ಸಾಹಿತ್ಯ ಕೃತಿಯೊಂದು ಚಲನಚಿತ್ರವಾಗಿ ರೂಪಾಂತರವಾದಾಗ...

Update: 2023-05-28 06:33 GMT

ಶಶಾಂಕ್ ಸೋಗಾಲ್ ನಿರ್ದೇಶಿಸಿದ, 'ಡೇರ್ ಡೆವಿಲ್ ಮುಸ್ತಫಾ' ಬಿಡುಗಡೆಯಾಗಿದೆ. ಕೋಮುಸಾಮರಸ್ಯ ಸಾರುವ 'ಡೇರ್ ಡೆವಿಲ್ ಮುಸ್ತಫಾ'

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದಲ್ಲಿ ಬರುವ 'ಡೇರ್ ಡೆವಿಲ್ ಮುಸ್ತಫಾ' ಸಣ್ಣ ಕತೆ ಈಗ ಚಲನಚಿತ್ರವಾಗಿ ಹೊರಬಂದಿದೆ. ಯುವ ನಿರ್ದೇಶಕ ಶಶಾಂಕ್ ಸೋಗಾಲ್ ಕತೆಯ ಮೂಲ ಉದ್ದೇಶಕ್ಕೆ ಎಲ್ಲೂ ಚ್ಯುತಿ ಬಾರದಂತೆ ವಿಸ್ತರಿಸಿಕೊಂಡು ನಿರೂಪಣೆಯನ್ನು ಸೊಗಸಾಗಿ ಕಟ್ಟಿಕೊಡುವಲ್ಲಿ ತಮ್ಮ ಚೊಚ್ಚಲ ಚಿತ್ರ ನಿರ್ದೇಶನದಲ್ಲಿಯೇ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಏಕತಾನತೆಯನ್ನು ಹೊತ್ತುಕೊಂಡಿದ್ದ ಕನ್ನಡ ಚಲನಚಿತ್ರ ರಂಗದಲ್ಲಿ 'ಡೇರ್ ಡೆವಿಲ್ ಮುಸ್ತಫಾ' ಹೊಸ ಅಲೆಯೊಂದನ್ನು ಎಬ್ಬಿಸುವ ಮೂಲಕ ಕನ್ನಡ ಸಿನೆಮಾಕ್ಕೆ ಹೊಸತನವೊಂದನ್ನು ಸೃಷ್ಟಿಸಿರುವ ಜೊತೆಗೆ ಕೋಮು ಸಾಮರಸ್ಯದ ಗಂಭೀರತೆ ಮತ್ತು ಪ್ರಾಮುಖ್ಯತೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಕೋಮುವಾದದ ವಿಷಬೀಜ ಬಿತ್ತಿ, ಧರ್ಮ-ಧರ್ಮಗಳ ನಡುವೆ ಕ್ಷಲ್ಲಕ ಕಾರಣಗಳಿಗೆ ಗಲಭೆಗಳನ್ನು ಸೃಷ್ಟಿಸುವ ಮೂಲಕ ಜನರಲ್ಲಿ ಮಾನವ ಪ್ರೀತಿಯನ್ನು ಹಾಳು ಮಾಡುವ, ಮನುಷ್ಯ ಮನುಷ್ಯರ ನಡುವ ಅಪನಂಬಿಕೆಗಳು ಮತ್ತು ದ್ವೇಷ ಭಾವನೆಗಳನ್ನು ಸೃಷ್ಟಿಸಲು ಹವಣಿಸುತ್ತಿರುವ ಹಲವು ಘಟನೆಗಳಿಂದ ರೋಸಿ ಹೋಗಿರುವ ಇಂದಿನ ಸಂದರ್ಭದಲ್ಲಿ ಸರ್ವಜನಾಂಗದ ಶಾಂತಿಯ ತೋಟವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಧರ್ಮಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು ಎಂಬ ಸಂದೇಶವನ್ನು 'ಡೇರ್ ಡೆವಿಲ್ ಮುಸ್ತಫಾ' ಹೊತ್ತು ತರುವ ಮೂಲಕ ಮಾನವಪ್ರೀತಿಗೆ ನೀರೆರೆದಿದೆ.

