ಉಡುಪಿ ನಗರದಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆ: 6 ಕೊಳವೆಬಾವಿ ಕೊರೆಯಲು ಜಿಲ್ಲಾಡಳಿತ ಅನುಮತಿ

Update: 2023-05-27 16:49 GMT

ಉಡುಪಿ, ಮೇ 27: ಜೂನ್ ತಿಂಗಳು ಸಮೀಪಿಸುತ್ತಿದ್ದರೂ ಇನ್ನೂ ಕೂಡ ಮಳೆಯ ಆಗಮನ ಆಗದ ಪರಿಣಾಮ ಉಡುಪಿ ನಗರದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಆರು ಕೊಳವೆಬಾವಿಗಳನ್ನು ಕೊರೆಯಲು ಉಡುಪಿ ಜಿಲ್ಲಾಡಳಿತ ನಗರಸಭೆಗೆ  ಅನುಮತಿ ನೀಡಿದೆ.  

ನಗರಕ್ಕೆ ನೀರು ಪೂರೈಕೆ ಮಾಡುವ ಬಜೆ ಡ್ಯಾಂನಲ್ಲಿ ಮೇ 27ರಂದು ನೀರಿನ ಸಂಗ್ರಹ 2.55ಮೀಟರ್ ಇದೆ. ಸದ್ಯ ಉಡುಪಿ ನಗರಕ್ಕೆ ಮೂರು ದಿನಕ್ಕೊಮ್ಮೆ ರೇಷನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗೆ ಮೂರು ದಿನಕ್ಕೊಮ್ಮೆ ಕೊಟ್ಟರೂ ಬಜೆಯ ನೀರು ಕೇವಲ ಒಂದು ವಾರಕ್ಕೆ ಮಾತ್ರ ಸಾಕಾಗುತ್ತದೆ.

ಜೂನ್ ಮೂರರವರೆಗೆ ನೀರು ಪೂರೈಕೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ನಗರಸಭೆ ಅಧಿಕಾರಿಗಳು ಮಾಡುತ್ತಿದ್ದು, ಇದರೊಳಗೆ ಮಳೆ ಬಾರದಿದ್ದರೆ ಬಜೆ ಜಲಾಶಯ ಖಾಲಿಯಾಗಿ ನೀರಿನ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಆದುದರಿಂದ ಅಧಿಕಾರಿಗಳು ಮಳೆರಾಯನ ಆಗಮನದ ನಿರೀಕ್ಷೆಯಲ್ಲಿ  ದಿನದೂಡುತ್ತಿದ್ದಾರೆ.  

11 ಟ್ಯಾಂಕರ್‌ಗಳ ವ್ಯವಸ್ಥೆ

ಸದ್ಯ ನಗರಕ್ಕೆ ನೀರಿನ ಸಮಸ್ಯೆ ಇರುವಲ್ಲಿಗೆ 11 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ನಾಲ್ಕು ಟ್ಯಾಂಕರ್‌ಗಳನ್ನು ಶಾಸಕ ಯಶ್‌ಪಾಲ್ ಸುವರ್ಣ, ಎರಡು ಟ್ಯಾಂಕರ್ ನಗರಸಭೆಯಿಂದ ವ್ಯವಸ್ಥೆ ಮಾಡಲಾಗಿದೆ. ಉಳಿದ ಐದು ಬಾಡಿಗೆಗೆ ಗೊತ್ತು ಮಾಡಿ ನೀರು ಪೂರೈಸಲು ಕ್ರಮ ವಹಿಸಲಾಗಿದೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಮೂಲವಾಗಿ ಒಟ್ಟು 16 ಕೊಳವೆ ಬಾವಿಗಳಿವೆ. ಅದರ ಪೈಕಿ 8 ಕೊಳವೆಬಾವಿಗಳಿಗೆ ಪಂಪ್ ಅಳವಡಿಸಿ ನೀರು ತೆಗೆದು ಟ್ಯಾಂಕರ್ ಮೂಲಕ ಮನೆಮನೆಗೆ ಪೂರೈಕೆ ಮಾಡಲಾಗುತ್ತಿದೆ. ಅದೇ ರೀತಿ ನಗರಸಭೆ ವ್ಯಾಪ್ತಿಯಲ್ಲಿ 22 ತೆರೆದ ಬಾವಿಗಳಿದ್ದು, ಇವು ಎಲ್ಲವನ್ನು ಶುಚಿಗೊಳಿಸಿ ಆಯಾ ವಾರ್ಡ್‌ಗಳಿಗೆ ಬೇಕಾದವರು ಬಳಕೆ ಮಾಡುವಂತೆ ಮಾಡಲಾಗಿದೆ.

