹೊಸದಿಲ್ಲಿ: ಬಾಲಕಿ  ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಹಾಗೂ  ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan)ಅವರನ್ನು ಬಂಧಿಸುವಂತೆ ಒತ್ತಾಯಿಸಿ ಹಲವು ವಾರಗಳ ಕಾಲ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರ ಕುಸ್ತಿಪಟುಗಳಿಗೆ ಯೋಗ ಗುರು ರಾಮ್‌ದೇವ್ (Ramdev)ಬೆಂಬಲ ನೀಡಿದ್ದಾರೆ ಎಂದು Live Hindustan ವರದಿ ಮಾಡಿದೆ.

ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕಂಬಿ ಹಿಂದೆ ಹಾಕಬೇಕು ಎಂದು ರಾಮದೇವ್ ಆಗ್ರಹಿಸಿದ್ದಾರೆ.

"ದೇಶದ ಕುಸ್ತಿಪಟುಗಳು ಜಂತರ್ ಮಂತರ್ ನಲ್ಲಿ ಕುಳಿತು ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.ಇಂತಹವರನ್ನು ಕೂಡಲೇ ಬಂಧಿಸಿ ಕಂಬಿಗಳ ಹಿಂದೆ ಕಳುಹಿಸಬೇಕು. ಪ್ರತಿ ದಿನವೂ, ತಾಯಂದಿರು , ಸಹೋದರಿಯರು ಹಾಗೂ  ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ. ಇದು ಅತ್ಯಂತ ಖಂಡನೀಯ ದುಷ್ಟ ಕೃತ್ಯ, ಪಾಪದ ಕೆಲಸ" ಎಂದು ರಾಮದೇವ್ ಹೇಳಿದರು.

ದಿಲ್ಲಿ ಪೊಲೀಸರು ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರವೂ ಅವರನ್ನು ಬಂಧಿಸದಿರುವ ಬಗ್ಗೆ ಕೇಳಿದಾಗ  ಪ್ರತಿಕ್ರಿಯಿಸಿದ ರಾಮ್‌ದೇವ್, “ನಾನು ಹೇಳಿಕೆಯನ್ನು ಮಾತ್ರ ನೀಡಬಲ್ಲೆ. ಆತನನ್ನು ಜೈಲಿನಲ್ಲಿಡಲು ನನಗೆ ಸಾಧ್ಯವಿಲ್ಲ'' ಎಂದರು.

"ನಾನು ಎಲ್ಲಾ ಪ್ರಶ್ನೆಗಳಿಗೆ ರಾಜಕೀಯವಾಗಿ ಉತ್ತರಿಸುವ ಸಾಮರ್ಥ್ಯ ಹೊಂದಿದ್ದೇನೆ. ನಾನು ಬೌದ್ಧಿಕವಾಗಿ ದಿವಾಳಿಯಲ್ಲ. ನಾನು ಮಾನಸಿಕವಾಗಿ ಅಥವಾ ಬೌದ್ಧಿಕವಾಗಿ ವಿಕಲಾಂಗನಲ್ಲ, ನನಗೆ ದೇಶದ ಬಗ್ಗೆ ದೂರದೃಷ್ಟಿ ಇದೆ" ಎಂದು ರಾಮ್‌ದೇವ್ ಹೇಳಿದ್ದಾರೆ ಎಂದು ' India Today' ಉಲ್ಲೇಖಿಸಿದೆ.

ವಿನೇಶ್ ಫೋಗಟ್ ಹಾಗೂ  ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಹಾಗೂ  ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಸಿಂಗ್ ಬಂಧನಕ್ಕೆ ಒತ್ತಾಯಿಸಿ ಎಪ್ರಿಲ್ 23 ರಿಂದ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ.

Similar News