ಅಬಚೂರಿನ ಪೋಸ್ಟಾಫೀಸು, ಅವನತಿ, ಕುಬಿ ಮತ್ತು ಇಯಾಲ, ತುಕ್ಕೋಜಿ, ಡೇರ್ ಡೆವಿಲ್ ಮುಸ್ತಫಾ, ತಬರನ ಕಥೆ ಮತ್ತು ತ್ಯಕ್ತ ಎಂಬ ಏಳು ಕಥೆಗಳನ್ನು 'ಅಬಚೂರಿನ ಪೋಸ್ಟಾಫೀಸು' ಕಥಾ ಸಂಕಲನ ಒಳಗೊಂಡಿದೆ. ಅಬಚೂರಿನ ಪೋಸ್ಟಾಫೀಸು ಕತೆ ಚಲನಚಿತ್ರವಾಗಿ ದೃಶ್ಯರೂಪಕ್ಕೆ ಬಂದಿದ್ದಲ್ಲದೆ, 1973ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಸಂಕಲನದ ಕಥೆಗಳು ಮರಾಠಿ, ಹಿಂದಿ, ಮಲಯಾಳಂ, ಇಂಗ್ಲಿಷ್ ಭಾಷೆಗಳಿಗೂ ಅನುವಾದವಾಗಿವೆ. ಈ ಕಥಾ ಸಂಕಲನವನ್ನು ಬಂಡಾಯ ಸಾಹಿತ್ಯದ ಆರಂಭವೆನ್ನಬಹುದು. ಮಲೆನಾಡಿನ ಜನರ ಜೀವನ ಶೈಲಿಯ ಅದ್ಭುತ ನಿರೂಪಣೆ. ಲೋಹಿಯಾರ ತತ್ವಚಿಂತನೆ, ಕುವೆಂಪುರವರ ಕಲಾಕೃತಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆಗಳು ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳಲ್ಲಿ ಗಾಢವಾದ ಪರಿಣಾಮಗಳನ್ನು ಉಂಟುಮಾಡಿವೆ. ಇಡೀ ಕಥಾ ಸಂಕಲನದಲ್ಲಿ 'ಡೇರ್ ಡೆವಿಲ್ ಮುಸ್ತಫಾ' ಕತೆ ವಿಶಿಷ್ಟವಾಗಿಯೂ, ವಿನೋಧಕರವಾಗಿಯೂ ಮೂಡಿಬಂದಿದೆ.

ಕಥೆಯಲ್ಲಿ ಅಂದಿನ ಕಾಲಘಟ್ಟದ ಧರ್ಮಾಂಧತೆ, ಒಬ್ಬ ಇಸ್ಲಾಂ ಧರ್ಮದ ಹುಡುಗ ಹಿಂದೂ ವಿದ್ಯಾರ್ಥಿಗಳು ಹೆಚ್ಚಿರುವ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವಾಗ ಅಲ್ಲಿನ ಸಹಪಾಠಿಗಳು, ಗುರುಗಳು ಮತ್ತು ಹೊರಗಿನ ಸಮಾಜದ ಧೋರಣೆಗಳು ಇಲ್ಲಿ ವ್ಯಕ್ತರೂಪವನ್ನು ಪಡೆದಿವೆ. ಗಣೇಶನ ಹಬ್ಬದ ಮೆರವಣಿಗೆಯಲ್ಲಿ ಎಲ್ಲಿ ಹಿಂದೂ-ಮುಸ್ಲಿಮ್ ಜಗಳವಾಗುತ್ತದೋ ಎಂಬ ಆತಂಕದಲ್ಲಿ ಊರಿನವರೆಲ್ಲರೂ ಇದ್ದಾಗ ಗಣಪನ ಮುಂದೆ ಮೆರವಣಿಗೆಯಲ್ಲಿ ಬರುತ್ತಿದ್ದ ಬಸವನ ಬೆನ್ನಿಗೆ ಪೂಂಜಿನ ಕೊಳವು ತಾಗಿ ಬಸವ ಅಪಾಯದಲ್ಲಿದ್ದಾಗ ಮುಸ್ತಫಾ ಅಪಾಯದಿಂದ ಪಾರುಮಾಡಿ ಎಲ್ಲರ ಮನಸ್ಸನ್ನು ಗೆಲ್ಲುತ್ತಾನೆ. ಜಾತಿಗಿಂತ ಮನಸ್ಸು ಮತ್ತು ಮಾನವೀಯತೆ ದೊಡ್ಡದು ಎಂಬುದು ಕತೆಯ ಸಾರಾಂಶ. ಸಾಹಿತ್ಯ ಕೃತಿಯೊಂದು ಚಲನಚಿತ್ರವಾಗಿ ರೂಪಾಂತರ ಆದಾಗ ಮೂಲ ಕೃತಿಯೇ ಚೆನ್ನಾಗಿತ್ತು ಎಂಬ ಮಾತುಗಳು ಕೇಳಿ ಬರುವುದು ಸಹಜ. ಒಂದು ಕೃತಿಯನ್ನು ಓದುವಾಗ ಬರುವ ಕಲ್ಪನೆಗಳೇ ಬೇರೆ, ಅದನ್ನು ದೃಶ್ಯರೂಪದಲ್ಲಿ ತೆರೆಯ ಮೇಲೆ ನೋಡಿದಾಗ ಮೂಡುವ ಭಾವನೆಗಳೇ ಬೇರೆ. ಆದರೆ 'ಡೇರ್ ಡೆವಿಲ್ ಮುಸ್ತಫಾ' ಚಿತ್ರ ಈ ಅಪವಾದದಿಂದ ಹೊರತಾಗಿದ್ದು ಮೂಲ ಕತೆಯ ದ್ಯೇಯೋದ್ದೇಶಗಳು ಮತ್ತು ಅಭಿವ್ಯಕ್ತಿಗೆ ಎಲ್ಲೂ ಚ್ಯುತಿ ಬಾರದಂತೆ ಕತೆಯನ್ನು ವಿಸ್ತರಿಸಿಕೊಂಡು ಹೋಗುವ ಮೂಲಕ ಶಶಾಂಕ್ ಕನ್ನಡಿಗರಿಗೆ ಒಂದೊಳ್ಳೆಯ ಚಿತ್ರವನ್ನು ನೀಡಿದ್ದಾರೆ.

ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು. ಸಮಗ್ರತೆ ಮತ್ತು ಐಕ್ಯತೆಯ ವಿಚಾರದಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ. ಚಲನಚಿತ್ರಗಳು, ಡಿಜಿಟಲ್ ಮತ್ತು ವಿದ್ಯುನ್ಮಾನ ಸೇರಿದಂತೆ ಎಲ್ಲಾ ಮಾಧ್ಯಮಗಳು ಜನರನ್ನು ಪರಸ್ಪರ ಸನಿಹಕ್ಕೆ ತರಲು ಪ್ರಯುತ್ನಗಳನ್ನು ನಡೆಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಭಾರತದಲ್ಲಿ ಸಿನೆಮಾ ಮತ್ತು ಕ್ರೀಡೆಗಳು ರಾಷ್ಟ್ರೀಯ ಸಮಗ್ರತೆ ಮತ್ತು ಏಕೀಕರಣದ ಪ್ರಮುಖ ವೇದಿಕೆಗಳಾಗಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಚಲನಚಿತ್ರಗಳ ಇಂತಹ ಪಾತ್ರವನ್ನು ಕಥಾವಸ್ತುವಿನ ಬಲವಾದ ನಿರೂಪಣೆಯ ಮೂಲಕ 'ಡೇರ್ ಡಿವಿಲ್ ಮುಸ್ತಫಾ' ನಿರ್ವಹಿಸಿದೆ.