2 ಕೊಳವೆ ಬಾವಿಯಿಂದ ನೀರು

ನಗರ ವ್ಯಾಪ್ತಿಯಲ್ಲಿ ಒಟ್ಟು ಆರು ಹೊಸ ಕೊಳವೆಬಾವಿ ಕೊರೆಯಲು  ಜಿಲ್ಲಾಧಿಕಾರಿಗಳಿಂದ ನಗರಸಭೆಯವರು ಅನುಮತಿ ಪಡೆದುಕೊಂಡಿದ್ದು, ಅದರಂತೆ ಮೊದಲ ಹಂತದಲ್ಲಿ ಮಣಿಪಾಲ, ಗೋಪಾಲಪುರ, ಸಗ್ರಿ ಬಳಿ ಕೊಳವೆ ಬಾವಿಯನ್ನು ಕೊರೆಯಲಾಗಿದೆ.

ಇದರಲ್ಲಿ ಒಂದು ಕೊಳವೆಬಾವಿಯಲ್ಲಿ ನೀರು ಬಾರದೆ ವಿಫಲವಾಗಿದ್ದು, ಉಳಿದ ಎರಡು ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಿ ಪಂಪ್ ಅಳವಡಿಸಿ ನೀರು ತೆಗೆಯಲು ಆರಂಭಿಸಲಾಗಿದೆ ಎಂದು ನಗರಸಭೆ ಪೌರಾ ಯುಕ್ತ ಆರ್.ಪಿ.ನಾಯ್ಕ್ ತಿಳಿಸಿದ್ದಾರೆ.

ಉಳಿದ ಮೂರು ಕೊಳವೆ ಬಾವಿಯನ್ನು ಕೊರೆಯಲು ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ನೀರಿನ ಸಮಸ್ಯೆ ಅನುಭವಿಸುತ್ತಿರುವ ಮತ್ತು ಅತೀ ಅಗತ್ಯವಾಗಿ ನೀರು ಬೇಕಾಗಿರುವ ಅಜ್ಜರಕಾಡು ಸರಕಾರಿ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಯಲು ಜಾಗ ಹುಡುಕಾಟ ನಡೆಸಲಾಗುತ್ತಿದೆ.

ಈ ಸಂಬಂಧ ಖಾಸಗಿಯವರಿಂದ ನೀರಿನ ಜಾಗವನ್ನು ಗುರುತಿಸಲು ಸೂಚನೆ ನೀಡಲಾಗಿದೆ. ಭೂ ಮತ್ತು ಗಣಿ ತಜ್ಞರಿಂದ ಪ್ರಮಾಣಪತ್ರ ಪಡೆದು ಕೊಳವೆ ಬಾವಿ ಕೊರೆಯಲು ಯೋಜಿಸಲಾಗಿದೆ. ಇದರಿಂದ ಆಸ್ಪತ್ರೆಗೂ ಶಾಶ್ವತವಾಗಿ ನೀರು ದೊರೆತು ಸಮಸ್ಯೆ ಪರಿಹರಿಸಿದಂತಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ಭಂಡಾರಿಬೆಟ್ಟು ಗುಂಡಿಯಿಂದ ಪಂಪಿಂಗ್ 

ಬಜೆ ಅಣೆಕಟ್ಟು ಸಮೀಪ ಸ್ವರ್ಣ ನದಿಯಲ್ಲಿರುವ ಭಂಡಾರಿಬೆಟ್ಟು ಗುಂಡಿ ಯಲ್ಲಿ ಶೇಖರಣೆಯಾಗಿರುವ ನೀರನ್ನು ಪಂಪಿಂಗ್ ಮೂಲಕ ಹರಿಸಿ ಬಜೆ ಜಲಾಶಯಕ್ಕೆ ತರುವ ಕಾರ್ಯ ಎರಡು ದಿನಗಳಿಂದ ನಡೆಯುತ್ತಿದೆ.

‘ಭಂಡಾರಿಬೆಟ್ಟು ಗುಂಡಿಗೆ ಮೋಟಾರ್ ಅಳವಡಿಸಿ ಎರಡು ದಿನಗಳಿಂದ ನೀರು ಪಂಪ್ ಮಾಡಲಾಗುತ್ತಿದೆ. ಇದು ಬಿಟ್ಟು ಇನ್ನು ಎರಡು ಗುಂಡಿಗಳಿವೆ. ಇಲ್ಲಿಗೆ ತಲಾ 30 ಎಚ್‌ಪಿಯಂತೆ ಒಟ್ಟು 90 ಎಚ್‌ಪಿಯ ಮೂರು ಇಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಇದರಿಂದ ಹೊಂಡದ ನೀರು ಎರಡನೇ ದಿನದಲ್ಲಿ ಶಿಫ್ಟ್ ಆಗುತ್ತದೆ. ಆ ನೀರನ್ನು ನಗರಕ್ಕೆ ಒಂದು ದಿನ ಕೊಡಲು ಸಾಧ್ಯವಾಗುತ್ತದೆ. ಹೀಗೆ ಇಲ್ಲಿ ನಾಲ್ಕು ದಿನಗಳಿಗೆ ಆಗುವಷ್ಟು ನೀರು ಇದೆ ಎಂದು ಪೌರಾಯುಕ್ತ ಆರ್.ಪಿ.ನಾಯ್ಕ್ ತಿಳಿಸಿದ್ದಾರೆ.

‘ನೀರಿನ ಸಮಸ್ಯೆ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಆದರೂ ಮನೆಮನೆ ನೀರು ಪೂರೈಸಲು ಕಷ್ಟವಾಗುತ್ತಿವೆ. ಪ್ರತಿ ಮನೆಮನೆಗೆ ಮುಟ್ಟಿಸುವುದೇ ದೊಡ್ಡ ಸವಾಲು ಆಗಿದೆ. ಕೆಲವು ಓಣಿಗಳಿಗೆ ಟ್ಯಾಂಕರ್ ಕೂಡ ಹೋಗುವುದಿಲ್ಲ. ಆದರೂ ನೀರು ಪೂರೈಕೆಗೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪಶ್ಚಿಮಘಟ್ಟದಲ್ಲಿ ಮಳೆ ಬಂದರೂ ಇಲ್ಲಿನ ವಿಪರೀತ ಬಿಸಿಲನಿಂದ ನದಿಯಲ್ಲಿ ನೀರಿನ ಹರಿವು ಆರಂಭವಾಗಿಲ್ಲ’
-ಆರ್.ಪಿ.ನಾಯ್ಕ್, ಪೌರಾಯುಕ್ತರು, ಉಡುಪಿ ನಗರಸಭೆ

‘ಬಜೆ ಅಣೆಕಟ್ಟು ಸುತ್ತಮುತ್ತ ಪ್ರದೇಶಗಳಾದ ಬ್ರಹ್ಮರ ಗುಂಡಿ, ಭಂಡಾರಿಬೆಟ್ಟು ಮೊದಲಾದ ಆಳದ ಗುಂಡಿಗಳಲ್ಲಿ ನೀರು ಸಂಗ್ರಹವಾಗಿದ್ದು, ಇಲ್ಲಿನ ನೀರಿನ ಮಟ್ಟ ಉಡುಪಿಗೆ ಒಂದು ಒಂದುವರೆ ತಿಂಗಳಿಗೆ ಆಗುವಷ್ಟು ಯತೇಚ್ಛ ವಾಗಿದೆ. ಅಧಿಕಾರಿಗಳು ಈ ಗುಂಡಿಗಳಲ್ಲಿರುವ ನೀರನ್ನು ಬಳಕೆ ಮಾಡಬೇಕು. ಇದರಿಂದ ಉಡುಪಿಯ ಜನತೆಗೆ ನೀರಿನ ಸಮಸ್ಯೆಯನ್ನು ಸ್ವಲ್ಪ ಕಡೆಮೆ ಮಾಡಬಹುದು. ಇಲ್ಲದಿದ್ದರೆ ಈ ನೀರು ಸ್ವರ್ಣ ನದಿ ತಟದಲ್ಲಿ ಇಂಗೀ ಹೋಗುವ ಸಾಧ್ಯತೆ ಇದೆ. ಆದುದರಿಂದ ಈ ಕಾರ್ಯಕ್ಕೆ ಚುರುಕು ಮುಟ್ಟಿಸಬೇಕು’
-ಸಾಣೆಕಲ್ಲು ಸುರೇಂದ್ರ ನಾಯಕ್, ಸ್ಥಳೀಯರು

Similar News

ನಾಪತ್ತೆ