ಪೂರ್ತಿ ಹಿಂದೂ ವಿದ್ಯಾರ್ಥಿಗಳೇ ಇರುವ ಕಾಲೇಜಿಗೆ ಏಕೈಕ ಮುಸ್ಲಿಮ್ ವಿದ್ಯಾರ್ಥಿ ಮುಸ್ತಫಾ ಪ್ರವೇಶ ಪಡೆದು ಬಂದಾಗ ಮುಸ್ಲಿಮರು ಎಂದರೆ ಸಮಾಜದಲ್ಲಿ ಇರಬಹುದಾದ ತಪ್ಪುಕಲ್ಪನೆಗಳು, ಊಹಾಪೋಹಗಳನ್ನು ಕಾಲೇಜಿನ ವಿದ್ಯಾರ್ಥಿಗಳ ಮಾತಿನ ರೀತಿಯಲ್ಲಿ ಗ್ರಾಫಿಕ್ಸ್‌ನಲ್ಲಿ ಎಳೆ ಎಳೆಯಾಗಿ ತೋರಿಸಲಾಗಿದೆ. ಕೋಮುವಾದದ ವಿಷಜ್ವಾಲೆ ವಿದ್ಯಾರ್ಥಿ ಮತ್ತು ಯುವ ಜನರ ಮನಸ್ಸುಗಳನ್ನು ಘಾಸಿಗೊಳಿಸುತ್ತಿರುವ ಇಂದಿನ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶವನ್ನು ನೀಡಿರುವ ಜೊತೆಗೆ ದೇಶದ ಸಮಗ್ರತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹೋಗುವಲ್ಲಿ ಚಲನಚಿತ್ರಗಳು ವಹಿಸಬಹುದಾದ ಪಾತ್ರವನ್ನು ಈ ಚಿತ್ರ ಮರುವಿಮರ್ಶೆಗೆ ಒಳಪಡಿಸಿದೆ. ತೇಜಸ್ವಿಯವರು ಅಕ್ಷರಗಳ ಮೂಲಕ ಕಟ್ಟಿಕೊಟ್ಟಿದ್ದ ಸಾಹಿತ್ಯವನ್ನು ಅದರ ಗಂಭೀರತೆಯನ್ನು ಕೊಂಚವೂ ತಗ್ಗಿಸದೆ ದೃಶ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿರುವುದು ಈ ಚಿತ್ರದ ವಿಶೇಷವಾಗಿದೆ. ಸ್ವತಃ ತೇಜಸ್ವಿಯವರ ಅಭಿಮಾನಿ ಎಂದು ಹೇಳಿಕೊಂಡಿರುವ ಚಿತ್ರದ ನಿರ್ದೇಶಕರು ಕೋಮುಸೌಹಾದರ್ದ ಪ್ರಾಮುಖ್ಯತೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ನಾಯಕಿ ರಮಾಮಣಿ, ಮುಸ್ತಫಾನ ಮೇಲೆ ಇಟ್ಟುಕೊಂಡಿದ್ದ ಗುಪ್ತ ಪ್ರೀತಿ, ಜಾತಿ ಧರ್ಮಗಳಿಗಿಂತ ಪ್ರೀತಿ ದೊಡ್ಡದು ಅದು ಮಾನವೀಯ ನೆಲೆಯಲ್ಲಿ ಪುಟಿದೇಳುವ ಕಾರಂಜಿ ಎಂಬುದನ್ನು ಎತ್ತಿ ತೋರುತ್ತದೆ. ಸಮಾಜದಲ್ಲಿ ಶಾಂತಿಯನ್ನು ಕದಡಿ ಕೋಮುಗಲಭೆಗಳಿಗೆ ಮತ್ತು ಮಾನವೀಯತೆ ಮರೆಯಾಗಿ ಮನುಷ್ಯ-ಮನುಷ್ಯರ ನಡುವೆ ಅಂತರಗಳು ಹೆಚ್ಚಾಗಲು ಕಾರಣವಾಗಿರುವ ಹಲವಾರು ಅಂಶಗಳನ್ನು ಚಿತ್ರದಲ್ಲಿ ಬಹಳ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಕೋಮುಗಲಭೆಗಳನ್ನು ಸೃಷ್ಟಿಸುವವರು ನಡೆಸುವ ಪಿತೂರಿಗಳು, ಹುಸಿ ಹುನ್ನಾರಗಳು ಮತ್ತು ಹುಚ್ಚು ಮನಸ್ಥಿತಿಯನ್ನು ನೋಡುಗರ ಮುಂದಿಟ್ಟು ಮಾನವ ಪ್ರೀತಿಯೇ ಕೊನೆಯವರೆಗೂ ಉಳಿಯುವ ಶಾಶ್ವತ ದೀವಿಗೆ ಎಂಬುದನ್ನು ಸಾರಿ ಹೇಳಲಾಗಿದೆ.

ಒಬ್ಬ ನಾಯನ ನಟನಿಗೆ ಇರುವಷ್ಟೇ ಅಭಿಮಾನಿಗಳು ಕನ್ನಡ ಪ್ರಮುಖ ಬರಹಗಾರರಲ್ಲೊಬ್ಬರಾದ ತೇಜಸ್ವಿಯವರಿಗೂ ಇದ್ದಾರೆ ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿದ್ದು ತೇಜಸ್ವಿಯವರ ಸುಮಾರು 100 ಜನ ಅಭಿಮಾನಿಗಳು ಸೇರಿ ಹಣ ಹೂಡುವ ಮೂಲಕ ಈ ಚಲನಚಿತ್ರವನ್ನು ನಿರ್ಮಾಣ ಮಾಡಿರುವುದು ಮತ್ತೊಂದು ವಿಶೇಷ. ಚಿತ್ರದ ಹಾಡುಗಳು ಅರ್ಥಗರ್ಭಿತವಾದ ಸಂದೇಶಗಳನ್ನು ನೀಡುವ ಜೊತೆಗೆ ತುಂಬಾ ಸೊಗಸಾಗಿವೆ. ನವನೀತ್ ಶಾಮ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಬೆನ್ನೆಲುಬಾಗಿದೆ. ನಿರೂಪಣೆಯಲ್ಲಿ ನೈಜ ಹಾಸ್ಯವನ್ನು ಸಾಂದರ್ಭಿಕವಾಗಿ ಆದಷ್ಟು ಎಲ್ಲಾ ಕಡೆ ತರುವ ಮೂಲಕ ಚಿತ್ರವನ್ನು ಜೀವಂತವಾಗಿರಿಸುವಲ್ಲಿ ಚಿತ್ರದ ನಿರ್ದೇಶಕರು ಪ್ರಯತ್ನಿಸಿದ್ದಾರೆ.

Similar News